ಸರ್ಕಾರಿ ಆಸ್ಪತ್ರೆ ಜನತೆಯ ಉಪಯೋಗಕ್ಕಾಗಲಿ: ಷಡಕ್ಷರಿ
ಮನುಷ್ಯನಿಗೆ ಆರೋಗ್ಯ ಮತ್ತು ಶಿಕ್ಷಣ ಅತಿಮುಖ್ಯವಾಗಿದೆ. ನಾನು ಶಾಸಕನಾಗಿ ಈ ಸೌಲಭ್ಯವನ್ನು ತಾಲೂಕಿನ ಜನತೆಗೆ ಅಚ್ಚುಕಟ್ಟಾಗಿ ಒದಗಿಸಿಕೊಡದಿದ್ದರೆ ಜನತೆ ನನ್ನನ್ನು ಕ್ಷಮಿಸುವುದಿಲ್ಲವಾದ್ದರಿಂದ ನಿಮಗೆ ಸರ್ಕಾರದ ಕಡೆಯಿಂದ ಅಗತ್ಯ ಸೌಲಭ್ಯಗಳ ಕೊರತೆ ಇದ್ದರೆ ನನಗೆ ಮಾಹಿತಿ ನೀಡಿ, ಸಹಕಾರ ಪಡೆಯುವೆ. ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕೆಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಿಪಟೂರು : ಮನುಷ್ಯನಿಗೆ ಆರೋಗ್ಯ ಮತ್ತು ಶಿಕ್ಷಣ ಅತಿಮುಖ್ಯವಾಗಿದೆ. ನಾನು ಶಾಸಕನಾಗಿ ಈ ಸೌಲಭ್ಯವನ್ನು ತಾಲೂಕಿನ ಜನತೆಗೆ ಅಚ್ಚುಕಟ್ಟಾಗಿ ಒದಗಿಸಿಕೊಡದಿದ್ದರೆ ಜನತೆ ನನ್ನನ್ನು ಕ್ಷಮಿಸುವುದಿಲ್ಲವಾದ್ದರಿಂದ ನಿಮಗೆ ಸರ್ಕಾರದ ಕಡೆಯಿಂದ ಅಗತ್ಯ ಸೌಲಭ್ಯಗಳ ಕೊರತೆ ಇದ್ದರೆ ನನಗೆ ಮಾಹಿತಿ ನೀಡಿ, ಸಹಕಾರ ಪಡೆಯುವೆ. ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕೆಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಡಳಿತಾಧಿಕಾರಿ ಟಿ.ಎನ್.ಅಶೋಕ್‌ರವರ ಅಧ್ಯಕ್ಷತೆಯಲ್ಲಿ ನಡೆದ ಲಿಂಕ್ ಡಾಕ್ಯೂಮೆಂಟ್ ಕ್ರಿಯಾ ಯೋಜನೆಯ ಅನುಮೋದನೆ ಬಗ್ಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಡವರು, ಮಧ್ಯಮ ವರ್ಗದ ಜನರಿಗಾಗಿಯೇ ಅಗತ್ಯ ಸೌಲಭ್ಯಗಳುಳ್ಳ ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆಸ್ಪತ್ರೆಗಳಿವೆಯಾದರೂ ಜನರಿಗೆ ಉಪಯೋಗವಾಗುತ್ತಿಲ್ಲವೆಂಬ ದೂರುಗಳಿವೆ. ಒಬ್ಬ ಮನುಷ್ಯ ಉತ್ತಮವಾಗಿ ಜೀವನ ನಡೆಸಲು ಆರೋಗ್ಯ ಮತ್ತು ಶಿಕ್ಷಣದ ಅವಶ್ಯಕತೆ ಇರುವುದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಸೌಲಭ್ಯಗಳ ಕೊರತೆ ಇದ್ದರೆ ಖುದ್ದು ನನ್ನ ಗಮನಕ್ಕೆ ತರುವ ಮೂಲಕ ರೋಗಿಗಳಿಗೆ ಉತ್ತಮ ಸೇವೆ ಕಲ್ಪಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್‌ಗೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಮಾತನಾಡಿ, ತಾಲೂಕಿನ ಬಿಳಿಗೆರೆ ಮತ್ತು ಗಾಂಧಿನಗರ, ದಸರೀಘಟ್ಟಆರೋಗ್ಯ ಕೇಂದ್ರಕ್ಕೆ ವೈದ್ಯರ ಅವಶ್ಯಕತೆ ಇದೆ ಎಂದಾಗ ಶಾಸಕರು ಮೊದಲು ಸಾರ್ವಜನಿಕ ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಈ ಬಗ್ಗೆ ನನಗೆ ದೂರುಗಳು ಬರುತ್ತಿವೆ. ಸ್ವಚ್ಛತೆ ಕೊರತೆ ಇದ್ದರೆ ರೋಗಿಗಳು ಬರಲು ಹೆದರುತ್ತಾರೆ ಎಂದಾಗ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್ ಮಾತನಾಡಿ, ಸಿಬ್ಬಂದಿ ಕೊರತೆಯಿದ್ದರೂ ಆಸ್ಪತ್ರೆಯನ್ನು ಪ್ರತಿದಿನ ಸ್ವಚ್ಛತೆ ಮಾಡುತ್ತೇವೆ. ಇದನ್ನು ಬಿಟ್ಟರೆ ಒಪಿಡಿಗೆ ಇಬ್ಬರು ಹೃದ್ರೋಗ ಹಾಗೂ ಜನರಲ್ ಫಿಜಿಶಿಯನ್ ಹಾಗೂ ಅನಸ್ತೇಶಿಯಾ ವೈದ್ಯರ ಕೊರತೆ ಇದೆ. ಬೀದಿ ನಾಯಿ ಕಡಿತಕ್ಕೆ ಚಿಕಿತ್ಸೆಗಾಗಿ ದುಬಾರಿ ಹಣ ಖರ್ಚಾಗುತ್ತಿದ್ದು, ಬಡವರು ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಶಾಸಕರು ನಗರಸಭೆ ಪೌರಾಯುಕ್ತರಿಗೆ ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಪೌರಾಯಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ ಬೀದಿ ನಾಯಿಗಳ ಕಡಿವಾಣಕ್ಕೆ ಸಂತಾನ ಹರಣ ಚಿಕಿತ್ಸೆಗಾಗಿ ಈಗಾಗಲೇ ಟೆಂಡರ್ ಹಾಕಿದ್ದರೂ ಯಾರೂ ಮುಂದೆ ಬರುತ್ತಿಲ್ಲ. ಯಾವ ರೀತಿ ಕ್ರಮಕೈಗೊಳ್ಳಬೇಕೆಂಬುದು ತಿಳಿಯದಂತಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವೈ.ಎನ್. ಚನ್ನಬಸಪ್ಪ ಮಾತನಾಡಿ, ಪ್ರಸ್ತುತ ವರ್ಷ ಸರ್ಕಾರಿ ಶಾಲೆಗಳಲ್ಲಿ ಉತ್ತಮ ದಾಖಲಾತಿಯಾಗಿದ್ದು ಸಮವಸ್ತ್ರ, ಪಠ್ಯಪುಸ್ತಕಗಳನ್ನು ತಾಲೂಕಿನಾದ್ಯಂತ ಶಾಲೆಗಳಿಗೆ ವಿತರಣೆ ಮಾಡಲಾಗಿದೆ ಎಂದರು. ಆಗ ಶಾಸಕರು ಹೋಟೆಲ್, ಕಾರ್ಖಾನೆ, ವರ್ಕ್ಶಾಪ್‌ಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಇದ್ದು ಅವರನ್ನು ಶಾಲೆಗೆ ಕರೆತರುವ ಕೆಲಸವನ್ನು ಬಿಇಒ ಮತ್ತು ಕಾರ್ಮಿಕ ಇಲಾಖೆ ಮಾಡಬೇಕು. ಯಾವ ಮಕ್ಕಳು ಶಾಲೆಯಿಂದ ಹೊರ ಉಳಿಯಬಾರದು, ಬೇರೆ ರಾಜ್ಯಗಳಿಂದ ಬಂದ ಮಕ್ಕಳಿಗೂ ನಮ್ಮ ರೀತಿಯ ಶಿಕ್ಷಣವನ್ನೇ ಕೊಡಿ ಎಂದರು.
ಬಡ ಮಕ್ಕಳಿಗಾಗಿಯೇ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದ್ದು ಈಗಾಗಲೇ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಎಲ್ಲಾ ಮಕ್ಕಳಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಬೇಕು. ಕೊಠಡಿಗಳ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಹಿಂದುಳಿದ ವರ್ಗ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿ ಮಾತನಾಡಿ, ಜಲಜೀವನ್ ಮಿಷನ್‌ಯಡಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆಗಾಗಿ ಕಾಮಗಾರಿಗಳು ಬರದಿಂದ ನಡೆಯುತ್ತಿವೆ ಎಂದಾಗ ಶಾಸಕರು ಎತ್ತಿನಹೊಳೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇನೆ. ಈ ಬಗ್ಗೆ ನನಗೆ ಮಾಹಿತಿ ಕೊಡಬೇಕೆಂದು ಕೇಳಿದರು.
ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಟಿ.ಎನ್. ಅಶೋಕ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಆರೋಗ್ಯ ಕೇಂದ್ರಕ್ಕೆ ಸೌಲಭ್ಯದ ಕೊರತೆ ಇದ್ದರೆ ನನಗೆ ತಿಳಿಸಿ
ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಆಸ್ಪತ್ರೆ ಸ್ವಚ್ಛವಾಗಿಟ್ಟುಕೊಳ್ಳಿ
ಶಾಲೆ ಬಿಟ್ಟಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಿ
ಬೇರೆ ರಾಜ್ಯದಿಂದ ಬಂದ ಮಕ್ಕಳಿಗೂ ನಮ್ಮ ರೀತಿಯ ಶಿಕ್ಷಣವನ್ನೇ ಕೊಡಿ