ಶಿವಮೊಗ್ಗ(ಜು.23): ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ರದ್ದುಪಡಿಸಿ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ಕೊರೋನಾ ಸೋಂಕಿನ ಹರಡುವಿಕೆಯ ಭೀಕರ ಪರಿಣಾಮದಿಂದಾಗಿ ಉದ್ಯೋಗ, ವೇತನವಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದುವರೆಗೂ 8 ಜನ ಅತಿಥಿ ಉಪನ್ಯಾಸಕರು ಉದ್ಯೋಗ ಭದ್ರತೆ, ನಿಗದಿತ ಸಮಯಕ್ಕೆ ವೇತನ ದೊರಕದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಲಾಕ್‌ಡೌನ್‌ ಸಮಯದಲ್ಲಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಕರ್ತವ್ಯದ ಅವಧಿ ಎಂದು ಪರಿಗಣಿಸಿ, ಯಾರನ್ನು ಕೆಲಸದಿಂದ ತೆಗೆಯದಂತೆ, ವೇತನ ಮತ್ತು ಇಎಸ್‌ಐ-ಪಿಎಫ್‌ ನೀಡಬೇಕು ಎಂದು ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಶಾಸನಬದ್ದ ಸಂಸ್ಥೆಗಳಿಗೆ ಆದೇಶಿಸಿರುತ್ತದೆ. ದುರಂತವೆಂದರೆ ಸ್ವತಃ ಸರ್ಕಾರವೇ ಈ ನೀತಿ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗಾಯದ ಮೇಲೆ ಬರೆ ಎಳೆದಂತೆ ಕಾಲೇಜು ಶಿಕ್ಷಣ ಇಲಾಖೆ ಕರಡು ನೇಮಕಾತಿ ಅಧಿಸೂಚನೆಗೆ ಲಿಖಿತ ಆಕ್ಷೇಪಣೆ, ಸಲಹೆ ಸಲ್ಲಿಸಿದರೂ ಅದನ್ನು ಪರಿಗಣಿಸದೆ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಸಾವಿರಾರು ಅತಿಥಿ ಉಪನ್ಯಾಸಕರ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ದೂರಿದರು.

ಲಾಕ್‌ಡೌನ್‌ ಅವಧಿಯಲ್ಲಿ ವೇತನ ನೀಡದೆ ಇರಲು ಕೋವಿಡ್‌ ಅರ್ಥಿಕ ಸಂಕಷ್ಟದ ನೆಪ ಹೇಳುವ ಸರ್ಕಾರ ತೆರೆಮರೆಯಲ್ಲಿ ನೇಮಕಾತಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಅನೇಕ ವರ್ಷಗಳಿಂದ ಕನಿಷ್ಟವೇತನ ನೀಡಿ ದುಡಿಸಿಕೊಂಡು ಬಂದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಖಾಯಂಮಾತಿಗೊಳಿಸಿ ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳ ಮಾದರಿಯಲ್ಲಿ ಭದ್ರತೆ ನೀಡುವಂತೆ ಮನವಿ ಮಾಡಿದರೆ, ಕಾನೂನು ತೊಡಕಿನ ನೆಪ ಹೇಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ವಿದ್ಯಾರ್ಹತೆ, ಬೋಧನಾ ಕೌಶಲ್ಯ, ಸೇವಾ ಅನುಭವುಳ್ಳವರನ್ನು ಈ ಹಿಂದೆ ವೃತ್ತಿಪರ ಶಾಲಾ ಕಾಲೇಜು ಉಪನ್ಯಾಸಕರನ್ನು ಕಾಯಂ ಮಾಡಿದ ಮಾದರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವಾ ವಿಲೀನಗೊಳಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅಪ್ಪನ ಬೆಂಬಲವಿದ್ದರೂ, ಇಲ್ಲದ ಅವಕಾಶ, ಟಾಲಿವುಡ್‌ನತ್ತ ಜಾನ್ವಿ ಮುಖ

ಅತಿಥಿ ಉಪನ್ಯಾಸಕರ ಸೇವಾ ವಿಲೀನಗೊಳಿಸಲು ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಬೇಕು, ನೇಮಕಾತಿ ಅಧಿಸೂಚನೆ ರದ್ದುಪಡಿಸಬೇಕು, ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಹರಿಯಾಣ, ಪಶ್ಚಿಮಬಂಗಾಳ ಮಾದರಿಯಲ್ಲಿ ಉದ್ಯೋಗ ಭದ್ರತೆ ಘೋಷಿಸಿ ಸೇವಾ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.

ಲಾಕ್‌ಡೌನ್‌ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಕೂಡಲೇ ವೇತನ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ನೊಂದ ಕುಟುಂಬಗಳಿಗೆ 10 ಲಕ್ಷ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸಮಿತಿ ರಾಜ್ಯಾಧ್ಯಕ್ಷ ಡಾ.ಎಚ್‌.ಸೋಮಶೇಖರ ಶಿಮೊಗ್ಗಿ ಮೊದಲಾದವರು ಇದ್ದರು.