ಇತ್ತೀಚೆಗೆ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. 

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಫೆ.17): ಇತ್ತೀಚೆಗೆ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಇದರಿಂದ ಗಡಿನಾಡು ಚಾಮರಾಜನಗರ ವಿಶ್ವವಿದ್ಯಾಲಯದ ಭವಿಷ್ಯವೂ ಡೋಲಾಯಮಾನವಾಗಿದ್ದು ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ನೋಂದಣಿ ಸರಾಸರಿ ಶೇಕಡಾ 36ರಷ್ಟಿದ್ದರೆ ಚಾಮರಾಜನಗರ ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ನೋಂದಣಿ ಕೇವಲ ಶೇಕಡಾ 10.08 ಮಾತ್ರ ಇದ್ದು ಕಳವಳಕಾರಿಯಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಸೂಚ್ಯಂಕದಲ್ಲು ಇದು ಪ್ರಸ್ತಾಪವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

ಜಿಲ್ಲೆಯಾದ ಎಷ್ಟೋ ವರ್ಷಗಳ ನಂತರ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗು ಸರ್ಕಾರಿ ಮೆಡಿಕಲ್ ಕಾಲೇಜುಗಳು ತಲೆ ಎತ್ತಿವೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಹೊಂದಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ 2023 ರಲ್ಲಿ ಚಾಮರಾಜನಗರ ವಿಶ್ವ ವಿದ್ಯಾಲಯ ಸ್ಥಾಪಿಸಿತ್ತು. ಆ ಮೂಲಕ ಜಿಲ್ಲೆಯ ಹಿಂದುಳಿದ, ದಲಿತ ಹಾಗು ಕಾಡಂಚಿನ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಪೂರಕ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇದೀಗ ಚಾಮರಾಜನಗರ ವಿಶ್ವ ವಿದ್ಯಾಲಯ ಸೇರಿದಂತೆ ಒಂಬತ್ತು ವಿಶ್ವ ವಿದ್ಯಾಲಯ ಗಳನ್ನು ಮುಚ್ಚುಲು ಸರ್ಕಾರ ನಿರ್ಧಾರ ಕೈಗೊಂಡಿರುವುದರಿಂದ ಉನ್ನತ ಶಿಕ್ಷಣ ಪಡೆಯಬೇಕೆನ್ನುವ ಗಡಿ ಜಿಲ್ಲೆಯ ಹಿಂದುಳಿದ, ದಲಿತ ಹಾಗು ಕಾಡಂಚಿನ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. 

ತೀರ್ಥಸ್ನಾನ ಮಾಡಲೆಂದು ನದಿಗೆ ಇಳಿದಿದ್ದ ಯೋಗಪಟು ಸಾವು: ಕಾರಣ ಮಾತ್ರ ನಿಗೂಢ?

ಈ ಹಿಂದೆ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ದೂರದ ಮೈಸೂರು ವಿಶ್ವ ವಿದ್ಯಾಲಯವನ್ನು ಅವಲಂಬಿಸಿ ಉನ್ನತ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇತ್ತು. ಆದರೆ ಚಾಮರಾಜನಗರ ಪ್ರತ್ಯೇಕ ವಿಶ್ವವಿದ್ಯಾಲಯ ಆದ ಮೇಲೆ ಸ್ನಾತ್ತಕೋತ್ತರ ಪದವಿಗೆ ವಿದ್ಯಾರ್ಥಿಗಳ ಪ್ರವೇಶಾತಿಯು ಹೆಚ್ಚಾಗಿತ್ತು. ಸ್ವಂತ ಜಿಲ್ಲೆ ಹಾಗು ಹತ್ತಿರ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದಾರೆ. ಪ್ರಸ್ತುತ ಚಾಮರಾಜನಗರ ನೂತನ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 22 ಪದವಿ ಕಾಲೇಜುಗಳಿದ್ದು 7 ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ನಾತಕೋತ್ತರ ಕೇಂದ್ರದಲ್ಲಿ 700 ಕ್ಕು ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಸ್ನಾತ್ತಕೋತ್ತರ ಕೇಂದ್ರದಲ್ಲಿ ಹೆಚ್ಚು ವಿದ್ಯಾರ್ಥಿನಿಯರೇ ಇರುವುದು ಗಮನಾರ್ಹವಾಗಿದೆ. ಗಡಿ ಭಾಗದ ಹಾಗು ಕಾಡಂಚಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದಾರೆ. 

ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಭತ್ತು ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಲ್ಲಿ ಚಾಮರಾಜನಗರ ವಿಶ್ವ ವಿದ್ಯಾಲಯವು ಸೇರಿದೆ. ಕೇವಲ ಎರಡು ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ನೂತನ ವಿಶ್ವವಿದ್ಯಾನಿಲಯ ಎಲ್ಲಿ ರದ್ದಾಗಿಬಿಡುತ್ತದೋ ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ಒಂದು ವೇಳೆ ಚಾಮರಾಜನಗರ ವಿಶ್ವವಿದ್ಯಾಲಯವನ್ನು ಮತ್ತೆ ಮೈಸೂರು ವಿಶ್ವವಿದ್ಯಾಲದೊಂದಿಗೆ ವಿಲೀನ ಮಾಡಿದರೆ ಬಹುತೇಕ ಹೆಣ್ಣು ಮಕ್ಕಳು ಹಾಗು ಗಡಿಭಾಗದ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ದೂರದ ಮೈಸೂರಿಗೆ ಹೋಗಲಾಗದೆ ಉನ್ನತ ಶಿಕ್ಷಣದಿಂದ ವಂಚಿತರಾಗುವ ಆತಂಕವು ಸೃಷ್ಟಿಯಾಗಿದೆ. ಹಿಂದುಳಿದ ಪ್ರದೇಶಗಳಲ್ಲಿ ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಬೇಕು ಎಂದು ಯುಜಿಸಿ ಹೇಳುತ್ತದೆ ಚಾಮರಾಜನಗರ ಶೈಕ್ಷಣಿಕವಾಗಿ ಹಿಂದುಳಿದಿದೆ ಜಿಲ್ಲೆಯ ಶೈಕ್ಷಣಿಕ ಉನ್ನತಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಅತ್ಯಗತ್ಯ. ಇದರಿಂದ ಗಡಿ ಹಾಗು ಕಾಡಂಚಿನ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಸಿಗಲಿದೆ, ಅಲ್ಲದೆ ಇಲ್ಲಿನ ಹಿಂದುಳಿದ, ದಲಿತ ಹಾಗು ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಹಾಗಾಗಿ ಚಾಮರಾಜನಗರ ಪ್ರತ್ಯೇಕ ವಿವಿ ಉಳಿಯಲೇಬೇಕು ಎಂದು ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ನಡೆಸಿವೆ. 

ಸಂಪೂರ್ಣ ಹದಗೆಟ್ಟ ಹನೂರು-ಬಂಡಳ್ಳಿ ಮಾರ್ಗದ ರಸ್ತೆ: ಗುಂಡಿಮಯ ರಸ್ತೆಯಲ್ಲಿ ಒಂದಲ್ಲ ಒಂದು ಆಕ್ಸಿಡೆಂಟ್!

ಚಾಮರಾಜನಗರ ವಿಶ್ವವಿದ್ಯಾಲಯ 54 ಎಕರೆ ಪ್ರದೇಶದಲ್ಲಿ ಆಡಳಿತ ಸೌಧ, ಶೈಕ್ಷಣಿಕ ಕೊಠಡಿಗಳ ಸಂಕೀರ್ಣ, ಅತ್ಯಾಧುನಿಕ ಪ್ರಯೋಗಾಲಯ, ಕಂಪ್ಯೂಟರ್ ಸೆಂಟರ್, ವಿದ್ಯಾರ್ಥಿ ನಿಲಯ ಮೊದಲಾದ ಮೂಲಭೂತ ಸೌಲಭ್ಯ ಹೊಂದಿದೆ.ಆದರೆ ಆರ್ಥಿಕ ಕಾರಣಗಳಿಗಾಗಿ ಚಾಮರಾಜನಗರ ವಿಶ್ವ ವಿದ್ಯಾಲಯ ರದ್ದುಪಡಿಸುವುದು ಸರಿಯಾದ ಕ್ರಮವಲ್ಲ. ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಪ್ರತ್ಯೇಕ ವಿಶ್ವವಿದ್ಯಾಲಯ ಮುಂದುವರಿಯಬೇಕು ಆ ಮೂಲಕ ಗಡಿ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆಇನ್ನಷ್ಟು ಪೂರಕ ಸೌಕರ್ಯ ಕಲ್ಪಿಸಬೇಕು ಎಂಬ ಒತ್ತಾಯ ಸಾಹಿತಿಗಳು, ಪೋಷಕರು, ಪ್ರಗತಿಪರ ಚಿಂತಕರು ಹಾಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.