Asianet Suvarna News Asianet Suvarna News

ಬೆಂಗಳೂರು: 5ನೇ ದಿನವೂ ಸರ್ಕಾರ ಮೌನ, ಅಂಗನವಾಡಿ ನೌಕರರು ಗರಂ

ಸೋಮವಾರದಿಂದಲೂ ರಸ್ತೆಯಲ್ಲಿ ಮಲಗಿರುವ ಅಂಗನವಾಡಿ ಕಾರ್ಯಕರ್ತೆಯರು ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯವಿಲ್ಲದೇ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಚಿಕ್ಕ ಮಕ್ಕಳೊಂದಿಗೆ ರಸ್ತೆಯಲ್ಲೇ ಮಗಿದ್ದಾರೆ. ಐದು ದಿನಗಳಾದರೂ ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ. ಈ ಹಿನ್ನೆಲೆ ‘ಸರ್ಕಾರ ಸತ್ತು ಹೋಗಿದೆ, ನಮಗೆ ಈ ಅಮಾನವೀಯ ಸರ್ಕಾರ ಬೇಡ’ ಎಂದು ಧಿಕ್ಕಾರ ಕೂಗಿದರು. 

Government of Karnataka Not Respond to Demands of Anganwadi Workers grg
Author
First Published Jan 28, 2023, 8:59 AM IST

ಬೆಂಗಳೂರು(ಜ.28):  ವೇತನ ಹೆಚ್ಚಳ, ಶಿಕ್ಷಕಿಯರ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸತತ ಐದನೇ ದಿನವೂ ಮುಂದುವರೆದಿದ್ದು, ಅಹವಾಲು ಸ್ವೀಕರಿಸಲು ಬಾರದ ಸರ್ಕಾರಕ್ಕೆ ಧಿಕ್ಕಾರ ಕಾರ್ಯಕರ್ತತೆಯರು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರದಿಂದಲೂ ರಸ್ತೆಯಲ್ಲಿ ಮಲಗಿರುವ ಅಂಗನವಾಡಿ ಕಾರ್ಯಕರ್ತೆಯರು ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯವಿಲ್ಲದೇ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಚಿಕ್ಕ ಮಕ್ಕಳೊಂದಿಗೆ ರಸ್ತೆಯಲ್ಲೇ ಮಗಿದ್ದಾರೆ. ಐದು ದಿನಗಳಾದರೂ ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ. ಈ ಹಿನ್ನೆಲೆ ‘ಸರ್ಕಾರ ಸತ್ತು ಹೋಗಿದೆ, ನಮಗೆ ಈ ಅಮಾನವೀಯ ಸರ್ಕಾರ ಬೇಡ’ ಎಂದು ಧಿಕ್ಕಾರ ಕೂಗಿದರು. ‘ನಾವು ಇಲ್ಲಿಯೇ ಪ್ರಾಣ ಬಿಡುತ್ತೇವೆ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾತ್ರ ಬಿಡಲ್ಲ. ನಾವು ಸತ್ರೆ ನಮ್ಮ ಸಾವಿಗೆ ಸರ್ಕಾರವೇ ನೇರ ಹೊಣೆ’ ಎಂದು ಸಾವಿರಾರು ಕಾರ್ಯಕರ್ತೆಯರು ಘೋಷಣೆ ಹಾಕಿದರು.

ಬೆಂಗಳೂರು: ಅಂಗನವಾಡಿ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ವರಲಕ್ಷ್ಮೀ, ‘ವೇತನ ಹೆಚ್ಚಳ ಸೇರಿದಂತೆ ನಮ್ಮ ಪ್ರಮುಖ ಬೇಡಿಕೆ ಈಡೇರಿಸದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ. ಅಲ್ಲಿಯವರೆಗೂ ಯಾರೊಬ್ಬರೂ ಸ್ಥಳ ಬಿಟ್ಟು ಕದಲುವುದಿಲ್ಲ. ಮಹಿಳಾ ಮತ್ತು ಮಕ್ಕಳ ಸಚಿವರು ಅಂಗನವಾಡಿ ಕಾರ್ಯಕರ್ತರರ ಸಂಘಟನೆಗಳ ಕಾರ್ಯವೈಖರಿ ಬಗ್ಗೆ ನಿರ್ಲಕ್ಷ್ಯದ ಮಾತುಗಳನ್ನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಶೀಘ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಚಿಂತನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಡಿಕೆಶಿ ಭೇಟಿ: ಭರವಸೆ

ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗಮಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬೆಂಬಲ ವ್ಯಕ್ತಪಡಿಸಿದರು. ‘ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಕಳೆದ ಹಲವು ದಿನಗಳಿಂದ ಗಮನಕ್ಕೆ ಬಂದಿದೆ. ಚುನಾವಣಾ ಪ್ರಣಾಳಿಕೆ ಸಿದ್ಧವಾಗುತ್ತಿದ್ದು, ಬೇಡಿಕೆ ಬಗ್ಗೆ ಪರಿಗಣಿಸಲಾಗುವುದು. ಬಿಜೆಪಿ ಸರ್ಕಾರಕ್ಕೆ ಕಣ್ಣು ಕಿವಿ ಮೂಗು ಇಲ್ಲ, ಇದ್ದಿದ್ದರೆ ಕಾರ್ಯಕರ್ತೆಯರ ಸಮಸ್ಯೆ ಗೊತ್ತಾಗುತ್ತಿತ್ತು. ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸದಾ ನಾವಿದ್ದೇವೆ ಎಂದು ಭರವಸೆ ನೀಡಿದರು.

ಹೊಸ ಆದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ

ಸಿದ್ದರಾಮಯ್ಯ ಕಿಡಿ:

ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತು ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು,‘ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ. ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಕಾರ್ಯಕರ್ತರು ಮಳೆ, ಚಳಿ, ಗಾಳಿ ಎನ್ನದೆ ಬೀದಿಯಲ್ಲಿ ಠಿಕಾಣಿ ಹೂಡಿ ಮುಷ್ಕರದಲ್ಲಿ ತೊಡಗಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರವೂ ರಾಜ್ಯ ಬಿಜೆಪಿ ಸರ್ಕಾರ ಹಠಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿರುವುದು ವಿಷಾದನೀಯ. ಸೇವೆ ಕಾಯಂ, ವೇತನ ಹೆಚ್ಚಳ ಮತ್ತು ಮತ್ತು ನಿವೃತ್ತಿ ಸೌಲಭ್ಯವೂ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಮಾತುಕತೆಯ ಮೂಲಕ ಮುಷ್ಕರ ನಿರತರ ಬೇಡಿಕೆ ಈಡೇರಿಸಲು ಸಾಧ್ಯವಿತ್ತು. ಸರ್ಕಾರ ಉದ್ಧಟತನದಿಂದ ಸಂಘರ್ಷದ ಹಾದಿ ಆಯ್ದುಕೊಂಡಿದೆ’ ಎಂದು ಕಿಡಿಕಾರಿದ್ದಾರೆ.

Follow Us:
Download App:
  • android
  • ios