ಬೆಳಗಾವಿ: ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧ, ಕಾರಜೋಳ
* ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ ಸ್ವೀಕರಿಸಿ ಸಚಿವ ಕಾರಜೋಳ ಭರವಸೆ
* ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದಲ್ಲಿ ಕಳೆದ 2 ವರ್ಷ ಉತ್ತಮ ಕೆಲಸ ಮಾಡಿದೆ
* ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಹೆಚ್ಚಿನ ಅಭಿವೃದ್ಧಿ ಕಾಣಲಿದೆ
ಬೆಳಗಾವಿ(ಆ.09): ರಾಜ್ಯದಲ್ಲಿ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಜನರನ್ನೆಲ್ಲ ಕಾಡುತ್ತಿರುವ ಕೊರೋನಾ ಮಹಾಮಾರಿಯ 3ನೇ ಅಲೆ ತಡೆಯಲು ಸರ್ಕಾರ ಬದ್ಧವಾಗಿರುವಾಗ ಸರ್ಕಾರದ ಜೊತೆ ಸೇವೆ ಮಾಡಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದ ಆರ್‌ಪಿಡಿ ವೃತ್ತದಲ್ಲಿರುವ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕಳೆದ 2 ವರ್ಷ ಉತ್ತಮ ಕೆಲಸಮಾಡಿದ್ದು ಬರುವ ದಿನಗಳಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಪಕ್ಷದ ಕಾರ್ಯಾಲಯ ಕಟ್ಟಡ ಕಟ್ಟಲು ಇರುವ ಸಮಸ್ಯೆಗಳನ್ನು ಪರಿಹರಿಸಿ ಶೀಘ್ರದಲ್ಲಿ ಅತ್ಯುತ್ತಮ ಕಟ್ಟಡ ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಕಳೆದ 60 ವರ್ಷಗಳಿಗೂ ಹೆಚ್ಚಿನ ಅವಧಿ ದೇಶವನ್ನು ಆಳಿದ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡಿ ದೇಶದ ಸ್ಥಿತಿಯನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಇವರ ಕೃಪಾಪೋಷಿತವಾಗಿ ಪಿ.ವಿ.ನರಸಿಂಹರಾವ್ ಹಾಗೂ ಮನಮೋಹನ ಸಿಂಗ್ ಪ್ರಧಾನಿಗಳಾಗಿ ಅವರ ಕೈಗೊಂಬೆಯಾಗಿದ್ದರು. ಇದರಿಂದ ಇಂದು ದೇಶದಲ್ಲಿ ಪಂಜಾಬ್‌ನಲ್ಲಿ ಬಿಟ್ಟರೆ ಎಲ್ಲಿಯೂ ಸ್ವತಂತ್ರವಾಗಿ ಆಳ್ವಿಕೆ ಮಾಡದ ಅಧೋಗತಿಗೆ ಕಾಂಗ್ರೆಸ್ ಹೋಗಿದ್ದು ಬರುವ ದಿನಗಳಲ್ಲಿ ಅಡ್ರೆಸ್ ಇಲ್ಲದಂತೆ ಮಾಡುವ ಜವಾಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ ಎಂದರು.
ಅಥಣಿ: ಪ್ರವಾಹ ಆಯ್ತು ಈಗ ಸಾಂಕ್ರಾಮಿಕ ರೋಗ ಭೀತಿ
ಪ್ರಪಂಚದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮಳೆಯ ಹಾಗೂ ಕೊರೋನಾ ಅಬ್ಬರ ಕಡಿಮೆಯಾದನಂತರ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿಯನ್ನು ಇನ್ನಷ್ಟುಬಲವರ್ಧನೆಗೊಳಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸಂಜಯ ಪಾಟೀಲರನ್ನು ಒಳಗೊಂಡು ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ಗೋವಿಂದ ಕಾರಜೋಳ ಅವರ ಕಾರ್ಯಕ್ಷಮತೆಯಿಂದ ಇಂದು ಮತ್ತೊಮ್ಮೆ ಮಂತ್ರಿಗಳಾಗಿ ಹಂಗಾಮಿ ಜಿಲ್ಲಾ ಉಸ್ತುವಾರಿಗಳಾಗಿ ಆಗಮಿಸಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮನೋಹರ ಕಡೊಲ್ಕರ, ಯುವರಾಜ ಜಾಧವ, ಸಂದೀಪ ದೇಶಪಾಂಡೆ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಎಫ್.ಎಸ್.ಸಿದ್ದನಗೌಡರ, ಸಂಜಯ ಕಂಚಿ, ನೀತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ಶಾಂತಾ ಮಡ್ಡಿಕರ, ಯಲ್ಲೇಶ ಕೋಲಕಾರ, ಚೇತನಾ ಅಗಸಿಕರ, ಪ್ರೀಯಾಂಕಾ ಅಜ್ರೇಕಾರ, ಶ್ವೇತಾ ಜಗದಾಳೆ ಮುಂತಾದವರು ಇದ್ದರು.