Asianet Suvarna News Asianet Suvarna News

ಉಚಿತ ಲಸಿಕೆ 300 ರು.ಗೆ ಮಾರಾಟ: ನರ್ಸ್‌ ದಂಧೆ..!

* ಸರ್ಕಾರಿ ಲಸಿಕೆ ಮನೆಗೆ ತಂದು ಸಂಜೆ ವೇಳೆ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್‌ ನೌಕರರಿಗೆ ನೀಡಿಕೆ
* ಬಳಿಕ ಆನ್‌ಲೈನ್‌ನಲ್ಲಿ ಲಸಿಕೆ ಪಡೆದವರ ವಿವರ ಅಪ್‌ಡೇಟ್‌
* ಆರೋಪ ಸಾಬೀತಾದರೆ ಮುಲಾಜಿಲ್ಲದೇ ಕ್ರಮ 

Government Nurse Sells the Covid Vaccine for 300 Rs in Anekal grg
Author
Bengaluru, First Published Sep 8, 2021, 3:42 PM IST

ಆನೇಕಲ್‌(ಸೆ.08): ಒಂದೆಡೆ ಜನಸಾಮಾನ್ಯರು ಕೋವಿಡ್‌ ಲಸಿಕೆಗಾಗಿ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸರತಿ ನಿಲ್ಲುತ್ತಿದ್ದಾರೆ. ಇದನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡ ಸರ್ಕಾರಿ ನರ್ಸ್‌ ಒಬ್ಬರು ಲಸಿಕೆಯನ್ನು ತಲಾ 300 ರು.ಗೆ ಮಾರಾಟ ಮಾಡಿ ದಂಧೆ ನಡೆಸುತ್ತಿರುವ ವಿಷಯವನ್ನು ಖಾಸಗಿ ಸುದ್ದಿವಾಹಿನಿಯೊಂದು ರಹಸ್ಯ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ.

ಹಗಲು ಹೊತ್ತಿನಲ್ಲಿ ಕೆಲಸಕ್ಕೆ ತೆರಳುವ ಗಾರ್ಮೆಂಟ್ಸ್‌ ನೌಕರರು, ಕೂಲಿ ಕಾರ್ಮಿಕರಿಗೆ ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಆಸ್ಪತ್ರೆಯ ನರ್ಸ್‌ ಒಬ್ಬರು ತಲಾ 300 ರು. ಪಡೆದು ಸಂಜೆ ವೇಳೆ ಲಸಿಕೆ ಹಾಕುತ್ತಾರೆ. ಮರುದಿನ ಸರ್ಕಾರಿ ಆಸ್ಪತ್ರೆಯ ಕಂಪ್ಯೂಟರ್‌ನಲ್ಲಿ ದಾಖಲಾತಿ ಮಾಡಿ ಆಸ್ಪತ್ರೆಯಲ್ಲೇ ಉಚಿತವಾಗಿ ಲಸಿಕೆ ನೀಡಿದಂತೆ ತೋರಿಸುತ್ತಿದ್ದಾರೆ. ತನ್ಮೂಲಕ ಉಚಿತವಾಗಿ ದೊರೆಯುವ ಲಸಿಕೆಯನ್ನು ಹಣ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ಸುದ್ದಿವಾಹಿನಿ ಕಾರ್ಯಾಚರಣೆಯ ಹೂರಣ.

ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಎಚ್ಚೆತ್ತುಕೊಂಡಿದ್ದು ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ನರ್ಸ್‌ನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನರ್ಸ್‌ನ ಮನೆಯಲ್ಲಿ ಯಾವುದೇ ಲಸಿಕೆಯ ವಾಯಲ್ಸ್‌, ಸಿರಿಂಜ್‌ ಅಥವಾ ಸೂಜಿ ದೊರೆತಿಲ್ಲ. ಸ್ಥಳದಲ್ಲಿ ಕೆಲ ದಾಖಲೆಗಳು ದೊರೆತ್ತಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದ್ದು, ಮೇಲ್ನೋಟಕ್ಕೆ ನಾಲ್ವರು ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ನೋಡಲ್‌ ಅಧಿಕಾರಿ ಡಾ.ಮಹೇಶ್‌ ತಿಳಿಸಿದ್ದಾರೆ.

ಭಾರತದಲ್ಲಿ 70 ಕೋಟಿ ಲಸಿಕೆ ವಿತರಣೆಯ ದಾಖಲೆ

ಏನಿದು ದಂಧೆ?:

ಹೆಬ್ಬಗೋಡಿಯಲ್ಲಿ ಗಾರ್ಮೆಂಟ್ಸ್‌ಗೆ ತೆರಳುವ ಮತ್ತು ಕಾರ್ಮಿಕರ ಸಂಖ್ಯೆಯೇ ಅಧಿಕವಾಗಿದ್ದು, ಇವರಲ್ಲಿ ಬಹುತೇಕ ಮಂದಿಗೆ ಕೆಲಸಕ್ಕೆ ರಜೆ ಹಾಕಿ ಬೆಳಗ್ಗಿನ ಸಮಯದಲ್ಲಿ ಲಸಿಕೆ ಪಡೆಯುವುದು ದುಸ್ತರವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಹೆಬ್ಬಗೋಡಿ ಸರ್ಕಾರಿ ಆಸ್ಪತ್ರೆಯ ನರ್ಸ್‌, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲು ನೀಡಿರುವ ಕೊರೋನಾ ಲಸಿಕೆಗಳನ್ನು ತಮ್ಮ ಮನೆಗೆ ತಂದಿಟ್ಟುಕೊಂಡು ದಂಧೆ ಆರಂಭಿಸಿದ್ದರು. 300 ರು. ಪಡೆದು ಸಂಜೆ ವೇಳೆ ತಮ್ಮ ಮನೆಯ 2ನೇ ಮಹಡಿಯಲ್ಲಿ ನಿತ್ಯ 30ರಿಂದ 40 ಮಂದಿಗೆ ಲಸಿಕೆ ನೀಡುತ್ತಿದ್ದರು. ಹೀಗೆ ಲಸಿಕೆ ನೀಡುವಾಗ ಕೆಲ ಮಹಡಿಯಲ್ಲಿ ಒಬ್ಬರು ಕಾವಲು ಕಾಯುತ್ತಿದ್ದರು. ಲಸಿಕೆ ಪಡೆದವರ ಬಳಿ ಆಧಾರ್‌ ನಂಬರ್‌ ಅನ್ನು ಪಡೆದು, ಪುಸಕ್ತವೊಂದರಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ನಂತರ ಮರುದಿನ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಆನ್‌ಲೈನ್‌ನಲ್ಲಿ ಮಾಹಿತಿ ಅಪ್‌ಡೇಟ್‌ ಮಾಡುತ್ತಿದ್ದರು ಎನ್ನುತ್ತದೆ ಖಾಸಗಿ ಸುದ್ದಿವಾಹಿನಿಯ ವರದಿ. ‘ನರ್ಸ್‌ ಮನೆ ಬಳಿ ಸಂಜೆ ವೇಳೆ ಸಾಕಷ್ಟುಜನರು ಆಗಮಿಸುತ್ತಿದ್ದರು’ ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿಕೆಯನ್ನೂ ನೀಡಿರುವುದು ಇದಕ್ಕೆ ಮತ್ತಷ್ಟು ಪುಷ್ಟಿನೀಡಿದೆ.

ಅಧಿಕಾರಿಗಳು ದೌಡು

ಈ ಸಂಬಂಧ ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿ ಸೂಚನೆ ಮೇರೆಗೆ ನೋಡಲ್‌ ಅಧಿಕಾರಿ ಡಾ.ಮಹೇಶ್‌ ಹಾಗೂ ಹೆಬ್ಬಗೋಡಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಭರತ್‌ ನರ್ಸ್‌ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ವರದಿ ಬಂದ ನಂತರ, ತಪ್ಪಿತಸ್ಥರು ಯಾರೆಂದು ಪತ್ತೆ ಆಗಲಿದ್ದಾರೆ. ಒಂದೊಮ್ಮೆ ತಪ್ಪು ನಡೆದಿರುವುದು ಸಾಬೀತಾದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ.ವಿನಯ್‌ ಮಾತನಾಡಿ, ಲಸಿಕೆ ಪಡೆದವರ ಮಾಹಿತಿಯನ್ನು ಮರುದಿನ ಸರ್ಕಾರಿ ಆಸ್ಪತ್ರೆಯ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್‌ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಆಸ್ಪತ್ರೆಯ ಕಂಪ್ಯೂಟರ್‌ ಆಪರೇಟರ್‌ ಸೇರಿದಂತೆ, ಸಂಬಂಧಪಟ್ಟವರ ಹೇಳಿಕೆ ಪಡೆದು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
 

Follow Us:
Download App:
  • android
  • ios