ಬೆಂಗಳೂರು (ನ.16):  ಪೊಲೀಸರ ಸೋಗಿನಲ್ಲಿ ರಾತ್ರೋರಾತ್ರಿ ಚಿನ್ನಾಭರಣ ತಯಾರಿಸುವ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು ಕೆಲಸಗಾರರಿಗೆ ಬೆದರಿಸಿ ಚಿನ್ನಾಭರಣ ಹಾಗೂ ಮೊಬೈಲ್‌ ದೋಚಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಿಗಳರಪೇಟೆಯ ಗೀತಾ ಜ್ಯುವೆಲ್ಲರ್ಸ್‌ ಮಳಿಗೆಯಲ್ಲಿ ನ.11ರಂದು ಘಟನೆ ನಡೆದಿದ್ದು, 200 ಗ್ರಾಂ ಚಿನ್ನಾಭರಣ ದೋಚಿಸಿದ್ದಾರೆ. ಮಾಲೀಕ ಕಾರ್ತಿಕ್‌ ಎಂಬುವರು ಕೊಟ್ಟದೂರಿನ ಮೇರೆಗೆ ಹಲಸೂರು ಗೇಟ್‌ ಠಾಣೆ ಪೊಲೀಸರು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಭಾವನ ಪತ್ನಿಯ ಹತ್ಯೆಗೈದು ತಾನು ಆತ್ಮಹತ್ಯೆಗೆ ಯತ್ನಿಸಿದ

ಕಾರ್ತಿಕ್‌ ಕಳೆದ ಐದಾರು ತಿಂಗಳಿಂದ ತಿಗಳರಪೇಟೆಯಲ್ಲಿ ಚಿನ್ನಾಭರಣ ತಯಾರಿಸುವ ಅಂಗಡಿ ತೆರೆದಿದ್ದು, ಮಳಿಗೆಯಲ್ಲಿ 10 ಮಂದಿ ಕೆಲಸ ಮಾಡುತ್ತಿದ್ದಾರೆ. ನ.11ರಂದು ಮಧ್ಯಾಹ್ನ 3 ಗಂಟೆಯಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ನಾಲ್ವರು ಅಪರಿಚಿತರು ಮಳಿಗೆ ಬಾಗಿಲು ತಟ್ಟಿದ್ದರು. ಪೊಲೀಸ್‌ ಸಮವಸ್ತ್ರದಲ್ಲಿದ್ದನ್ನು ನೋಡಿದ ಕೆಲಸಗಾರರು ಬಾಗಿಲು ತೆಗೆದಿದ್ದರು. ಒಳನುಗ್ಗಿದ್ದ ದುಷ್ಕರ್ಮಿಗಳು ಸಿಬ್ಬಂದಿಯನ್ನು ನಿಂದಿಸಿ, ಅಂಗಡಿ ಮೇಲೆ ದಾಳಿ ನಡೆಸಿರುವುದಾಗಿ ಹೇಳಿ ಬೆದರಿಸಿದ್ದರು.

ಕೋಲ್ಕತ್ತಾದಲ್ಲಿದ್ದ ಅಂಗಡಿ ಮಾಲೀಕ ಕಾರ್ತಿಕ್‌ಗೆ ಫೋನ್‌ ಮಾಡಿ ವಿಷಯ ತಿಳಿಸಿದ್ದರು. ಕಾರ್ತಿಕ್‌ನೊಂದಿಗೆ ಮಾತನಾಡಿದ್ದ ಕಳ್ಳರು, ‘ನಾವು ಪೊಲೀಸರು. ನಕಲಿ ಚಿನ್ನಾಭರಣ ಮಾರಾಟದ ಬಗ್ಗೆ ಮಾಹಿತಿ ಸಿಕ್ಕಿದೆ. ಪರಿಶೀಲನೆಗಾಗಿ ದಾಳಿ ನಡೆಸಿದ್ದೇವೆ. ಚಿನ್ನಾಭರಣ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಠಾಣೆಗೆ ಬಂದು ಭೇಟಿಯಾಗುವಂತೆ’ ಸೂಚಿಸಿದ್ದರು. ಮರುದಿನವೇ ಕೋಲ್ಕತ್ತಾದಿಂದ ಬಂದಿದ್ದ ಕಾರ್ತಿಕ್‌, ಠಾಣೆಗೆ ಹೋಗಿ ವಿಚಾರಿಸಿದ್ದರು. ಮಳಿಗೆ ಮೇಲೆ ಪೊಲೀಸರಿಂದ ದಾಳಿಯಾಗಿಲ್ಲ. ಯಾವುದೇ ರೀತಿಯ ವಸ್ತುಗಳನ್ನು ಜಪ್ತಿ ಮಾಡಿಲ್ಲ ಎಂಬುದು ಗೊತ್ತಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಳಿಗೆಯಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ದುಷ್ಕರ್ಮಿಗಳು ಬಂದಿದ್ದ ಕಾರಿನ ನಂಬರ್‌ ಪತ್ತೆ ಹಚ್ಚಿ, ನಾಲ್ವರನ್ನು ನಾಗಮಂಗಲದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.