Asianet Suvarna News Asianet Suvarna News

ಚಿಕ್ಕಬಳ್ಳಾಪುರ: ದಾಖಲೆ ತಿದ್ದಿ ಕೋಟ್ಯಂತರ ರೂ. ಸರ್ಕಾರಿ ಭೂಮಿ ಕಬಳಿಕೆ..!

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ಕುಡುವತಿ ಗ್ರಾಮದ ಸಂ.170ರ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಜು.19ರಂದು ತಹಶೀಲ್ದಾರ್‌ ಚಿಕ್ಕಬಳ್ಳಾಪುರ, ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ ಗಣಪತಿ ಶಾಸ್ತ್ರೀ

Government Land Grab in Chikkaballapur grg
Author
First Published Aug 4, 2023, 11:15 PM IST

ದಯಾಸಾಗರ್‌.ಎನ್‌.

ಚಿಕ್ಕಬಳ್ಳಾಪುರ(ಆ.04):  ಚಿಕ್ಕಬಳ್ಳಾಪುರ ಮೆಡಿಕಲ್‌ ಕಾಲೇಜು ಬಳಿಯ ಸರ್ಕಾರಿ ಜಮೀನು ಕಬಳಿಸಲು ದಾಖಲೆಗಳ ತಿದ್ದಿ ಅಕ್ರಮವಾಗಿ ಕೋಟ್ಯಂತರ ರು. ಮೌಲ್ಯದ ಸರ್ಕಾರಿ ಆಸ್ತಿ ಲಪಟಾಯಿಸಲು ರೂಪಿಸಿದ ಸಂಚು ಬಯಲಾಗಿದ್ದು, ಅಕ್ರಮ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಚಿಕ್ಕಬಳ್ಳಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ತಹಸೀಲ್ದಾರ್‌ ಗಣಪತಿ ಶಾಸ್ತ್ರೀ ದೂರು ಸಲ್ಲಿಸಿದ್ದಾರೆ.

ಗಣಪತಿ ಶಾಸ್ತ್ರೀ ಚಿಕ್ಕಬಳ್ಳಾಪುರ ತಾಲೂಕಿನ ತಹಸೀಲ್ದಾರರಾಗಿ ಎರಡೂ ಕಾಲು ವರ್ಷ ಕೆಲಸ ನಿರ್ವಹಿಸಿ ವರ್ಗಾವಣೆ ಆಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಸರ್ಕಾರಿ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ 7ಕ್ಕೂ ಹೆಚ್ಚು ದೂರುಗಳನ್ನು ನೀಡಿದ್ದಾರೆ. ಕಬಳಿಕೆ ಆಗಿರುವ ಸರ್ಕಾರಿ ಜಮೀನು ಕೋಟ್ಯಂತರ ರು. ಮೌಲ್ಯದ್ದಾಗಿದೆ. ಹೀಗೆ ಜುಲೈ ಏಳರಂದು ತಹಸೀಲ್ದಾರರು ಟಪಾಲು ಮುಖಾಂತರ ಚಿಕ್ಕಬಳ್ಳಾಪುರ ಸರ್ಕಲ್‌ ಇನ್ಸ್‌ಪೆಕ್ಟರ್‌ ಕಚೇರಿಗೆ ನೀಡಿರುವ ದೂರಿನನ್ವಯ ಎಫ್‌ಐಆರ್‌ ಆಗಿದೆ.

ನಂದಿ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು: ಟ್ರಾಫಿಕ್‌ ಕಿರಿಕಿರಿ

ಯಾವ ಯಾವ ದೂರು: 

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ಕುಡುವತಿ ಗ್ರಾಮದ ಸಂ.170ರ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಜು.19ರಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರೀ ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸರ್ವೆ ನಂ 170ಕ್ಕೆ ಸಂಬಂಧಿಸಿದಂತೆ 1965-66ನೇ ಸಾಲಿನಿಂದ 2000-2021ನೇ ಸಾಲಿನವರೆಗಿನ ಕೈ ಬರಹದ ಪಹಣಿ ನಕಲು, ಮೂಲ ಮಂಜೂರಾತಿ ಕಡತದ ನಕಲು ಪ್ರತಿಯನ್ನು ದೂರಿನ ಜೊತೆ ಲಗತ್ತಿಸಿದ್ದಾರೆ. ನಕಲಿ ದಾಖಲೆಗಳನ್ನು ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಸೇರ್ಪಡೆ ಮಾಡಿರುವವರ ಪತ್ತೆಗೂ ಕ್ರಮವಹಿಸುವಂತೆ ದೂರಿನಲ್ಲಿ ಕೋರಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಯ ಮೇಲೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿ ಬಳಗೆರೆ ಗ್ರಾಮದ ಸ.ನಂ 19ರಲ್ಲಿ ಅಕ್ರಮ ದಾಖಲೆಗಳ ಆಧಾರದ ಮೇಲೆ ಖಾತೆ ಬದಲಾವಣೆ ಕೋರಿರುವ ಕುರಿತು 2022ರ ಫೆಬ್ರವರಿಯಲ್ಲಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಪ್ರತಿಯ ಜೊತೆಗೆ ಸರ್ವೆ ದಾಖಲೆಗಳು, ಆಕಾರ್‌ ಬಂದ್‌ ಪ್ರತಿ, ಕೈಬರಹದ ಪಹಣಿ ಪತ್ರಿಗಳು, ಅರ್ಜಿದಾರರು ಸಾಗುವಳಿ ಚೀಟಿಯಂತೆ ಖಾತೆ ಮಾಡಲು ಕೋರಿ ಸಲ್ಲಿಸಿರುವ ಅರ್ಜಿ, ಕುಡುವತಿ ಗ್ರಾಮದ ಸರ್ವೆ ನಂ.168ರ ಸಾಗುವಳಿ ಪ್ರತಿಗಳನ್ನು ಸಹ ದೂರಿನ ಜೊತೆ ದಾಖಲೆಗಳಾಗಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಯರ್ರಮಾರೇನಹಳ್ಳಿ ಗ್ರಾಮದ ಸ.ನಂ.243ರಲ್ಲಿ ನಡೆದಿರುವ ಅಕ್ರಮ, ಬೈಪ್ಪನಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿ ಜಮೀನು ಮಂಜೂರು ಆಗಿರುವ ಬಗ್ಗೆ ನಕಲಿ ದಾಖಲಾತಿ ಸೃಷ್ಟಿಸಿರುವವರ ಬಗ್ಗೆ ಕಾನೂನು ಕ್ರಮಕೈಗೊಳ್ಳುವಂತೆ ಸಹ ದೂರು ನೀಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಅರೂರು ಗ್ರಾಮದ ಸರ್ವೆ ನಂ.262 ಮತ್ತು ಸರ್ವೆ ನಂ.206ರ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಗಣಪತಿ ಶಾಸ್ತ್ರೀ ದೂರು ನೀಡಿದ್ದಾರೆ. ಈ ಪ್ರಕರಣಗಳಲ್ಲಿ ಆರು ಮಂದಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ದಾಖಲೆಗಳನ್ನು ಸಹ ಲಗತ್ತಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಬಂಡಹಳ್ಳಿ ಗ್ರಾಮದ ಸರ್ವೆ ನಂ.22 ಮತ್ತು ಸರ್ವೆ ನಂ.29ರಲ್ಲಿ ಜಮೀನು ಮಂಜೂರು ಆಗಿರುವ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಹ ದೂರು ನೀಡಿದ್ದಾರೆ. ಈ ಪ್ರಕರಣಗಳಲ್ಲಿ ಆರು ಮಂದಿಯ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ದಾಖಲೆಗಳನ್ನು ಸಹ ಲಗತ್ತಿಸಿದ್ದಾರೆ.

ನಗರಸಭೆಯ ಭ್ರಷ್ಟಾಚಾರ ಕ್ಲೀನ್‌ ಮಾಡುವೆ: ಶಾಸಕ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿ ಬಳಗೆರೆ ಗ್ರಾಮದ ಸರ್ವೆ ನಂ.11ರಲ್ಲಿ ಅಕ್ರಮ ದಾಖಲೆಗಳ ಆಧಾರದ ಮೇಲೆ ಖಾತೆ ಬದಲಾವಣೆ ಬಗ್ಗೆ ಸಹ ದೂರು ನೀಡಿದ್ದಾರೆ. ತಹಸೀಲ್ದಾರರು ಹೀಗೆ ನೀಡಿರುವ 7 ದೂರುಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಭೂ ಅಕ್ರಮಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರು ದೊಡ್ಡ ಕುಳಗಳನ್ನೇ ಪತ್ತೆ ಮಾಡಿದ್ದಾರೆ. ಕೆಲವರು ರಾಜಕೀಯ ಪ್ರಭಾವಿಗಳು ಸಹ ಇದ್ದಾರೆ. ಗಣಪತಿ ಶಾಸ್ತ್ರೀ ಅವರು ನೀಡಿದ ದೂರುಗಳಿಗೆ ಸಂಬಂಧಿಸಿದಂತೆ ಬಹುತೇಕ ಪ್ರಕರಣಗಳಲ್ಲಿ ಇಲ್ಲಿಯವರೆಗೂ ಯಾವುದೇ ಕ್ರಮಗಳು ಸಹ ಆಗಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ತಾಲೂಕು ಕಚೇರಿ ಸಿಬ್ಬಂದಿ ಶಾಮೀಲು ಬಗ್ಗೆಯೂ ದೂರು

ಚಿಕ್ಕಬಳ್ಳಾಪುರ ತಾಲೂಕು ಸರ್ಕಾರಿ ಮೆಡಿಕಲ್‌ ಕಾಲೇಜು ಬಳಿಯ ಆರೂರು ಗ್ರಾಮದ ಸಮೀಪದ ಜಮೀನು ಸರ್ಕಾರಿ ಸರ್ವೇ ನಂಬರ್‌-262 ರಲ್ಲಿ 16.35 ಎಕರೆ, ಸರ್ವೇ ನಂಬರ್‌ 206 ರಲ್ಲಿ 3.20 ಎಕರೆ ಜಮೀನು ದರಖಾಸ್ತು ಮೂಲಕ ಮಂಜೂರು ಆದಂತೆ ದಾಖಲೆಗಳ ಸೃಷ್ಟಿಸಿದ್ದು, ಪ್ರಸ್ತುತ ಎಕರೆಯೊಂದಕ್ಕೆ ಮಾರುಕಟ್ಟೆಬೆಲೆ 1.5ಯಿಂದ 2 ಕೋಟಿ ರು. ಬೆಲೆ ಇದ್ದು, 20 ಎಕರೆಗೂ ಹೆಚ್ಚು ಜಮೀನನ್ನು ಅಕ್ರಮ ದಾಖಲೆಗಳ ಮೂಲಕ ಕಬಳಿಸಲು ಸಂಚು ರೂಪಿಸಿದ್ದಾರೆ. ದಾಖಲೆಗಳನ್ನು ತಿದ್ದಿ ಸರ್ಕಾರದ ಕೋಟ್ಯಂತರ ರು. ಬೆಲೆ ಬಾಳುವ ಜಮೀನು ಕಬಳಿಸಲು ಯತ್ನ ಮಾಡಿರುವ ಬಗ್ಗೆ ಸಂಪಂಗಿರಾಮರೆಡ್ಡಿ, ಮಲ್ಲಿಕಾರ್ಜುನ, ಶೈಲಜಾ, ಕೇಶವಪ್ಪ, ಚಿಕ್ಕನಾರಾಯಣಸ್ವಾಮಿ, ಸರೋಜಮ್ಮ ಎಂಬವರ ಮೇಲೆ ದೂರು ದಾಖಲಿಸಿದ್ದು, ಬಾಲಕೃಷ್ಣ ಎಂಬವರ ಮೇಲೆಯೂ ಸಂಶಯದ ಗುಮಾನಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಾಲೂಕು ಕಚೇರಿಯ ಸಿಬ್ಬಂದಿಗಳು ಶಾಮೀಲಾಗಿದ್ದು, ಆ ಕುರಿತು ತನಿಖೆ ನಡೆಸುವಂತೆಯೂ ತಹಸೀಲ್ದಾರ್‌ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios