ಬೆಂಗಳೂರು(ನ.16):  ರಾಜೀ ಸಂಧಾನಕ್ಕೆ ಹೋಗಿದ್ದ ವೇಳೆ ಭಾವನ ಪತ್ನಿಗೆ (ವರಸೆಯಲ್ಲಿ ಸಹೋದರಿ) ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಟಿನ್‌ಫ್ಯಾಕ್ಟರಿ ಬಳಿಯ ಅಪಾರ್ಟ್‌ಮೆಂಟ್‌ ನಿವಾಸಿ ಲಾವಣ್ಯ (37) ಕೊಲೆಯಾದವರು. ಆರೋಪಿ ವಿಜಯ್‌ಕುಮಾರ್‌ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಹೇಳಿದ್ದಾರೆ.

ಕರ್ತವ್ಯ ನಿರತ ಪಿಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಬಂಧನ

ವೃತ್ತಿಯಲ್ಲಿ ಟೈಲರ್‌ ಆಗಿರುವ ವಿಜಯಕುಮಾರ್‌, ಐದು ವರ್ಷಗಳ ಹಿಂದೆ ಲಾವಣ್ಯ ಪತಿ ವಾಸುದೇವನ್‌ ಅವರ ಸಹೋದರಿಯನ್ನು ವಿವಾಹವಾಗಿದ್ದ. ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಮನಸ್ತಾಪ ಏರ್ಪಟ್ಟಿತ್ತು.
ಹೀಗಾಗಿ ಪತ್ನಿ ಕೆಲ ತಿಂಗಳ ಹಿಂದೆ ಪತಿಯನ್ನು ತ್ಯಜಿಸಿ ತವರು ಮನೆ ಸೇರಿಕೊಂಡಿದ್ದರು. ಮನೆಗೆ ಬರುವಂತೆ ಎಷ್ಟು ಕೇಳಿಕೊಂಡರು ಪತ್ನಿ ಮನೆಗೆ ವಾಪಸ್‌ ಬಂದಿರಲಿಲ್ಲ. ಇತ್ತೀಚೆಗೆ ವಿಜಯಕುಮಾರ್‌ ವಿರುದ್ಧ ಪತ್ನಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಜೀ ಮಾಡಿಕೊಂಡು ಪತ್ನಿಯನ್ನು ಕರೆದುಕೊಂಡು ಹೋಗಲು ಭಾನುವಾರ ಬೆಳಗ್ಗೆ ಆರೋಪಿ ಲಾವಣ್ಯ ಅವರ ಮನೆಗೆ ಬಂದಿದ್ದ. ಮನೆಯಲ್ಲಿ ಭಾವ ವಾಸುದೇವನ್‌ ಇರಲಿಲ್ಲ. ಈ ವೇಳೆ ಮನೆಯಲ್ಲಿ ಭಾವನ ಪತ್ನಿ ಲಾವಣ್ಯ ಒಬ್ಬರೇ ಇದ್ದರು. ಮಾತಿಗೆ ಮಾತು ಬೆಳೆದು ಆರೋಪಿ ಮನೆಯಲ್ಲಿದ್ದ ಚಾಕುವಿನಿಂದ ಭಾವನ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಬಳಿಕ ತಾನು ಕೂಡ ಚಾಕುವಿನಿಂದ ಕುತ್ತಿಗೆಗೆ ಇರಿದುಕೊಂಡಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.