ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸರ್ಕಾರ ಸಿದ್ಧ: ಸಚಿವ ಮಧು ಬಂಗಾರಪ್ಪ
ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕೆಪಿಎಸ್ ಶಾಲೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ನೇಮಕ ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸರ್ಕಾರ ಸಿದ್ಧವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬ್ಯಾಡಗಿ (ನ.29): ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕೆಪಿಎಸ್ ಶಾಲೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ನೇಮಕ ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸರ್ಕಾರ ಸಿದ್ಧವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಕದರಮಂಡಲಗಿ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳು ₹1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದವರಿದ್ದಾರೆ. ಅವರೆಲ್ಲರೂ ತಾವು ಕಲಿತ ಶಾಲೆಗೆ ಸಾಧ್ಯವಾದಷ್ಟು ಧನಸಹಾಯ ಮಾಡಿದ್ದೇ ಆದಲ್ಲಿ ಸರ್ಕಾರದ ಹೊರೆ ಇಳಿಸುವುದರ ಜೊತೆಗೆ ದೇಶದಲ್ಲಿಯೇ ರಾಜ್ಯದ ಶಿಕ್ಷಣ ಇಲಾಖೆ ಮಾದರಿಯಾಗಲಿದೆ ಎಂದರು. ಸರ್ಕಾರಿ ಶಾಲೆಗೆ ಸಾರ್ವಜನಿಕರ ಸೇವೆ ಸಣ್ಣ ವಿಷಯವಲ್ಲ. ಗ್ರಾಮದಲ್ಲಿ ₹1 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡವನ್ನು ನಿರ್ಮಿಸಿ ಸರ್ಕಾರಕ್ಕೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಅಪಘಾತ ತಡೆಗೆ ಹೈಟೆಕ್ ಕಾರಿನ ರೀತಿಯ ತಂತ್ರಜ್ಞಾನ ಬಿಎಂಟಿಸಿ ಬಸ್‌ಗಳಿಗೆ ಅಳವಡಿಕೆ: ಸಚಿವ ರಾಮಲಿಂಗಾರೆಡ್ಡಿ
ನಮ್ಮದು ದೊಡ್ಡ ಸಂಸಾರ ಇದ್ದಂತೆ: ಸರ್ಕಾರಿ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಸೇರಿದಂತೆ ರಾಜ್ಯದಲ್ಲಿ ಒಟ್ಟು 76 ಸಾವಿರ ಶಾಲೆಗಳಿವೆ. ಮೂರುವರೆ ಲಕ್ಷ ಶಿಕ್ಷಕರಿದ್ದಾರೆ. ಹೀಗಾಗಿ ನಮ್ಮದು ಅತೀ ದೊಡ್ಡ ಸಂಸಾರವಿದ್ದಂತೆ ಶಿಕ್ಷಣ ಇಲಾಖೆಗಳಲ್ಲಿ ನೂರಾರು ಸಮಸ್ಯೆಗಳಿದ್ದು ಅವೆಲ್ಲವನ್ನೂ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸರ್ಕಾರದ ಹೊರೆಯನ್ನು ಇಳಿಸಿದ ಕದರಮಂಡಲಗಿ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಇದು ದೇಶದಲ್ಲಿಯೇ ಪ್ರಥಮವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಮುಖಂಡರಾದ ದಾನಪ್ಪ ಚೂರಿ, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಜಿಪಂ ಮಾಜಿ ಸದಸ್ಯೆ ಶಶಿಕಲಾ ಪಟ್ಟಣಶೆಟ್ಟಿ, ಪ್ರಕಾಶ ಹುಳಬುತ್ತಿ, ಕನ್ನಪ್ಪ ಛತ್ರದ, ಗ್ರಾಪಂ ಅಧ್ಯಕ್ಷೆ ಮಂಜುಳಾ ಕಾಂತೇಶ ನಾಯ್ಕರ, ಉಪಾಧ್ಯಕ್ಷೆ ತುಳಜಾ ಯಲ್ಲಪ್ಪ ಕಾಳೇರ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಬಿಇಒ ಎಸ್.ಜಿ. ಕೋಟಿ ಸ್ವಾಗತಿಸಿದರು, ಎನ್‌ಸಿಸಿ ಲೆಫ್ಟಿನೆಂಟ್ ಡಿ.ಬಿ. ಕುಸಗೂರ ನಿರೂಪಿಸಿದರು, ಎಸ್‌ಡಿಎಂಸಿ ಅಧ್ಯಕ್ಷ ಗದಿಗೆಯ್ಯ ಹಿರೇಮಠ ವಂದಿಸಿದರು.
ಪ್ರಧಾನಿ ಮೋದಿ ಯೋಜನೆಗೆ ಸಿದ್ದರಾಮಯ್ಯ ತಡೆ: ಶೋಭಾ ಕರಂದ್ಲಾಜೆ ಕಿಡಿ
ವೇದಿಕೆ ಬರದ ಸಿಎಂ: ಕಾಗಿನೆಲೆಯಲ್ಲಿ ನಡೆದ ಕಾರ್ಯಕ್ರಮ ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಹಿನ್ನೆಲೆ ಹಾಗೂ ಹೆಲಿಕಾಪ್ಟರ್‌ನ ವೇಳೆ ಮುಗಿದಿದ್ದರಿಂದ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಬಳಿಕ ವೇದಿಕೆಗೂ ಆಗಮಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದರು. ಇದರಿಂದ ಸಾವಿರಾರು ಸಂಖ್ಯೆಯ ಸಾರ್ವಜನಿಕರು ಬೇಸರಗೊಂಡರು. ಇನ್ನು ಕದರಮಂಡಲಗಿ ಗ್ರಾಮಕ್ಕೆ ಬಂದರೂ ಕೂಡ ಗ್ರಾಮದ ಆರ‍್ಯಾಧ್ಯದೈವ ಕಾಂತೇಶನ (ಆಂಜನೇಯ) ದರ್ಶನಾಶೀರ್ವಾದವನ್ನ ಮುಖ್ಯಮಂತ್ರಿ ಪಡೆಯದೇ ತೆರಳಿದರು.