ಸಚಿವ ಶಿವಾನಂದ ಪಾಟೀಲರು ಆಲಮಟ್ಟಿಯ ಸಿಲ್ವರ್ ಲೇಕ್‌ನಲ್ಲಿ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ದೋಣಿ ವಿಹಾರಕ್ಕೆ ಮರುಚಾಲನೆ ನೀಡಿದರು. ಆಲಮಟ್ಟಿಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ.
ವಿಜಯಪುರ: ಫೆಬ್ರುವರಿ ತಿಂಗಳಲ್ಲಿಯೇ ಆಲಮಟ್ಟಿ ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟಿಸಿ, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗುವುದು. ಜತೆಗೆ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುವುದು ಎಂದು ಜವಳಿ, ಎಪಿಎಂಸಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಆಲಮಟ್ಟಿಯ ರಾಕ್ ಉದ್ಯಾನದ ಸಿಲ್ವರ್ ಲೇಕ್‌ನಲ್ಲಿ ದೋಣಿ ವಿಹಾರಕ್ಕೆ ಶನಿವಾರ ಮರು ಚಾಲನೆ ನೀಡಿ ಮಾತನಾಡಿದ ಅವರು, 10 ವರ್ಷಗಳಿಂದ ಬಂದಾಗಿದ್ದ ದೋಣಿ ವಿಹಾರಕ್ಕೆ ಇದ್ದ ಎಲ್ಲ ತೊಡಕುಗಳನ್ನು ನಿವಾರಿಸಿ ಚಾಲನೆ ನೀಡಲಾಗಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬರಿಗೂ ₹50 ದಿಂದ ₹100 ವರೆಗೆ ಪ್ರವೇಶ ದರವಿದೆ ಎಂದರು.
ಮನೋರಂಜನಾ ತಾಣದ ಜತೆಗೆ ವಿಜ್ಞಾನ ಪಾರ್ಕ್
ನವೆಂಬರ್‌ನಿಂದ ಜೂನ್‌ವರೆಗೂ ಆಲಮಟ್ಟಿಯಲ್ಲಿ ಸಹಸ್ರಾರು ಪ್ರವಾಸಿಗರು ಆಲಮಟ್ಟಿಗೆ ಬರುತ್ತಾರೆ. ಮೈಸೂರಿನ ಕೆಆರ್‌ಎಸ್ ಬಿಟ್ಟರೇ ಉತ್ತರಕರ್ನಾಟಕಕ್ಕೆ ಆಲಮಟ್ಟಿ ಎಂದರು. ಆಲಮಟ್ಟಿಯನ್ನು ಮನೋರಂಜನಾ ತಾಣದ ಜತೆಗೆ ವಿಜ್ಞಾನ ಪಾರ್ಕ್ ಇದ್ದು, ಇದು ಶೈಕ್ಷಣಿಕ ಪ್ರವಾಸಕ್ಕೂ ಅನುಕೂಲವಾಗಲಿದೆ. ಪ್ರವಾಸಿ ತಾಣವಾಗಿ ರೂಪಗೊಳ್ಳಲು ಇನ್ನಷ್ಟು ಚಟುವಟಿಕೆಗಳು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಆಲಮಟ್ಟಿಯಲ್ಲಿ ಮೀನುಗಾರಿಕೆ ಕಾಲೇಜ್ ಆರಂಭಿಸಿ ಮೀನುಗಾರರಿಗೆ ತರಬೇತಿ ನೀಡುವ ಕುರಿತು 2023-24ರ ಬಜೆಟ್‌ನಲ್ಲಿ ಘೋಷಿಸಿ ಮಂಜೂರಾತಿ ನೀಡಲಾಗಿದೆ ಎಂದರು.
ಪ್ರತಿ ವರ್ಷ 10 ಲಕ್ಷ ಸಸಿ ಬೆಳೆಸುವ ಕಾರ್ಯ
ಕೋಟಿ ವೃಕ್ಷ ಅಭಿಯಾನದಲ್ಲಿ ಪ್ರತಿ ವರ್ಷ 10 ಲಕ್ಷ ಸಸಿಗಳನ್ನು ಆಲಮಟ್ಟಿಯ ವಿವಿಧ ನರ್ಸರಿಗಳಲ್ಲಿ ಬೆಳೆಸುವ ಕಾರ್ಯ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ಸದ್ಯ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ಬೆಳೆಸಿ ವಿತರಿಸಲಾಗುತ್ತದೆ. ಆಲಮಟ್ಟಿಯ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆಯಿಂದಲೂ ಆರಂಭಿಸಲು ಬದ್ಧನಾಗಿದ್ದು, ಅದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗುಜರಾತ್‌ನಲ್ಲಿ ವ್ಯಾಪಾರಿ ಹಾಗೆ ದೇಶದಲ್ಲಿ ಪ್ರಧಾನಿಯಾದ ಮೇಲೆ ನರೇಂದ್ರ ಮೋದಿ ವರ್ತಿಸುತ್ತಿದ್ದಾರೆ. ಮನರೇಗಾದಲ್ಲಿ ಮಹಾತ್ಮಗಾಂಧಿ ಹೆಸರು ತೆಗೆದರು. ಕೇಂದ್ರ ಸರ್ಕಾರ ಶೇ.90 ರಷ್ಟು ನೀಡುತ್ತಿದ್ದ ಅನುದಾನದ ನಾನಾ ಯೋಜನೆಗಳನ್ನು ಮೋದಿ ರದ್ದುಗೊಳಿಸಿದರು. ಪ್ರತಿ ಯೋಜನೆಗೂ ರಾಜ್ಯದ ಪಾಲನ್ನು ಹೆಚ್ಚಿಸಿದರು. ಆದರೆ, ಕೇಂದ್ರಕ್ಕೆ ಹೆಚ್ಚು ತೆರಿಗೆ ಹಣ ಕಟ್ಟುವುದು ನಮ್ಮ ರಾಜ್ಯ. ನಮ್ಮ ಹಣವನ್ನೇ ನಮಗೆ ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯಪಾಲರ ನಡೆ ಖಂಡನೆ:
ಸದನದಲ್ಲಿ ಸರ್ಕಾರದ ಭಾಷಣ ಓದದೇ ದೇಶದಲ್ಲಿ ಹೊಸ ಕರ್ನಾಟಕದ ರಾಜ್ಯಪಾಲರು ಹೊಸ ಫ್ಯಾಷನ್ ಆರಂಭಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೆಸರು ತೆಗೆದು ಹಾಕುವ ಜೊತೆಗೆ ಗ್ರಾಮೀಣ ಜನರ ದುಡಿಯುವ ಹಕ್ಕನ್ನು ಕಿತ್ತುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು ತೆಗೆದು ಹಾಕಲಿ ನೋಡೋಣ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಶೇ.90 ರಷ್ಟು ಅನುದಾನದ ಸ್ಥಗಿತಗೊಳಿಸಿ, ಶೇ.60-40 ಅನುದಾನದ ಯೋಜನೆಗಳನ್ನು ಜಾರಿಗೆ ತಂರುವ ಮೂಲಕ ರಾಜ್ಯಗಳ ಮೇಲೆಯೇ ಭಾರ ಹಾಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಎಸ್.ಆರ್.ಪಾಟೀಲ, ಮುಖ್ಯ ಇಂಜಿನಿಯರ್ ಡಿ.ಬಸವರಾಜ, ಸೂಪರಿಂಟೆಂಡಿಂಗ್ ಇಂಜಿನಿಯರ್ ಅಭಿಮನ್ಯು, ತಾರಾಸಿಂಗ್ ದೊಡಮನಿ, ಡಿಎಫ್‌ಒ ಎನ್.ಕೆ.ಬಾಗಾಯತ್, ಮಹೇಶ ಪಾಟೀಲ, ಶಂಕ್ರಯ್ಯ ಮಠಪತಿ ಮತ್ತಿತರರು ಇದ್ದರು.


