Asianet Suvarna News

ಯುವತಿಗೆ ತಗುಲಿದ ಕೊರೋನಾ ಸೋಂಕು: ಸಿರುಗುಪ್ಪ ಸೀಲ್‌ಡೌನ್‌

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗೋಸಬಾಳ್‌ ಗ್ರಾಮ ಸೀಲ್‌ಡೌನ್‌| ಸೋಂಕಿತರೊಂದಿಗೆ ಸಂಪರ್ಕ ಹೊಂದಿದ 22 ಜನರನ್ನು ಕ್ವಾರಂಟೈನ್‌| 28 ದಿನಗಳ ವರೆಗೆ ಗೋಸಬಾಳ್‌ ಗ್ರಾಮ ಸೀಲ್‌ಡೌನ್‌| ಗ್ರಾಮಸ್ಥರು ಹೊರಗೆ ತೆರಳದಂತೆ ಮತ್ತು ಹೊರಗಿನವರು ಗ್ರಾಮದೊಳಗೆ ಬರದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್‌| ಗ್ರಾಮದ 7 ಕಡೆಗಳಲ್ಲಿ ಬ್ಯಾರಿಕೇಡ್‌ ಅಳವಡಿಕೆ|

Gosabal Village Sealdown in siruguppa in Ballari district
Author
Bengaluru, First Published May 14, 2020, 9:41 AM IST
  • Facebook
  • Twitter
  • Whatsapp

ಸಿರುಗುಪ್ಪ(ಮೇ.14): ತಾಲೂಕಿನ ಗೋಸಬಾಳು ಗ್ರಾಮದಲ್ಲಿ 18 ವರ್ಷದ ಯುವತಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಗ್ರಾಮದ 100 ಮೀಟರ್‌ ವ್ಯಾಪ್ತಿಯನ್ನು ತಾಲೂಕು ಆಡಳಿತ ವತಿಯಿಂದ ಸೀಲ್‌ಡೌನ್‌ ಮಾಡಿ ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ಪ್ರದೇಶ ಎಂದು ತಾಲೂಕು ಆಡಳಿತ ಘೋಷಿಸಿದೆ.

ಸೋಂಕಿತ 18 ವರ್ಷದ ಯುವತಿಯನ್ನು ಬಳ್ಳಾರಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದ 22 ಜನರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಗ್ರಾಮದಲ್ಲಿ ಬ್ಯಾರಿಕೇಡ್‌ ಅಳವಡಿಸಿ ಸೀಲ್‌ಡೌನ್‌ ಮಾಡಲಾಗಿದ್ದು, ಜನ, ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಂಗಳವಾರ ರಾತ್ರಿಯೇ ಯುವತಿಗೆ ಕೊರೊನಾ ಪಾಜಿಟಿವ್‌ ಸೋಂಕಿರುವ ಕುರಿತು ವರದಿ ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯೇ ತಹಸೀಲ್ದಾರ್‌ ಎಸ್‌.ಬಿ. ಕೂಡಲಗಿ ಹಾಗೂ ಸಹಾಯಕ ಆಯುಕ್ತ ರಮೇಶ್‌ ಕೋನರೆಡ್ಡಿ, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಿದ್ದಾರೆ.

ಬಳ್ಳಾರಿ: ಕೊರೋನಾ ಸೋಂಕಿತರ ಗುಣಮುಖ ಬೆನ್ನಲ್ಲೇ ಹೊಸ ಪ್ರಕರಣಗಳು ಪತ್ತೆ..!

ಗ್ರಾಮದಲ್ಲಿ ಸೊಂಕಿತ ವ್ಯಕ್ತಿಯ ಮನೆಯ ಸುತ್ತಲು 100 ಮನೆಗಳಲ್ಲಿರುವ ಜನರನ್ನು ಮತ್ತು ಎಲ್ಲ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಕಂಟೈನ್‌ಮೆಂಟ್‌ ಝೋನ್‌ ಎಂದು ಈ ಗ್ರಾಮವನ್ನು ಘೋಷಣೆ ಮಾಡಲಾಗಿದ್ದು, ಗ್ರಾಮಸ್ಥರು ಹೊರಗೆ ಹೋಗುವಂತಿಲ್ಲ ಮತ್ತು ಹೊರಗಿನಿಂದ ಯಾರು ಬರುವಂತಿಲ್ಲ.

ಒಟ್ಟು 10 ತಂಡಗಳಲ್ಲಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಗ್ರಾಮದ 495 ಮನೆಗಳಲ್ಲಿರುವ 2057 ಮತ್ತು ಸೋಂಕಿತ ಯುವತಿಯ ಮನೆಯ ಸುತ್ತಮುತ್ತಲಿರುವ 100 ಮನೆಯಲ್ಲಿನ 372 ಜನರ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗು​ವುದು ಎಂದು ತಾಲೂಕು ಆರೋಗ್ಯಾಧಿಕಾರಿ ಸುರೇಶ್‌ಗೌಡ ತಿಳಿಸಿದ್ದಾರೆ.

28 ದಿನಗಳ ವರೆಗೆ ಈ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಗ್ರಾಮಸ್ಥರು ಹೊರಗೆ ತೆರಳದಂತೆ ಮತ್ತು ಹೊರಗಿನವರು ಗ್ರಾಮದೊಳಗೆ ಬರದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಗ್ರಾಮದ 7 ಕಡೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಗ್ರಾಮಸ್ಥರು ಗುಂಪಾಗಿ ಸೇರಬಾರದು, ಆಶಾ, ಅಂಗನವಾಡಿ ಮತ್ತು ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ 28ದಿನಗಳ ಕಾಲ ಸಮೀಕ್ಷೆ ಮಾಡುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಮುಕ್ತವಾಗಿ ಕೋವಿಡ್‌-19 ರೋಗ ಲಕ್ಷಣಗಳು ಕಂಡುಬಂದರೆ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್‌ ಎಸ್‌.ಬಿ. ಕೂಡಲಗಿ ಸೂಚಿಸಿದರು.

ಬುಧವಾರ ಗ್ರಾಮಕ್ಕೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಭೇಟಿ ನೀಡಿ ಗ್ರಾಮವನ್ನು ಸೀಲ್‌ಡೌನ್‌ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ ತಹಸೀಲ್ದಾರ್‌ ಎಸ್‌.ಬಿ. ಕೂಡಲಗಿ ಅವರಿಂದ ಮಾಹಿತಿ ಪಡೆದರು. ಈ ವೇಳೆ ಮಾತನಾಡಿ, ಗ್ರಾಮವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಘೋಷಣೆ ಮಾಡಿರುವುದರಿಂದ ಗ್ರಾಮಸ್ಥರು ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮನೆಯಿಂದ ಹೊರಬರದಂತೆ ಜಾಗೃತಿ ಮೂಡಿಸಿದರು. ಸಹಾಯಕ ಆಯುಕ್ತ ರಮೇಶ್‌ ಕೋನರೆಡ್ಡಿ, ಸಿಡಿಪಿಒ ರಾಮಕೃಷ್ಣ ನಾಯಕ, ವೈದ್ಯ ನಾಗರಾಜ, ಹಿರಿಯ ಆರೋಗ್ಯ ಸಹಾಯಕ ಗಿರೀಶ್‌ಕುಮಾರ್‌, ತಾಲೂಕು ನೋಡಲ್‌ ಅಧಿಕಾರಿ ಶ್ಯಾಮಪ್ಪ, ಗ್ರಾಪಂ ಪಿಡಿಒ ಬಸವರಾಜ, ಪೌರಾಯುಕ್ತ ಪ್ರೇಮ್‌ಚಾರ್ಲ್ಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಷಾಷು, ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
 

Follow Us:
Download App:
  • android
  • ios