ಬೆಳಗಾವಿ(ಡಿ.18): ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆಯ ಗುಂಗಿನಲ್ಲಿರುವ ಜಿಲ್ಲೆಯ ಗೋಕಾಕ್ ಕ್ಷೇತ್ರದ ನೂತನ ಬಿಜೆಪಿ ರಮೇಶ್ ಜಾರಕಿಹೊಳಿ ಸ್ವಕ್ಷೇತ್ರದಲ್ಲಿನ ನಡೆದ ರೈಲು ಮಾರ್ಗ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. 

ಹೌದು, ಇಂದು(ಬುಧವಾರ) ಘಟಪ್ರಭಾ - ಚಿಕ್ಕೋಡಿ ನಡುವಿನ ಜೋಡಿ‌ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಲೋಕಾರ್ಪಣೆಗೊಳಿಸಿದ್ದಾರೆ. ಆದರೆ, ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಸಮಾರಂಭ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ರಮೇಶ್ ಜಾರಕಿಹೊಳಿ‌ ಗೈರಾಗಿದ್ದಾರೆ. ಈ ಮೂಲಕ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಸರ್ಕಾರಿ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರು, ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾದ ಮೇಲೆ ರಾಜ್ಯದಲ್ಲಿ ಹೆಚ್ಚು ರೈಲ್ವೆ ಕಾಮಗಾರಿಗಳು ಪೂರ್ಣಗೊಂಡಿವೆ. ಈವರೆಗೂ ದೇಶದಲ್ಲಿ 11 ರೈಲ್ವೆ ಸಚಿವರಾಗಿದ್ದರೂ ಉತ್ತರ ಕರ್ನಾಟಕದಲ್ಲಿ ರೈಲ್ವೆ ಕಾಮಗಾರಿ ಆಗಿರಲಿಲ್ಲ ಎಂದು ಹೇಳಿದ್ದಾರೆ. 

ಸುರೇಶ್ ಅಂಗಡಿ ಬೆಳಗಾವಿ- ಬೆಂಗಳೂರು ಮಧ್ಯೆ ಹೊಸ ರೈಲ್ವೆಯನ್ನು ಆರಂಭಿಸಿದ್ದಾರೆ. ಶೀಘ್ರದಲ್ಲೇ ಹುಬ್ಬಳ್ಳಿಯಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ರೈಲು ಮಾರ್ಗದ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಘಟಪ್ರಭಾ - ಚಿಕ್ಕೋಡಿ ಜೋಡಿ ರೈಲು ಮಾರ್ಗ ಇಂದು ಲೋಕಾರ್ಪಣೆಯಾಗಿದೆ. ಸಮಾರಂಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದ ಅಣ್ಣಾಸಾಬ್ ಜೊಲ್ಲೆ, ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಪ್ರಭಾಕರ್ ಕೋರೆ ಸೇರಿ ಮತ್ತಿತರು ಉಪಸ್ಥಿತರಿದ್ದಾರೆ.