ಅಭಿವೃದ್ಧಿಗೆ ಅನುಮತಿ ನೀಡದ ಸರ್ಕಾರ| ಇದ್ದ ದುಡ್ಡು ಬಳಕೆ ಮಾಡುವುದಕ್ಕೂ ಮೀನಮೇಷ| ಪ್ರಸ್ತಾವನೆ ಸಲ್ಲಿಸಿ ಸಲ್ಲಿಸಿ ಸುಸ್ತಾದ ಆಡಳಿತ ಮಂಡಳಿ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.03): ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನ ಭಕ್ತಸಾಗರವನ್ನೇ ಹೊಂದಿದೆ. ಭಕ್ತರು ನೀಡಿದ ಕಾಣಿಕೆ ಮತ್ತು ದೇವಸ್ಥಾನಕ್ಕೆ ಬಂದಿರುವ ಆದಾಯಯದಿಂದ ಬರೋಬ್ಬರಿ 46 ಕೋಟಿ ಬ್ಯಾಂಕ್‌ನಲ್ಲಿ ಜಮೆಯಾಗಿದೆ. ಇದನ್ನು ಬಳಸಿ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮಾಸ್ಟರ್ ಪ್ಲಾನ್‌ಗೆ ಸರ್ಕಾರ ಅಸ್ತು ಎನ್ನುತ್ತಲೇ ಇಲ್ಲ.
ಕಳೆದ ನಾಲ್ಕು ವರ್ಷಗಳಿಂದ ಇಂಥ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ಇನ್ನು ಸ್ಥಳೀಯವಾಗಿ ಜಿಲ್ಲಾಧಿಕಾರಿ ಅಧಿಕಾರದ ಅಡಿ ಸುಮಾರು 1 ಕೋಟಿ ಅಭಿವೃದ್ಧಿ ಕೈಗೊಳ್ಳುವುದಕ್ಕೆ ಅವಕಾಶ ಇದೆಯಾದಾರೂ ಅದು ಅಷ್ಟಾಗಿ ಪಾಲನೆಯಾಗುತ್ತಿಲ್ಲ. ಎಲ್ಲದಕ್ಕೂ ಈ ಹಿಂದಿನ ಅಧಿಕಾರಿಗಳು ಕೊಕ್ಕೆ ಹಾಕುತ್ತಲೇ ಬಂದಿದ್ದಾರೆ. ಈಗಿನ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಆಸಕ್ತಿಯನ್ನು ತೋರಿಸಿದ್ದಾರೆ. ಈಗಾಗಲೇ ದೇವಸ್ಥಾನಕ್ಕೆ ಭೇಟಿ ನೀಡಿ ಉತ್ಸುಕತೆಯನ್ನು ತೋರಿದ್ದಾರೆ.
ಐದು ವರ್ಷದ ಗೋಳು:
ಹುಲಿಗೆಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಪ್ರತಿ ಹುಣ್ಣಿಮೆಗೆ ಲಕ್ಷಕ್ಕೂ ಅಧಿಕ ಭಕ್ತರು ಸೇರುತ್ತಾರೆ. ಇನ್ನು ನಿತ್ಯವೂ ಸಾವಿರಾರು ಜನರು ಆಗಮಿಸುತ್ತಾರೆ. ಇಂಥ ದೇವಸ್ಥಾನದಲ್ಲಿ ಮಾತ್ರ ಇರಬೇಕಾದಷ್ಟುಸೌಕರ್ಯ ಇಲ್ಲ. ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಅಲ್ಲದೆ ದೇವಸ್ಥಾನದ ಗರ್ಭಗುಡಿಯನ್ನು ಬಿಟ್ಟು, ಉಳಿದ ದೇವಸ್ಥಾನವನ್ನು ಸಂಪೂರ್ಣ ಪುನರ್ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ.
ಇದ್ಯಾವುದಕ್ಕೂ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ಆದರೂ ಸ್ಥಳೀಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಜಂಟಿಯಾಗಿ ದೇವಸ್ಥಾನಕ್ಕೆ ಅಗತ್ಯ ಭೂಮಿಯನ್ನು ಈಗಾಗಲೇ ಸ್ವಾಧೀನ ಮಾಡಿಕೊಂಡಿದ್ದು, ಅಭಿವೃದ್ಧಿ ಕಾರ್ಯ ಪ್ರಾರಂಭವಾಗಬೇಕು. ಇದಕ್ಕಾದರೂ ಸರ್ಕಾರ ಮುಂದಾಗಬೇಕು.
ಕೊಪ್ಪಳ: ತೆರೆದ ಹುಲಿಗೆಮ್ಮ ದೇವಸ್ಥಾನದ ಬಾಗಿಲು, ಹರಿದು ಬಂದ ಭಕ್ತರು
ಸರ್ಕಾರದ ನಿರ್ಲಕ್ಷ್ಯ:
ಹುಲಿಗೆಮ್ಮ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ .25 ಕೋಟಿ ಜಮೆಯಾದಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲು ಪ್ರಾರಂಭಿಸಲಾಗಿದೆ. ಈಗ ಬರೋಬ್ಬರಿ .46 ಕೋಟಿ ಜಮೆಯಾಗಿದೆ. ಪ್ರತಿವರ್ಷ .5- 6 ಕೋಟಿ ಜಮೆಯಾಗುತ್ತಲೇ ಇದೆ. ಇಷ್ಟಾದರೂ ಇದನ್ನೊಂದು ಸುಪ್ರಸಿದ್ಧ ಪ್ರವಾಸಿ ತಾಣಕ್ಕೆ ಬೇಕಾಗುವ ಎಲ್ಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಯಾಕೆ ಮಾಡುತ್ತಿಲ್ಲ ಎನ್ನುವುದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ದೇವಸ್ಥಾನಕ್ಕೆ ಹೊಂದಿಕೊಂಡು ತುಂಗಭದ್ರಾ ನದಿ ಇದೆ. ನದಿಯುದ್ದಕ್ಕೂ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಥಳಗಳಿವೆ. ಇದೇ ರಸ್ತೆಯಲ್ಲಿ ಅಂಜನಾದ್ರಿ ಬೆಟ್ಟವಿದೆ. ಹುಲಿಗೆಮ್ಮ ದೇವಸ್ಥಾನವನ್ನು ಅಭಿವೃದ್ಧಿ ಮಾಡುವ ಮೂಲಕ ಇವೆಲ್ಲ ಪ್ರದೇಶಗಳಿಗೂ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಳ ಮಾಡಬಹುದು.
ಗಮನಹರಿಸಿ...
ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೊಪ್ಪಳಕ್ಕೆ ಡಿ. 3ರಂದು ಆಗಮಿಸುತ್ತಿದ್ದು, ಇತ್ತ ಗಮನಹರಿಸಬೇಕು. ಇಲ್ಲಿಯ ದೇವಸ್ಥಾನದ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದ್ದು, ಅಭಿವೃದ್ಧಿಗೆ ಅವಕಾಶ ನೀಡಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ.
ದೇವಸ್ಥಾನ ಅಭಿವೃದ್ಧಿಗಾಗಿ ಸಾಕಷ್ಟುಬಾರಿ ಪ್ರಸ್ತಾವನೆಯನ್ನು ಸಲ್ಲಿಸಿದರೂ ಅನುಮತಿ ದೊರೆಯದೇ ಇರುವುದರಿಂದ ಕೋಟ್ಯಂತರ ರು. ದುಡ್ಡು ಬ್ಯಾಂಕ್‌ನಲ್ಲಿ ಕೊಳೆಯುತ್ತಿದೆ. ಇದ್ದ ದುಡ್ಡು ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಸಮಿತಿಯ ಮಾಜಿ ಅಧ್ಯಕ್ಷ ಕೆ. ಬಸವರಾಜ, ಹಿಟ್ನಾಳ ತಿಳಿಸಿದ್ದಾರೆ.
ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟುಹಣ ಇದೆ. ದೇವಸ್ಥಾನದ ಖಾತೆಯಲ್ಲಿಯೇ ಸುಮಾರು 46 ಕೋಟಿ ಇದ್ದು, ಅಭಿವೃದ್ಧಿ ಮಾಡಲು ಮಾಸ್ಟರ್ ಪ್ಲಾನ್ ಸಹ ಮಾಡಲಾಗಿದೆ. ಆದರೂ ಅನುಮತಿ ಸಿಗುತ್ತಿಲ್ಲ ಎಂದು ಹುಲಿಗಿ ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ್ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 3, 2020, 9:44 AM IST