Mysuru : ಪರಿಶಿಷ್ಟರ ಅನುದಾನ ಕಡಿತಗೊಳಿಸಿದ ಸರ್ಕಾರ

ಪ. ಜಾತಿ ಮತ್ತು ಪ.ಪಂಗಡಗಳಿಗೆ ಮೀಸಲಾಗಿರುವ ಅನುದಾನವನ್ನು ದುರುದ್ದೇಶ ಪೂರಕವಾಗಿ ಕಡಿಮೆ ಮಾಡಿದೆ ಮತ್ತು ಸಾವಿರಾರು ಕೋಟಿ ಅನುದಾನವನ್ನು ಇತರೆ ಇಲಾಖೆಗೆ ವರ್ಗಾಯಿಸಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆರೋಪಿಸಿದ್ದಾರೆ.

Govt cut off  Scheduled Castes grants  Says Mahadevappa snr

 ಮೈಸೂರು (ಅ.14) ಪ. ಜಾತಿ ಮತ್ತು ಪ.ಪಂಗಡಗಳಿಗೆ ಮೀಸಲಾಗಿರುವ ಅನುದಾನವನ್ನು ದುರುದ್ದೇಶ ಪೂರಕವಾಗಿ ಕಡಿಮೆ ಮಾಡಿದೆ ಮತ್ತು ಸಾವಿರಾರು ಕೋಟಿ ಅನುದಾನವನ್ನು ಇತರೆ ಇಲಾಖೆಗೆ ವರ್ಗಾಯಿಸಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆರೋಪಿಸಿದ್ದಾರೆ.

ಪ.ಜಾತಿಯ(SC) ಕೆಲವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿ, ಅವರಿಗೆ ಸರಿಯಾಗಿ ಸಲ್ಲಬೇಕಾದ ಅವಕಾಶ ನೀಡಲಿಲ್ಲ. ಹಿಂದೆ ವಿ.ಪಿ. ಸಿಂಗ್‌ ಅವರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ (Resarvation)  ಪ್ರಸ್ತಾಪ ಬಂದಾಗ ಮಂಡಲ್‌ ವರದಿಯ ವಿರುದ್ಧ ಕಮಂಡಲ ಹಿಡಿದು ರಥಯಾತ್ರೆ ಮಾಡಿರುವುದು ಇದೇ ಬಿಜೆಪಿಗರು ಎಂದು ಅವರು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ನೇಮಕಗೊಂಡ ಎಲ್‌.ಜಿ. ಹಾವನೂರು ಅವರ ಆಯೋಗದ ವಿರುದ್ಧ ಬಿಜೆಪಿಗರು ಏನೇನೆಲ್ಲಾ ಮಾತನಾಡಿದ್ದರು ಎಂಬುದಕ್ಕೆ ಇಡೀ ಕರ್ನಾಟಕವೇ ಸಾಕ್ಷಿಯಾಗಿದೆ. ಇಲ್ಲಿವರೆಗೂ ಆರ್‌ಎಸ್‌ಎಸ್‌ನವರು ಮೀಸಲಾತಿಯನ್ನು ಎಷ್ಟರ ಮಟ್ಟಿಗೆ ವಿರೋಧಿಸುತ್ತಾರೆ ಎಂಬುದು ನಮಗೆಲ್ಲಾ ಗೊತ್ತೇ ಇದೆ. ದಲಿತರಿಗೆ ಮೀಸಲಾತಿ ನೀಡಿದರು ಎಂಬ ಕಾರಣಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಚೋಟಾ ಬೀಮ್‌ ಎಂದು ಅಣಕಿಸುವ ಕೀಳು ಮಟ್ಟದ ಮನಸ್ಥಿತಿಯನ್ನು ಆರ್‌ಎಸ್‌ಎಸ್‌ ಬೆಳೆಸಿದೆ ಎಂದು ಅವರು ಆರೋಪಿಸಿದ್ದಾರೆ.

ಎನ್‌ಸಿಆರ್‌ಬಿ ವರದಿಯಂತೆ ಭಾರತದಲ್ಲಿ ದಲಿತರ ಮೇಲೆ ನಡೆಯದಿರುವ ಹಲ್ಲೆಗಳೇ ಇಲ್ಲ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೇ ದಲಿತ ಯುವತಿಯನ್ನು ಅತ್ಯಾಚಾರ ಎಸಗಿ ರಾತ್ರೋ ರಾತ್ರಿ ಅವಳನ್ನು ಸುಟ್ಟು ಹಾಕಿದ್ದಾರೆ. ಹೀಗಿರುವಾಗ ಬಿಜೆಪಿಗರು ನಾವು ದಲಿತರ ಪರ ಎಂದು ಹೇಳುವುದು ತಮಾಷೆಯಲ್ಲವೇ? ಇಷ್ಟುದಿನ ಇಲ್ಲದ ಒಳ ಮೀಸಲಾತಿ ಪ್ರಸ್ತಾಪ ಚುನಾವಣೆಗೆ 6 ತಿಂಗಳು ಇರುವಾಗ ಏಕೆ? ಈ ಪ್ರಸ್ತಾಪ ತರಲು ಇಷ್ಟುದಿನ ಬೇಕಿತ್ತೇ? ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿ ಕೂಗು ಎಬ್ಬಿಸುತ್ತಿದ್ದ ಕಾರಜೋಳ ಅಂತವರು, ಸಚಿವರಾದ ಮೇಲೆ ಯಾವ ಜನಪರ ಕಾಯ್ದೆಯನ್ನೂ ಜಾರಿಗೊಳಿಸದೆ ಶೇ. 40ರಷ್ಟುಲಂಚದಲ್ಲಿ ಮುಳುಗಿ, ಪ.ಜಾತಿ, ಪ.ಪಂಗಡ ಅನುದಾನವು ಬೇರೆ ಕಡೆ ಹೋಗುವಾಗ, ಅದರ ಬಗ್ಗೆ ಬಾಯಿ ಬಿಡದೇ ಈಗ ಚುನಾವಣೆ ಸಂದರ್ಭದಲ್ಲಿ ಒಳ ಮೀಸಲಾತಿ ಚರ್ಚೆಯನ್ನು ಮುಂದು ಬಿಡುತ್ತಿದ್ದರೆ ಇದು ಇತರರಿಗೆ ಅರ್ಥವಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಈಗಾಗಲೇ ಸಲ್ಲಿಕೆಯಾಗಿದ್ದ ನಾಗಮೋಹನ್‌ ದಾಸ್‌ ಅವರ ವರದಿಯನ್ನು ಒಪ್ಪಿಕೊಳ್ಳಲು ಮೂರು ವರ್ಷ ಬೇಕಾಗಿತ್ತೇ? ಅಲ್ಲದೇ ಇದೀಗ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೂಡಿದ ಪ. ಜಾತಿ ಮತ್ತು ಪ.ಪಂಗಡದ ಜನ ಸಮುದಾಯಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದನ್ನೇ ಇವರು ಚುನಾವಣೆ ಹೊತ್ತಿನಲ್ಲಿ ಮುನ್ನಲೆಗೆ ತಂದಿರುವುದು ದಲಿತರನ್ನು ಭಾವನಾತ್ಮಕವಾಗಿ ವಂಚಿಸುವ ತಂತ್ರವಾಗಿದೆ ಎಂದು ಅವರು ದೂರಿದ್ದಾರೆ.

ಪ.ಜಾತಿ, ಪ.ಪಂಗಡಕ್ಕೆ ಎಸ್‌ಇಪಿ, ಟಿಎಸ್‌ಪಿ ಕಾಯ್ದೆ, ಬಡ್ತಿ ಮೀಸಲಾತಿ ಕಾಯ್ದೆ, ಗುತ್ತಿಗೆ ಮೀಸಲಾತಿ ಕಾಯ್ದೆ, ಮೂಲ ಸೌಲಭ್ಯಗಳ ಹೆಚ್ಚಳ, ನಿಗಮಗಳಿಗೆ ಅತಿ ಹೆಚ್ಚಿನ ಅನುದಾನವನ್ನು ನೀಡಿದ್ದು ಸಿದ್ದರಾಮಯ್ಯ ಅವರ ಸರ್ಕಾರ. ಯಡಿಯೂರಪ್ಪ ಅಧಿಕಾರದಿಂದ ಇಳಿದ ನಂತರದಲ್ಲಿ ಬಿಜೆಪಿಯು ಸಂಪೂರ್ಣ ಆರ್‌ಎಸ್‌ಎಸ್‌ ಕೈಗೆ ಹೋಗಿದೆ, ಇಂತಹ ಸಂದರ್ಭದಲ್ಲಿ ಅಂಬೇಡ್ಕರ್‌ ಮೀಸಲಾತಿಯ ವಿರೋಧಿಗಳಾ¨ ಆರ್‌ಎಸ್‌ಎಸ್‌ನವರ ಮೀಸಲಾತಿ ಹೆಚ್ಚಳ ಎಂಬ ನಾಟಕವನ್ನು ನಂಬಿ ಅವರಿಗೆ ದಲಿತರು ಮತ ಹಾಕಿದರೆ ತಮಗೆ ಸಿಕ್ಕಿದ ಅಧಿಕಾರದ ಬಲದಿಂದ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸುಳ್ಳಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಶ್ರಮಿಕರು ಮತ್ತು ಭಾವನಾತ್ಮಕ ಹಾಗೂ ಸೌಹಾರ್ದಯುತ ಜೀವಿಗಳಾದ ದಲಿತರು ಚುನಾವಣೆ ಬರುವ ತನಕ ಮಾತ್ರವೇ ಮಾಡುತ್ತಿರುವ ಈ ಆರ್‌ಎಸ್‌ಎಸ್‌ ಪ್ರೇರಿತವಾದ ಮೀಸಲಾತಿ ನಾಟಕವನ್ನು ಅರ್ಥ ಮಾಡಿಕೊಂಡು ದಲಿತರೆಂದರೆ ಮೋಸ ಹೋಗಲು ಇರುವ ಜನರಲ್ಲ ಎಂಬುದನ್ನು ಸಾಬೀತುಪಡಿಸಿ, ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದವರನ್ನು ತಾಳ್ಮೆಯಿಂದ ಗುರುತಿಸಿ ಅವರಿಗೆ ಮನ್ನಣೆ ನೀಡಬೇಕು.

ಇಲ್ಲದೇ ಇದ್ದರೆ ಮೀಸಲಾತಿ ಹೆಚ್ಚಳ ಎಂದು ಆರಂಭವಾಗಿರುವ ಇವರ ನಾಟಕವು, ಮೀಸಲಾತಿಯ ನಿಷೇಧ ಎಂಬುದರಲ್ಲಿ ಮುಕ್ತಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios