ಲಸಿಕೆ ಪಡೆದ ಜಯದೇವದ ಶೇ.77 ಸಿಬ್ಬಂದಿಯಲ್ಲಿ ಪ್ರತಿಕಾಯ
- ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕೋವಿಡ್ ಲಸಿಕೆ ಪಡೆದಿದ್ದ 140 ಸಿಬ್ಬಂದಿ ಪೈಕಿ 108 ಜನರಲ್ಲಿ ಕೋವಿಡ್-19 ನಿರೋಧಕ ಶಕ್ತಿ
- ಸಂಸ್ಥೆಯ ನಿರ್ದೇಶಕ, ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸಿ.ಎನ್. ಮಂಜುನಾಥ್ ಮಾಹಿತಿ
- 4 ವಾರದ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದಿದ್ದ ಸಿಬ್ಬಂದಿ
ಬೆಂಗಳೂರು (ಮೇ.20): ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕೋವಿಡ್ ಲಸಿಕೆ ಪಡೆದಿದ್ದ 140 ಸಿಬ್ಬಂದಿ ಪೈಕಿ 108 ಜನರಲ್ಲಿ ಕೋವಿಡ್-19 ನಿರೋಧಕ ಶಕ್ತಿ ಉದ್ದೀಪನಗೊಂಡಿರುವುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಸಂಸ್ಥೆಯ ನಿರ್ದೇಶಕ, ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಲಸಿಕೆ ಅಭಿಯಾನ ಆರಂಭಗೊಂಡ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಗಳು 4 ವಾರದ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದಿದ್ದರು. ಇದರಲ್ಲಿ ಶೇ.77 ಮಂದಿ ಕೋವಿಡ್ ವಿರುದ್ಧ ಪ್ರತಿಕಾಯ ಹೊಂದಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.
5 ತಿಂಗಳಲ್ಲಿ ದೇಶದ ಎಲ್ಲರಿಗೂ ಲಸಿಕೆ : 216 ಕೊಟಿ ಡೋಸ್ ಉತ್ಪಾದನೆ
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳು ಸೇರಿದಂತೆ 71 ಪುರುಷರು ಮತ್ತು 69 ಮಹಿಳಾ ಸಿಬ್ಬಂದಿ ಪ್ರತಿಕಾಯ ಪತ್ತೆ ಹಚ್ಚುವ ಪರೀಕ್ಷೆಗೆ ಒಳಗಾಗಿದ್ದಾರೆ. ಎರಡನೇ ಡೋಸ್ ಪಡೆದ 28 ದಿನಗಳ ಬಳಿಕ ಪ್ರತಿಕಾಯ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 17 ಮಂದಿಯಲ್ಲಿ ಮೊದಲ ಅಲೆಯ ಸಂದರ್ಭದಲ್ಲಿ ಸೋಂಕು ಪತ್ತೆಯಾಗಿತ್ತು. ಈ 17 ಮಂದಿಯಲ್ಲಿ 12 ಮಂದಿಯಲ್ಲಿ ಕೋವಿಡ್ ಪ್ರತಿಕಾಯ ದೊಡ್ಡ ಮಟ್ಟದಲ್ಲಿ ಜಾಗೃತವಾಗಿದೆ.
ಲಸಿಕೆಯಿಂದ ಕೋವಿಡ್ ಸಾಂಕ್ರಾಮಿಕಕ್ಕೆ ಪ್ರತಿರೋಧ ಶಕ್ತಿ ಸೃಷ್ಟಿಯಾಗುತ್ತದೆಯೇ ಇಲ್ಲವೆ ಎಂಬ ಅನುಮಾನ ಮತ್ತು ಮೊದಲ ಡೋಸ್‌ನಿಂದ ಎರಡನೇ ಡೋಸ್‌ಗೆ ಕೇವಲ ನಾಲ್ಕು ವಾರಗಳ ಅಂತರ ಇದ್ದವರ ಮೇಲೆ ಲಸಿಕೆಯ ಪರಿಣಾಮ ಏನಾಗಬಹುದು ಎಂಬ ಅನುಮಾನಗಳಿಗೆ ನಮ್ಮ ಸಂಸ್ಥೆಯಲ್ಲಿ ನಡೆದಿರುವ ಪರೀಕ್ಷೆ ಉತ್ತರ ನೀಡಿದೆ ಎಂದು ತಿಳಿಸಿದ್ದಾರೆ.