ಮಂಜುನಾಥ್‌ ಬಿರಾದರ್‌

ಯಾದ​ಗಿ​ರಿ(ಆ.17): ಆಸ್ರತ್ರೆಯೊಂದರಲ್ಲಿ ಒಂದೆರಡು ಕೊಠಡಿಯ ಛಾವಣಿಯಲ್ಲಿ ಮಳೆ ನೀರು ಸೋರುತ್ತಿದ್ದರೆ ಏನೋ ಪರವಾಗಿಲ್ಲ ಎಂದು ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಕೊಠಡಿಗಳ ಛಾವಣಿಗಳೂ ಸೋರುತ್ತಿದ್ದು, ರೋಗಿಗಳು, ವೈದ್ಯರು, ಸಿಬ್ಬಂದಿಗಳೆಲ್ಲಾ ಆತಂಕದಲ್ಲೇ ದಿನದೂಡುತ್ತಿದ್ದಾರೆ. 

ಇಲ್ಲಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆಯೆಂದರೆ ಸತತ ಮಳೆಯ ಪರಿಣಾಮ ಛಾವಣಿಯಿಂದ ನೀರು ಸೋರುತ್ತಿರುವ ಮಧ್ಯೆಯೇ ಟಾರ್ಪಾ​ಲಿನ್‌​ನಿಂದ ರಕ್ಷಣೆ ಪಡೆದು ಹೆರಿಗೆ ಮಾಡಿ​ಸಿ ತಕ್ಷಣವೇ ಮನೆಗೆ ಕಳುಹಿಸಿಕೊಟ್ಟಿರುವ ಘಟನೆಯೂ ಭಾನುವಾರ ಸಂಭವಿಸಿದೆ.

ಬಸವ ತತ್ವಕ್ಕೆ ಮಾರುಹೋಗಿ ಜಂಗಮ ದೀಕ್ಷೆ ಸ್ವೀಕರಿಸಿದ ‘ನಿಸಾರ್‌ ಅಹ್ಮದ್’

ಸುಮಾರು 30 ವರ್ಷಗಳ ಹಿಂದಿನ ಈ ಕಟ್ಟಡದ ಗೋಡೆಗಳೂ ಬಿರುಕು ಬಿಟ್ಟಿದ್ದು ಜೀವ ಕೈಯ್ಯಲ್ಲಿ ಹಿಡಿದು ಕೂರಬೇಕಾಗಿದೆ. ಆಸ್ಪತ್ರೆಯ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಸ್ಪತ್ರೆಯ ಎಲ್ಲ ಕೊಠಡಿಗಳ ಮೇಲ್ಛಾವಣಿಗಳಲ್ಲೂ ನೀರು ಸೋರುತ್ತಿದ್ದು ಮೊಳಕಾಲುದ್ದ ನೀರು ಹರಿದಿತ್ತು.

ಸರಗ ಸುತ್ತಮುತ್ತಲಿನ ಸುಮಾರು 18 ಹಳ್ಳಿಗಳ ಜನರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದು, ತಿಂಗಳಿಗೆ ಸುಮಾ​ರು 30ರಿಂದ 35 ಹೆರಿಗೆ ನಡೆಯುತ್ತದೆ. ಭಾನುವಾರ ಗ್ರಾಮದ ಚಾಂದ್‌ ಬೀ ಬಂದಾಗ ಟಾರ್ಪಾಲ್‌ ಹಿಡಿದು ಹೆರಿಗೆ ಮಾಡಿ​ಸ​ಲಾ​ಗಿದೆ. ಅಲ್ಲದೆ ಶಿಥಿಲಾವಸ್ಥೆಯಲ್ಲಿರುವ ಆರೋಗ್ಯ ಕೇಂದ್ರದ ಕಟ್ಟಡ ಕುಸಿದು ಬೀಳುವುದೋ ಎಂಬ ಆತಂಕದಲ್ಲಿ ಹಸುಗೂಸು ಹಾಗೂ ಬಾಣಂತಿಯನ್ನು ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಕಳುಹಿಸಲಾಗಿದೆ. ಮಳೆ ಬಂದಾಗ ಯಾರೇ ಹೆರಿಗೆಗೆ ಬಂದರೂ ಇಲ್ಲಿ ಇದು ಮಾಮೂಲಿ ಎನ್ನುವಂತಾಗಿದೆ.

ಎಲ್ಲ ಕೊಠಡಿಗಳಲ್ಲಿ ನೀರು ಸೋರುತ್ತದೆ. ಲಕ್ಷಾಂತರ ರುಪಾಯಿಗಳ ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಳಾಗುತ್ತಿವೆ. ಮುಖ್ಯವಾಗಿ ಹೆರಿಗೆ ಹಾಗೂ ಚಿಕಿತ್ಸೆಗೆಂದು ಇಲ್ಲಿಗೆ ಬರುವವರ ಜೀವಕ್ಕೇ ಇಲ್ಲಿ ಅಪಾಯವಿದೆ ಎಂದು ಸಗರ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ನೂರುಲ್ಲಾ ಅವರು ತಿಳಿಸಿದ್ದಾರೆ.