ಬೆಳಗಾವಿ(ನ.28): ಬೇರೆಯವರು ನಮ್ಮ ಜಿಲ್ಲೆಯಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಬಂಡಾಯ ಎದ್ದಿದ್ದು, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್ ಪಕ್ಷ ತೊರೆದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಅನರ್ಹ ಶಾಸಕ ಹಾಗೂ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದ್ದಾರೆ. 

ಗುರುವಾರ ಗೋಕಾಕ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಜಿಲ್ಲೆ, ತಾಲೂಕಿನಲ್ಲಿ ಬೇರೆಯವರ ಹಸ್ತಕ್ಷೇಪವಾಗಿದ್ದರಿಂದ ಬೇಸರವಾಗಿತ್ತು. ಹಿಂದಿನ ವಿದ್ಯಮಾನಗಳ ಬಗ್ಗೆ ನೀವು ಟಿವಿಯಲ್ಲಿ ನೋಡಿದ್ದೀರಿ. ನಾನು ಸಚಿವನಾಗಿದ್ದೆ, ಸ್ವಾರ್ಥಕ್ಕಾಗಿ ಪಕ್ಷ ತ್ಯಜಿಸಿದ ವ್ಯಕ್ತಿ ನಾನಲ್ಲ, ಬಂಡಾಯ ಎದ್ದ ತಕ್ಷಣ ನಾನು ಬಿಜೆಪಿ ಸೇರಲಿಲ್ಲ, 6 ತಿಂಗಳು ಸತತವಾಗಿ ನಮ್ಮ ನಾಯಕರೊಂದಿಗೆ ಮಾತುಕತೆ ನಡೆಸಿದ್ದೆನು. ಆದರೆ ಅವರ ಸೊಕ್ಕಿನಿಂದ ಅನಿವಾರ್ಯವಾಗಿ ಈ ತೀರ್ಮಾನಕ್ಕೆ ಬಂದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜಕೀಯ ಪಕ್ಷದಲ್ಲಿ ಬಿಜೆಪಿ ಬಿಟ್ಟು ಬೇರೆ ನಮಗೆ ದಾರಿ ಇಲ್ಲ, ಗೋಕಾಕ್ ಜನತೆ ಬೆಂಬಲಿಸುತ್ತಾರೆಂದು ಕಠಿಣ ನಿರ್ಧಾರ ಕೈಗೊಂಡಿದ್ದೇನೆ. ನನಗೆ ಮತ್ತೊಂದು ಬಾರಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ಮತದಾರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.