ಮುನಿರಾಬಾದ್‌(ನ.06): ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬರೋಬ್ಬರಿ 8 ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಾಗಿಲು ಗುರುವಾರ ತೆರೆದಿದ್ದು, ಭಕ್ತರು ದರ್ಶನಕ್ಕಾಗಿ ಹರದು ಬಂದಿದ್ದಾರೆ.

ದೇವಸ್ಥಾನ ತೆರೆಯುವ ಮಾಹಿತಿ ಸ್ಪಷ್ಟವಾಗಿ ಇಲ್ಲದೆ ಇರುವುದರಿಂದ ಅಷ್ಟಾಗಿ ಭಕ್ತರು ಆಗಮಿಸಿರಲಿಲ್ಲ. ಕೇವಲ 2-3 ಸಾವಿರ ಭಕ್ತರು ಆಗಮಿಸಿದ್ದಾರೆ. ಸಾಮಾನ್ಯವಾಗಿ ಹುಲಿಗೆಮ್ಮ ದೇವಸ್ಥಾನಕ್ಕೆ ಶುಕ್ರವಾರ ಹಾಗೂ ಮಂಗಳವಾರವೇ ಅಧಿಕ ಪ್ರಮಾಣದಲ್ಲಿ ಭಕ್ತರು ಹರಿದು ಬರುತ್ತಾರೆ. ಹೀಗಾಗಿ, ಶುಕ್ರವಾರ ಹತ್ತಾರು ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರದಲ್ಲಿ ಸರದಿಯಲ್ಲಿಯೇ ನಿಂತು ದರ್ಶನ ಪಡೆಯಬೇಕಾಗಿದೆ. ಮಾಸ್ಕ್‌ ಹಾಕಿದವರಿಗೆ ಮಾತ್ರ ದರ್ಶನ ನೀಡಲಾಗುತ್ತದೆ. ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ತಾಪಮಾನ ತಪಾಸಣೆ, ಏರುಪೇರು ಇದ್ದವರಿಗೆ, ವೃದ್ಧರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಸ್ಯಾನಿಟೈಸರ್‌ ವ್ಯವಸ್ಥೆ ಸಹ ಮಾಡಲಾಗಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆ, ಹರಕೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳಿಗೆ ಇನ್ನು ಅವಕಾಶ ನೀಡಿಲ್ಲ. ನೇರವಾಗಿ ಬಾಗಿಲು ಮೂಲಕ ಪ್ರವೇಶ ಮಾಡಿ, ದರ್ಶನ ಪಡೆದು, ವಾಪಸಾಗಬೇಕು.

ಕೊಪ್ಪಳ: ಬರೋಬ್ಬರಿ 7 ತಿಂಗಳ ಬಳಿಕ ಭಕ್ತರಿಗೆ ಹುಲಿಗೆಮ್ಮ ದೇವಿ ದರ್ಶನ ಭಾಗ್ಯ..!

ಧನ್ಯತಾ ಭಾವ:

ಭಕ್ತರಲ್ಲಿ ಒಂದು ರೀತಿಯ ಧನ್ಯತಾ ಭಾವನೆ ಎದ್ದು ಕಾಣುತ್ತಿತ್ತು. ನಾನು ಮತ್ತೆ ಅಮ್ಮನ ದರ್ಶನ ಮಾಡುತ್ತೇನೋ ಇಲ್ಲವೋ ಎನ್ನುವಂತೆ ಆಗಿತ್ತು. ನಮ್ಮ ಜೀವಮಾನದಲ್ಲಿಯೇ ಇಷ್ಟುದಿನಗಳ ಕಾಲ ಅಮ್ಮನ ದರ್ಶನ ಇಲ್ಲದೆ ಇರಲಿಲ್ಲ. ಅದ್ಯಾವ ಕೋವಿಡ್‌ ಬಂತೋ ನಮಗೆ ಅಮ್ಮನ ದರ್ಶನವನ್ನು ಕಿತ್ತುಕೊಂಡಿತು ಎಂದು ಬಂದಿದ್ದ ಭಕ್ತರಾದ ಹುಲಿಗೆಮ್ಮ ತಮ್ಮ ಅನುಭವ ಹೇಳಿಕೊಂಡರು.

ನನಗೆ ಈಗ ಸುಮಾರು 65 ವರ್ಷ, ಕಳೆದ 30 ವರ್ಷಗಳಿಂದ ನಾನು ಅಮ್ಮನ ದರ್ಶನಕ್ಕಾಗಿ ಬರುತ್ತಿದ್ದೇನೆ. ವರ್ಷಕ್ಕೆ ಒಂದು ಬಾರಿ ಕಡ್ಡಾಯವಾಗಿ ಬರುತ್ತೇನೆಯಾದರೂ ಆಗಾಗ ಹುಣ್ಣಿಮೆಗೂ ಬಂದು ಹೋಗುತ್ತೇನೆ. ಇದೇ ಮೊದಲ ಬಾರಿಗೆ ಅಮ್ಮನ ಬಾಗಿಲು ಮುಚ್ಚಿರುವುದು ಎನ್ನುತ್ತಾರೆ.

ತೆರೆದ ದೇವಸ್ಥಾನ:

ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ಗುರುವಾರದಿಂದ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ದೇವರ ದರ್ಶನ ಹೊರತುಪಡಿಸಿ ಯಾವುದೇ ಸೇವೆಗೆ ಅವಕಾಶವಿರುವುದಿಲ್ಲ. ದೇವಸ್ಥಾನದಲ್ಲಿ ಭಕ್ತರು ಉಳಿದುಕೊಳ್ಳಲು ವಸತಿ, ದಾಸೋಹ, ಪ್ರಸಾದ, ತೀರ್ಥ ವ್ಯವಸ್ಥೆ ಇರುವುದಿಲ್ಲ. ಸಾರ್ವಜನಿಕರು ಕೋವಿಡ್‌ ನಿಯಮಗಳನ್ನು ಪಾಲಿಸಿ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಿಳಿಯುವುದು ಇಲ್ಲೇ ಮೊದಲು...

ನ. 5ರಂದು ದೇವಸ್ಥಾನ ತೆರೆಯಲಾಗುವುದು ಎಂದು ಮೊದಲು ವರದಿ ಮಾಡಿದ್ದು ಕನ್ನಡಪ್ರಭ. ನ. 4ರಂದು ಈ ಕುರಿತು ವರದಿ ಪ್ರಕಟವಾಗಿತ್ತು. ಈ ಮೂಲಕ ಭಕ್ತರಿಗೆ ನಿಖರ ಮಾಹಿತಿ ನೀಡಿತ್ತು. ಬೆಳಗ್ಗೆ 7 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಬೆಳಗ್ಗೆ ಸುಮಾರು 300ರಿಂದ 500 ಜನರು ಅಮ್ಮನವರ ದರ್ಶನ ಪಡೆದರು. ಸಂಜೆ 6 ಗಂಟೆ ವರೆಗೆ ಸುಮಾರು 3,000 ಭಕ್ತರು ಅಮ್ಮನವರ ದರ್ಶನ ಪಡೆದರು. ನಾಳೆ ಶುಕ್ರವಾರದ 10ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನದ ಸಮಿತಿ ಸದಸ್ಯರಾದ ವಿಜಯಕುಮಾರ ಶೆಟ್ಟಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.