ಬಸವರಾಜ ಹಿರೇಮಠ

ಧಾರವಾಡ(ನ.16): ಕೊರೋನಾ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಆಯುಷ್‌ ವೈದ್ಯರೊಬ್ಬರೊಬ್ಬರು ಕೆಲಸಕ್ಕೆ ಸೇರಿದ ಮೂರೂವರೆ ತಿಂಗಳಲ್ಲಿ ಒಂದೇ ಒಂದು ದಿನ ರಜೆ ಪಡೆಯದೆ ಸೋಂಕಿತರ ಸೇವೆ ಮಾಡಿದ್ದಲ್ಲದೆ, ಈ ಅವಧಿಯಲ್ಲಿ ತಮಗೆ ದೊರತೆ ವೇತನವನ್ನೂ ಬಡವರಿಗೆ ಉಚಿತವಾಗಿ ಮಾಸ್ಕ್‌ ವಿತರಣೆಗೆ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ.

ಧಾರವಾಡದ ಕಮಲಾಪುರ ನಿವಾಸಿ ಡಾ. ಮಯೂರೇಶ ಲೋಹಾರ ಅವರೇ ಈ ಮಾದರಿ ವೈದ್ಯ. ಬಿಎಎಂಎಸ್‌ ಪದವೀಧರರಾಗಿರುವ ಡಾ.ಮಯೂರೇಶ ಅವರು ಮೂರೂವರೆ ತಿಂಗಳ ಹಿಂದೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲಿನ ಕೋವಿಡ್‌ ವಾರ್ಡ್‌ನಲ್ಲಿ ಈವರೆಗೆ ಒಂದೇ ಒಂದು ದಿನ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಕೋವಿಡ್‌ ವಾರ್ಡ್‌ನಲ್ಲಿ 7 ದಿನ ಸೇವೆ ಸಲ್ಲಿಸಿದ ವೈದ್ಯರಿಗೆ ನಂತರ ಮೂರು ದಿನ ಕ್ವಾರಂಟೈನ್‌ ಸೌಲಭ್ಯವಿತ್ತು. ಆ ಸೌಲಭ್ಯ ಸಹ ಪಡೆಯದೆ ಡಾ. ಮಯೂರೇಶ ಸೇವೆ ಸಲ್ಲಿಸಿದ್ದು ಶ್ಲಾಘನೀಯ.

ವಿನಯ್‌ ಕುಲಕರ್ಣಿ ಅರೆಸ್ಟ್‌: ಬಿಜೆಪಿ ವಿರುದ್ಧ ಹೆಚ್.ಕೆ. ಪಾಟೀಲ್‌ ವಾಗ್ದಾಳಿ

ಡಾ.ಮಯೂರೇಶ ಲೋಹಾರ ಕಮಲಾಪುರ ರಸ್ತೆಯ ಮಾಜಿ ಯೋಧ ಗೌರಿಹರ್‌ ಲೋಹಾರ್‌ ಹಾಗೂ ಸರ್ಕಾರಿ ಶಾಲಾ ಶಿಕ್ಷಕಿ ಕಲ್ಪನಾ ದಂಪತಿ ಪುತ್ರ. ಸಾಮಾಜಿಕ ಕಳಕಳಿ ಹೊಂದಿರುವ ಅವರು ಪುಲ್ವಾಮಾ ಘಟನೆಯಲ್ಲಿ ಮೃತ ಮಂಡ್ಯದ ಯೋಧನ ಕುಟುಂಬಕ್ಕೆ ಸ್ನೇಹಿತರ ಜತೆ ಸೇರಿ ಈ ಹಿಂದೆ 1 ಲಕ್ಷ ಸಂಗ್ರಹಿಸಿ ಕಳುಹಿಸಿದ್ದರು. ಇದೀಗ ವೈದ್ಯವೃತ್ತಿಯಿಂದ ಬಂದ ಒಂದೂವರೆ ಲಕ್ಷ ವೇತನದಲ್ಲಿ 10 ಸಾವಿರಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಶಿಕ್ಷಣ ಇಲಾಖೆಗೆ 1000, ಪೊಲೀಸ್‌ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿ ಧಾರವಾಡದ ವಿವಿಧೆಡೆ ಮಾಸ್ಕ್‌ಗಳನ್ನು ತಮ್ಮ ಗೆಳೆಯರ ಸಹಕಾರದಿಂದ ಹಂಚಿದ್ದಾರೆ.