ಬೆಳಗಾವಿ(ಏ.03):  ಲಂಚಕ್ಕಾಗಿ ಬೇಡಿಕೆ ಇಟ್ಟು ಹೆರಿಗೆ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯ ಸರ್ಜನ್‌ವೊಬ್ಬರು ಇಂದು(ಶನಿವಾರ) ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ. 

ಎಸಿಬಿ ಅಧಿಕಾರಿಗಳು ಲಂಚದ ಸಮೇತ ವೈದ್ಯನನ್ನು ಹಿಡಿದಿದ್ದು, ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಡಾ.ವಿರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದ ವೈದ್ಯ. ಹೆರಿಗೆ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಕಿತ್ತೂರು ತಾಲೂಕು ದಾಸ್ತಿಕೊಪ್ಪ ಮೂಲಕ ಮಹಿಳೆ ಓರ್ವಳನ್ನು ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಮಹಿಳೆಯನ್ನು ಡಿಸ್ಟಾರ್ಜ್ ಮಾಡಲು ವೈದ್ಯ ರೂ.7 ಸಾವಿರ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ವಿಳಂಬವಾಗುತ್ತಿದ್ದ ಕಾರಣಕ್ಕೆ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಕೋರ್ಟ್‌ಗಳ ಸಮಯ ಬದಲು : ಯಾವ ಸಮಯಕ್ಕೆ ?

ವೈದ್ಯನ ವರ್ತನೆಯಿಂದ ರೋಸಿಹೋದ ಮಹಿಳೆಯ ಪತಿ ಯಲ್ಲಪ್ಪ ಕೋಲಕಾರ ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಡಾ.ವಿರೇಂದ್ರ ಕುಚಬಾಳ ಅವರನ್ನು ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್‌ ಆಗಿ ಬಲೆಗೆ ಬೀಳಿಸಿ ವಶಕ್ಕೆ ಪಡೆದಿದ್ದಾರೆ.

ಎಸಿಬಿ ಎಸ್ಪಿ ಬಿ.ಎಸ್.ನ್ಯಾಮಗೌಡರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿ ನೇತೃತ್ವದಲ್ಲಿ, ಇನ್ಸಪೆಕ್ಟರ್‌ಗಳಾದ ಹೆಚ್ ಸುನಿಲಕುಮಾರ, ಎ.ಎಸ್.ಗುದಿಗೊಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.