ವಿಜಯನಗರ ಜಿಲ್ಲೆಗೂ 371 ಜೆ ಸ್ಥಾನಮಾನ: ರಾಜ್ಯಪಾಲರ ಆದೇಶ
ಕಲ್ಯಾಣ ಕರ್ನಾಟಕದಂತೆ ಸೌಲಭ್ಯ| ಸಚಿವ ಆನಂದ್ ಸಿಂಗ್ ಹರ್ಷ| ರಾಜ್ಯಪಾಲರ ಆದೇಶದಿಂದ ಹೊಸ ಜಿಲ್ಲೆ ಅಭಿವೃದ್ಧಿ ಮಾಡಲು ಮತ್ತಷ್ಟು ಶಕ್ತಿ| ರಾಜ್ಯಪಾಲರ ಆದೇಶದಿಂದ ಬಹುದಿನಗಳ ಕನಸು ಸಾಕಾರ| ಈವರೆಗೆ ಆರು ಜಿಲ್ಲೆಗಳು 371ಜೆ ವ್ಯಾಪ್ತಿಗೆ ಬರುತ್ತಿದ್ದವು. ತಿದ್ದುಪಡಿ ಬಳಿಕ ಏಳು ಜಿಲ್ಲೆಗಳಾಗಿವೆ|
ಬೆಂಗಳೂರು/ಹೊಸಪೇಟೆ(ಫೆ.26): ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಗೆ ಸಂವಿಧಾನದ 371ಜೆ ಅನ್ವಯ ವಿಶೇಷ ಸ್ಥಾನಮಾನ ಸಿಗಲಿದೆಯೇ ಎಂಬ ಅನುಮಾನ ದೂರವಾಗಿದ್ದು, ವಿಜಯನಗರ ಜಿಲ್ಲೆಯನ್ನು 371ಜೆ ಗೆ ಸೇರಿಸಿ ರಾಜ್ಯಪಾಲರು ಆದೇಶಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ರಚನೆ ವೇಳೆ ಹೊರಡಿಸಿರುವ ಕೆಲ ಅಂಶಗಳಿಗೆ ಈ ಸಂಬಂಧ ತಿದ್ದುಪಡಿ ಮಾಡಿ ವಿಜಯನಗರ ಜಿಲ್ಲೆಯನ್ನು ಸೇರ್ಪಡೆಗೊಳಿಸಲಾಗಿದೆ. ಈವರೆಗೆ ಆರು ಜಿಲ್ಲೆಗಳು 371ಜೆ ವ್ಯಾಪ್ತಿಗೆ ಬರುತ್ತಿದ್ದವು. ತಿದ್ದುಪಡಿ ಬಳಿಕ ಏಳು ಜಿಲ್ಲೆಗಳಾಗಿವೆ.
ಬಳ್ಳಾರಿ ಜಿಲ್ಲೆಯ ವಿಭಜನೆಗೆ ಹೆಚ್ಚಿದ ವಿರೋಧ
ಆನಂದ್ ಸಿಂಗ್ ಹರ್ಷ:
ವಿಜಯನಗರ ಜಿಲ್ಲೆಯನ್ನು 371ಜೆ ಗೆ ಸೇರಿಸಿ ರಾಜ್ಯಪಾಲರು ಆದೇಶಿಸಿರುವುದಕ್ಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಆದೇಶ ಹೊರಡಿಸಿರುವುದರಿಂದ ನಮ್ಮ ಬಹುದಿನಗಳ ಕನಸು ಸಾಕಾರಗೊಂಡಿದೆ. ಈ ನೂತನ ಆದೇಶದಿಂದ ಕಲ್ಯಾಣ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನಮಾನವನ್ನು ಇನ್ನು ಮುಂದೆ ವಿಜಯನಗರ ಜಿಲ್ಲೆ ಕೂಡ ಪಡೆಯಲಿದೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ಆದೇಶದಿಂದ ಹೊಸ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಹೊರಟಿರುವ ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಐತಿಹಾಸಿಕತೆಯ ಸಂಕೇತವಾಗಿರುವ ವಿಜಯನಗರವನ್ನು ಅಭಿವೃದ್ಧಿ ಮಾಡಿ, ಮಾದರಿ ಜಿಲ್ಲೆಯನ್ನಾಗಿಸಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸಲು ನಮ್ಮ ಪ್ರಯತ್ನ ಎಂದೆಂದಿಗೂ ಪ್ರಾಮಾಣಿಕವಾಗಿರುತ್ತದೆ. ಹೀಗಾಗಿ ವಿಶೇಷ ಸ್ಥಾನದಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಪುಷ್ಟಿ ಬಂದಂತಾಗಿದೆ. ಜನತೆಯ ದಶಕಗಳ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಮತ್ತು 371ಜೆ ಗೆ ಸೇರಿಸಿ ಆದೇಶಿಸಿದ ರಾಜ್ಯಪಾಲರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.