ಬೆಂಗಳೂರು (ಜ.21):  ಶಿವಮೊಗ್ಗ ಜಿಲ್ಲೆಯ ಸಿಗಂದೂರು ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ನಡೆದಿರುವ ಅರಣ್ಯ ಭೂಮಿ ಒತ್ತುವರಿಯ ತೆರವಿಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಒಂದು ತಿಂಗಳ ಒಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ಬುಧವಾರ ನಿರ್ದೇಶಿಸಿತು.

ಸಾಗರ ತಾಲೂಕಿನ ಕೆ.ಎಸ್‌. ಲಕ್ಷ್ಮೀ ನಾರಾಯಣ ಸೇರಿ ಮೂವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.  ಹೈಕೋರ್ಟ್‌ ಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಿದ ಸರ್ಕಾರ ಬುಧವಾರ ನ್ಯಾಯಪೀಠಕ್ಕೆ ವರದಿ ಸಲ್ಲಿಸಿತು.

ನಂತರ ವಾದ ಮಂಡಿಸಿದ ಸರ್ಕಾರಿ ವಕೀಲರು, ಕಳಸವಳ್ಳಿ ಗ್ರಾಮದ ಸರ್ವೇ ಸಂಖ್ಯೆ 65ರಲ್ಲಿ 12 ಎಕರೆ 16 ಗುಂಟೆ ಪ್ರದೇಶವನ್ನು ದೇವಸ್ಥಾನದ ಹೆಸರಲ್ಲಿ ಒತ್ತುವರಿ ಮಾಡಲಾಗಿದೆ. ಆ ಜಾಗದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ, ರೆಸ್ಟೋರೆಂಟ್‌ ಸೇರಿ ಹಲವು ಕಟ್ಟಡ ನಿರ್ಮಿಸಲಾಗಿದೆ. ನ್ಯಾಯಾಲಯದ ನಿರ್ದೇಶನ ಮೇರೆಗೆ ತಹಸೀಲ್ದಾರ್‌, ಸರ್ವೇ ನಡೆಸಿ ಒತ್ತುವರಿ ಜಾಗ ಗುರುತಿಸಿದ್ದಾರೆ. ಹಾಗೆಯೇ, ಅಕ್ರಮವಾಗಿ ನಡೆಸುತ್ತಿರುವ ಕಟ್ಟಡ ಕಾಮಗಾರಿಯನ್ನೂ ಸ್ಥಗಿತಗೊಳಿಸಲಾಗಿದೆ ಎಂದರು.

ಸಿಗಂದೂರು ಚೌಡೇ​ಶ್ವ​ರಿ ದೇಗುಲ ವಿವಾದ : ಭಾರೀ ವಿರೋಧ ..

ಆ ವರದಿ ದಾಖಲಿಸಿಕೊಂಡ ಪೀಠ, ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವುದು ಯಾರು, ಅದು ಯಾರ ಸ್ವಾಧೀನದಲ್ಲಿದೆ, ಒತ್ತುವರಿ ತೆರವಿಗೆ ಕೈಗೊಳ್ಳುವ ಕ್ರಮಗಳೇನು ಎಂಬ ಬಗ್ಗೆ ಒಂದು ತಿಂಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿತು.

ಇದೇ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ರೆಸ್ಟೋರೆಂಟ್‌ ಹಾಗೂ ಕಲ್ಯಾಣ ಮಂಟಪಗಳಿಂದ ಸಂಗ್ರಹಿಸಲಾಗಿರುವ ಬಾಡಿಗೆ ಹಣವನ್ನು ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದರು.

ಕೋರ್ಟ್‌ ಮಧ್ಯಸ್ಥಿಕೆ : ಸಿಗಂದೂರು ದೇಗುಲ ವಿವಾದ ಸುಖಾಂತ್ಯ ...

ದೇವಾಲಯದ ಟ್ರಸ್ಟಿಪರ ವಕೀಲರು, ಸರ್ಕಾರದ ವರದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಸರ್ಕಾರದ ವರದಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ದೇವಸ್ಥಾನದ ಟ್ರಸ್ಟಿಹೇಳಿದ್ದಾರೆ. ಅವರು ಆಕ್ಷೇಪಣೆ ಸಲ್ಲಿಸಿದ ಬಳಿಕ ಈ ಕುರಿತು ತೀರ್ಮಾನಿಸಲಾಗುವುದು ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿ ವಿಚಾರಣೆಯನ್ನು ಫೆ.23ಕ್ಕೆ ಮುಂದೂಡಿತು.