ಅಥಣಿ: ಪ್ರವಾಹ ಆಯ್ತು ಈಗ ಸಾಂಕ್ರಾಮಿಕ ರೋಗ ಭೀತಿ
* ಪ್ರವಾಹ ಇಳಿಮುಖವಾದ ಗ್ರಾಮಗಳಲ್ಲಿ ಈಗ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ
* ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ತಗ್ಗಿದ ಪ್ರವಾಹ ಪರಿಸ್ಥಿತಿ
* ಕೊರೋನಾ 3ನೇ ಅಲೆಯ ಆತಂಕದ ಮಧ್ಯೆ ಸಾಂಕ್ರಾಮಿಕ ರೋಗದ ಭೀತಿ
ಅಣ್ಣಾಸಾಬ ತೆಲಸಂಗ
ಅಥಣಿ(ಆ.04): ಕೃಷ್ಣಾ ಕೊಳ್ಳದ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕ್ಷೀಣಗೊಂಡಿದೆ. ಮಾತ್ರವಲ್ಲ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿಯೂ ಬರುತ್ತಿರುವ ನೀರಿನ ಹರಿಯುವಿಕೆಯ ಪ್ರಮಾಣವು ಕೂಡ ಇಳಿಮುಖಗೊಂಡಿದೆ. ಹೀಗಾಗಿ ಕೃಷ್ಣಾ ನದಿಯ ಭೋರ್ಗರೆತದಿಂದ ಉಂಟಾಗಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಕೂಡ ತಗ್ಗಿದೆ. ಆದರೆ, ಈಗ ಮತ್ತೊಂದು ಸಮಸ್ಯೆ ಪ್ರವಾಹ ಬಾಧಿತ ಜನರನ್ನು ಕಾಡಲು ಆರಂಭಿಸಿದೆ.
ಕೃಷ್ಣಾ ನದಿಯ ಅಬ್ಬರ ಕಡಿಮೆಯಾಗಿದ್ದರಿಂದ ಅಥಣಿ ತಾಲೂಕಿನ 22 ಗ್ರಾಮಗಳಲ್ಲಿ ಆವರಿಸಿದ್ದ ನೀರಿನ ಪ್ರಮಾಣ ಸಂಪೂರ್ಣ ಇಳಿಮುಖಗೊಂಡಿದೆ. ಸಂಚಾರ ಆರಂಭಗೊಂಡಿದೆ. ಜನರು ಕೂಡ ತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ನೀರು ಇಳಿಮುಖಗೊಂಡಿದ್ದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗದ ಭೀತಿ ಗ್ರಾಮಸ್ಥರಲ್ಲಿ ಆವರಿಸಿದೆ. ಹೀಗಾಗಿ ಜನರು ಮನೆಗಳಿಗೆ ಹೋದರೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕೊರೋನಾ ಆರ್ಭಟ ನಡುವೆ ಸಾಂಕ್ರಾಮಿಕ ರೋಗ ಭೀತಿ:
ಈಗಾಗಲೇ ಕೊರೋನಾ ಎರಡನೇ ಅಲೆ ಬಂದು ತನ್ನ ಆರ್ಭಟ ಪ್ರದರ್ಶಿಸಿದೆ. ಮೂರನೇ ಅಲೆ ಬರಬಹುದು ಎಂದು ತಜ್ಞರು ಕೂಡ ಲೆಕ್ಕಾಚಾರ ಹಾಕಿದ್ದಾರೆ. ಜತೆಗೆ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ. ಇದರ ನಡುವೆ ಅಥಣಿ ತಾಲೂಕಿನ 22 ಗ್ರಾಮಗಳ ಜನರಿಗೆ ಪ್ರವಾಹ ಬಂದಿರುವುದು ಕೊರೋನಾ ಮೂರನೇ ಅಲೆಯ ಆತಂಕ ಮತ್ತಷ್ಟುಸಂಕಷ್ಟವನ್ನು ತಂದೊಡ್ಡಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಮೂರನೇ ಅಲೆಯಾದ ಕೊರೋನಾ ಡೆಲ್ಟಾಪ್ಲಸ್ ಆರ್ಭಟ ಶುರುವಾಗಿದೆ. ಇದು ಮಹಾರಾಷ್ಟ್ರದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಥಣಿ ತಾಲೂಕಿನ ಗಡಿ ಗ್ರಾಮಗಳಲ್ಲಿನ ಜನರಿಗೆ ತೀವ್ರ ತೊಂದರೆಯನ್ನು ತಂದಿದೆ. ಹೀಗಾಗಿ ಜನರು ಭಯದಿಂದಲೇ ತಮ್ಮ ನಿತ್ಯ ವಹಿವಾಟನ್ನು ನಡೆಸುವಂತಹ ಪರಿಸ್ಥಿತಿ ಉದ್ಭವವಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಕ್ಷೀಣ: ಕೃಷ್ಣಾ ನದಿ ಪ್ರವಾಹ ಇಳಿಮುಖ
ಅಥಣಿ ತಾಲೂಕಿನ ನದಿ ಇಂಗಳಗಾಂವ, ದರೂರು, ಸತ್ತಿ, ಸಪ್ತಸಾಗರ, ಹುಲಗಬಾಳ ಸೇರಿದಂತೆ 22 ಗ್ರಾಮಗಳಲ್ಲಿ ಈಗಾಗಲೇ ಪ್ರವಾಹ ಇಳಿಮುಖವಾಗಿದೆ. ಆದರೆ, ನದಿ ತಂದಿಟ್ಟಿರುವ ಕೆಸರು ಗ್ರಾಮಗಳಲ್ಲಿ ಹಾಗೆ ಇದೆ. ಹೀಗಾಗಿ ಜನರು ತಮ್ಮ ಮನೆ, ಗ್ರಾಮವನ್ನು ಸ್ವಚ್ಛ ಮಾಡುವುದರಲ್ಲಿಯೇ ಕಾಲ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿದೆ. ಕೇವಲ ಸ್ವಚ್ಛತೆ ಮಾತ್ರವಲ್ಲ, ಮಲೇರಿಯಾ, ಕಾಲರಾದಂತಹ ಸಾಂಕ್ರಾಮಿಕ ರೋಗ ನಿವಾರಕ ದ್ರಾವಣದ ಸಿಂಪರಣೆಯನ್ನೂ ಮಾಡಬೇಕಿದೆ. ಇದಕ್ಕೆ ಸ್ಥಳೀಯ ಆಡಳಿತ, ತಾಲೂಕು ಆಡಳಿತ ಕೂಡ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ವೃದ್ಧರು, ಮಕ್ಕಳ ಪರದಾಟ:
ಕೊರೋನಾಕ್ಕೆ ವೃದ್ಧರು ಈಗಾಗಲೇ ಪರದಾಡಿದ್ದಾರೆ. ಮೂರನೇ ಅಲೆ ಮಕ್ಕಳನ್ನೇ ಗುರಿಯಾಗಿಸಿಕೊಳ್ಳಲಿದೆ ಎಂಬುವುದು ತಜ್ಞರ ಅಭಿಮತವಾಗಿದೆ. ಈಗಾಗಲೇ ಪ್ರವಾಹಕ್ಕೆ ವೃದ್ಧರು, ಮಕ್ಕಳು, ಬಾಣಂತಿಯರು ಸಾಕಷ್ಟು ರದಾಡಿದ್ದಾರೆ. ವೇದನೆಯನ್ನೂ ಪಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಸಾಂಕ್ರಾಮಿಕ ರೋಗ ಒಂದೆಡೆಯಾದರೆ, ಕೊರೋನಾ ಮೂರನೇ ಅಲೆಯ ಆತಂಕ ಮತ್ತೊಂದೆಡೆಯಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುವುದು ಸರ್ಕಾರಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ನೀರು ಇಳಿದಿದೆ ಎಂಬ ಕಾರಣಕ್ಕೆ ಕೂಡಲೇ ತಮ್ಮ ತಮ್ಮ ಮನೆಗಳಿಗೆ ಹೋಗುವುದನ್ನು ಕೂಡಲೇ ಸಂತ್ರಸ್ತರು ನಿಲ್ಲಿಸಬೇಕಿದೆ. ಅಲ್ಲಿಯವರೆಗೆ ಸರ್ಕಾರ ಸ್ಥಾಪನೆ ಮಾಡಿರುವ ಕಾಳಜಿ ಕೇಂದ್ರಗಳಲ್ಲಿಯೇ ಇದ್ದು ಪ್ರವಾಹ ಪರಿಸ್ಥಿತಿ ಸಂಪೂರ್ಣ ತಹಬದಿಗೆ ಬಂದು, ಮನೆಗಳು, ಗ್ರಾಮಗಳು ಸ್ವಚ್ಛಗೊಂಡ ನಂತರ ಮರಳುವುದು ಸೂಕ್ತ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಆದರೆ, ಕಾಳಜಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಡಿಮೆ ಇದೆ. ಹಲವಾರು ಕುಟುಂಬಗಳು ಒಂದೇ ಸೂರಿನಡಿ ಬರುವುದರಿಂದ ಕೊರೋನಾ ನಿಯಮಗಳ ಪಾಲನೆ ಇಲ್ಲಿ ತುಂಬಾ ಕಷ್ಟಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರವಾಹ ಇಳಿಮುಖವಾಗಿರುವ ಗ್ರಾಮಗಳಲ್ಲಿರುವ ಮನೆಗಳಿಗೆ ಜನರು ಇನ್ನೂ ನಾಲ್ಕೈದು ದಿನಗಳ ಹೋಗುವುದಿಲ್ಲ. ಅವರಿಗೆ ಕಾಳಜಿ ಕೇಂದ್ರದಲ್ಲಿಯೇ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ಮಾಡಲು, ಪ್ರಾಣಿಗಳು ಅಸುನೀಗಿದ್ದರೆ ಅದರ ವಾಸನೆ ಬರದಂತೆ ಸ್ವಚ್ಛತೆ ಮಾಡಲು ಗ್ರಾಪಂ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಡಿಟಿಡಿ ಸಿಂಪರಣೆ ಮಾಡಲು ಗ್ರಾಪಂ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಸಂತ್ರಸ್ತರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಸರ್ಕಾರದಿಂದ ಪ್ರತಿಯೊಂದು ಕುಟುಂಬಕ್ಕೆ 10 ಸಾವಿರ ಹಣ ನೀಡಲಿದ್ದು, ಫಲಾನುಭವಿಗಳಿಗೆ ಆರ್‌ಟಿಜಿಎಸ್ ಮಾಡಲಾಗುತ್ತಿದೆ ಎಂದು ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ತಿಳಿಸಿದ್ದಾರೆ.