ಬೆಂಗಳೂರು(ಮೇ.01): ಅಡುಗೆ ಅನಿಲ ಸಂಪರ್ಕ ಹೊಂದಿದ್ದರೂ ಸದ್ಯದ ಲಾಕ್‌ಡೌನ್‌ ಪರಿಣಾಮ ಆದಾಯವಿಲ್ಲದೆ ಗ್ಯಾಸ್‌ ಸಿಲಿಂಡರ್‌ ದರ ಪಾವತಿಸಲು ಅಸಮರ್ಥರಾಗಿರುವ ಕುಟುಂಬಗಳಿಗೆ ಒಂದು ಬಾರಿಗೆ ಮಾತ್ರ ಒಂದು ಸಿಲಿಂಡರ್‌ಗೆ ಸಬ್ಸಿಡಿ ರೂಪದಲ್ಲಿ ನೆರವು ನೀಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. 

ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಈ ಮಾಹಿತಿ ನೀಡಿದೆ.

ಕೊರೋನಾ ವಿರುದ್ಧ ಹೋರಾಟ: ಮಹಾಮಾರಿ ವೈರಸ್‌ ಕೊಲ್ಲಲು ಕನ್ನಡಿಗನಿಂದ ಸಿಕ್ತಾ ಔಷಧಿ..?

ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆ ಮತ್ತುಸ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ವ್ಯಾಪ್ತಿಗೆ ಒಳಪಡದ ಅನೇಕ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಸದ್ಯದ ಲಾಕ್‌ಡೌನ್‌ ಪರಿಣಾಮವಾಗಿ ಆದಾಯವಿಲ್ಲದ ಕಾರಣ ಆ ಕುಟುಂಬಗಳಿಗೆ ಸಿಲಿಂಡರ್‌ ದರ ಪಾವತಿಸಲು ಸಾಧ್ಯವಿಲ್ಲದಿರಬಹುದು. ಹಾಗಾಗಿ, ಇಂತಹ ಕುಟುಂಬಗಳಿಗೆ ಒಂದು ಬಾರಿಗೆ ಮಾತ್ರ ಒಂದು ಸಿಲಿಂಡರ್‌ಗೆ ಸಬ್ಸಿಡಿ ರೂಪದಲ್ಲಿ ನೆರವು ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಏ.24ರಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಹೈಕೋರ್ಟ್‌ ನಿರ್ದೇಶನದಂತೆ ಅಶಕ್ತ ಕುಟುಂಬಗಳಿಗೆ ಒಂದು ಸಿಲಿಂಡರ್‌ ಖರೀದಿಗೆ ಸಬ್ಸಿಡಿ ನೀಡುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆ ಪರಿಶೀಲನೆಯಲ್ಲಿದೆ. ಆದಷ್ಟುಬೇಗ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು.