ಬಳ್ಳಾರಿ(ಮೇ.14): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದು ನಿಟ್ಟಿಸಿರು ಬಿಡುತ್ತಿರುವ ಬೆನ್ನಲ್ಲೇ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಲಾರಂಭಿಸಿದೆ.
ನಮ್ಮ ತಾಲೂಕಿನಲ್ಲಿ ಕಾಟವಿಲ್ಲ ಎಂದುಕೊಳ್ಳುತ್ತಿದ್ದ ಊರುಗಳಿಗೂ ವೈರಸ್‌ ಕಾಲಿಡುತ್ತಿದ್ದು ಲಾಕ್‌ಡೌನ್‌ನ ಬಿಸಿ ಎಲ್ಲ ಕಡೆ ವಿಸ್ತರಣೆಯಾಗುತ್ತಿದೆ. ಕಂಟೈನಮೆಂಟ್‌ ಪ್ರದೇಶಗಳಲ್ಲಿ ಜನರು ಸೀಲ್‌ಡೌನ್‌ನ ಪರಿಣಾಮ ಎದುರಿಸುವಂತಾಗಿದೆ.

ಆರಂಭದಲ್ಲಿ ಹೊಸಪೇಟೆ ನಗರದಲ್ಲಿ ಕೊರೋನಾ ವೈರಸ್‌ ಇರುವುದು ಪತ್ತೆಯಾಯಿತು. ಒಂದೇ ಕುಟುಂಬದ ಸದಸ್ಯರಲ್ಲಿ ವೈರಾಣು ಹಬ್ಬಿರುವುದು ದೃಢಪಟ್ಟಿತು. ಜಿಲ್ಲೆಯ ಪೈಕಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಹೊಸಪೇಟೆಯಲ್ಲಿ ಕಂಡು ಬಂದರೂ ಮೊದಲು ಸೋಂಕಿತರ ಕುಟುಂಬ ಸದಸ್ಯರಲ್ಲಿಯೇ ವೈರಾಣು ಗಿರಕಿ ಹೊಡೆಯಿತು. ಈ ಕುಟುಂಬದ ಸದಸ್ಯರು ಬೆಂಗಳೂರಿಗೆ ತೆರಳಿದಾಗ ಸಂಬಂಧಿಕರ ಮನೆಗೆ ಹೋಗಿ ಬಂದಿದ್ದೇ ವೈರಾಣು ಹರಡಲು ಕಾರಣ ಎಂದು ತಿಳಿಯಲಾಯಿತು. ಹೊಸಪೇಟೆಯ ಸೋಂಕಿತರು ಗುಣಮುಖರಾಗುತ್ತಿದ್ದಂತೆಯೇ ಸಿರುಗುಪ್ಪ ತಾಲೂಕಿನ ಹೊಸಳ್ಳಿ ಹಾಗೂ ಬಳ್ಳಾರಿಯ ಗುಗ್ಗರಹಟ್ಟಿಪ್ರದೇಶದ ನಿವಾಸಿಗೆ ಕೊರೋನಾ ಇರುವುದು ದೃಢವಾಯಿತು. ಕೌಲ್‌ಬಜಾರ್‌ ಪ್ರದೇಶದ ನಿವಾಸಿಗೆ ಕಂಡು ಬಂದ ವೈರಸ್‌ ಪ್ರಕರಣ ಉತ್ತರಾಖಂಡ್‌ಗೆ ಪ್ರವಾಸಕ್ಕೆ ಹೋಗಿದ್ದ ಹಿನ್ನಲೆಯಲ್ಲಿ ಹರಡಿತು ಎಂಬುದು ಗೊತ್ತಾಯಿತು.

ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ

ಸಿರುಗುಪ್ಪದ ಬಾಲಕನಿಗೆ ನಂಜನಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆತ​ನ ತಂದೆಯಿಂದ ಹರಡಿದೆ ಎಂಬುದು ಖಾತ್ರಿಯಾಯಿತು. ಇನ್ನು ಗುಗ್ಗರಹಟ್ಟಿಪ್ರದೇಶದ ನಿವಾಸಿಗೆ ದೆಹಲಿಗೆ ಹೋಗಿದ್ದ ಹಿನ್ನಲೆಯಲ್ಲಿ ಸೋಂಕು ತಗುಲಿದೆ ಎಂಬುದು ಗೊತ್ತಾಯಿತು.

ಏತನ್ಮಧ್ಯೆ ಸಿರುಗುಪ್ಪದ ಸೋಂಕಿತ ಬಾಲಕ 40 ದಿನಗಳ ಬಳಿಕ ಮಂಗಳವಾರ ಗುಣಮುಖವಾಗಿ ಮನೆಗೆ ತೆರಳಿದ ಎಂದು ನಿಟ್ಟಿಸಿರು ಬಿಡುತ್ತಿರುವಾಗಲೇ ಇದೇ ತಾಲೂಕಿನ ಗೋಸಬಾಳು ಗ್ರಾಮದ ಯುವತಿಗೆ ಸೋಂಕು ಇರುವುದು ಖಚಿತವಾಗಿದೆ. ಭತ್ತದ ನಾಡು ಎಂದೇ ಖ್ಯಾತಿಯಾಗಿರುವ ಸಿರುಗುಪ್ಪದಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿರುವುದು ಸ್ಥಳೀಯ ಜನರಲ್ಲಿ ಭೀತಿ ಮೂಡಿಸಿದ್ದು ಮತ್ತಷ್ಟೂವೈರಾಣು ಸೋಂಕಿತರು ಪತ್ತೆಯಾಗುವ ಗುಮಾನಿ ಎದುರಾಗಿದೆ.
ಸಂಡೂರು ತಾಲೂಕಿನ ಕೃಷ್ಣಾನಗರ ಪ್ರದೇಶದ ಮಹಿಳೆಗೆ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕಂಟೈನ​ಮೆಂಟ್‌ ಎಂದು ಘೋಷಿಸಲಾಗಿದೆ.

ನಿತ್ಯ ನೂರಾರು ಜನರ ತಪಾಸಣೆ

ನಿತ್ಯ ನೂರಾರು ಜನರ ಆರೋಗ್ಯ ತಪಾಸಣೆ ಹಾಗೂ ಗಂಟಲುದ್ರವ ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದ್ದು, ಜಿಲ್ಲೆಯಲ್ಲಿ ವೈರಸ್‌ ನಿಯಂತ್ರಣ ಮಾಡುವ ಕಾರ್ಯ ನಿರಂತರವಾಗಿ ನಡೆದಿದೆ. ಜಿಲ್ಲಾಡಳಿತ ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿಯಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದೆ.

ಚಿಕಿತ್ಸೆಯಲ್ಲಿರುವವರು ಸಹ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ ಎಂಬುದು ನೆಮ್ಮದಿಯ ಸಂಗತಿ. ಆಂಧ್ರಪ್ರದೇಶದ ಗಡಿಭಾಗಗಳ ಗ್ರಾಮಗಳಿಂದ ಜನರು ಬಳ್ಳಾರಿಯತ್ತ ಒಳ ದಾರಿಗಳಿಂದ ನುಸುಳಿ ಬರುತ್ತಿದ್ದಾರೆ. ನಗರ ಹಾಗೂ ತಾಲೂಕಿನ ವಿವಿಧೆಡೆಗಳಲ್ಲಿ ಆಂಧ್ರದವರ ವೈವಾಹಿಕ ಸಂಬಂಧಗಳಿದ್ದು ಬಳ್ಳಾರಿ ಸೇಫ್‌ ಎಂಬ ಕಾರಣಕ್ಕಾಗಿಯೇ ಇಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇವರ ನಿಯಂತ್ರಣಕ್ಕಾಗಿಯೇ ಜೋಳದರಾಶಿ ಬಳಿ ಅಂತರರಾಜ್ಯ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಒಳದಾರಿಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ. ಇದರ ನಡುವೆಯೂ ಆಂಧ್ರದವರು ಒಳ ನುಸುಳಿ ಬರುತ್ತಿದ್ದಾರೆ ಎಂಬ ಆತಂಕ ಗಾಢವಾಗಿದೆ.