Asianet Suvarna News Asianet Suvarna News

ಆಸ್ಪತ್ರೆಗೆ ಹೋಗಿದ್ದು ಜಾಲಿ ಟ್ರಿಪ್‌ಗೆ ಹೋದಂತೆ ಇತ್ತು: ಕೊರೋನಾ ಗೆದ್ದ ಹೆಡ್‌ ಕಾನ್‌ಸ್ಟೇಬಲ್

ನನಗೆ ಕೊರೋನಾ ಬಂತು ಅಂತ ಯಾವತ್ತೂ ಅನಿಸಲಿಲ್ಲ. ಮನಸ್ಸಿನಲ್ಲಿ ಭಯವಿಲ್ಲದೆ ಹೋದರೆ ಯಾವ ಕಾಯಿಲೇನು ಏನೂ ಮಾಡಲ್ಲ. ಆಸ್ಪತ್ರೆಗೆ ಹೋಗಿದ್ದು ಒಂದು ರೀತಿ ನನಗೆ ಜಾಲಿ ಟ್ರಿಪ್‌ ಅನುಭವ ನೀಡಿತು...! ಕೊರೋನಾ ಸೋಂಕನ್ನು ಮಣಿಸಿ ಮತ್ತೆ ಕರ್ತವ್ಯಕ್ಕೆ ಮರಳಿರುವ ಕಲಾಸಿಪಾಳ್ಯ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಶಿವಣ್ಣ ಅವರ ನುಡಿಗಳಿವು

Going hospital was like a jolly trip says covid19 survivor constable of Bangalore
Author
Bangalore, First Published Jul 23, 2020, 7:15 AM IST

ಬೆಂಗಳೂರು(ಜು.23): ನನಗೆ ಕೊರೋನಾ ಬಂತು ಅಂತ ಯಾವತ್ತೂ ಅನಿಸಲಿಲ್ಲ. ಮನಸ್ಸಿನಲ್ಲಿ ಭಯವಿಲ್ಲದೆ ಹೋದರೆ ಯಾವ ಕಾಯಿಲೇನು ಏನೂ ಮಾಡಲ್ಲ. ಆಸ್ಪತ್ರೆಗೆ ಹೋಗಿದ್ದು ಒಂದು ರೀತಿ ನನಗೆ ಜಾಲಿ ಟ್ರಿಪ್‌ ಅನುಭವ ನೀಡಿತು...! ಇದು ಮಹಾಮಾರಿ ಕೊರೋನಾ ಸೋಂಕನ್ನು ಮಣಿಸಿ ಮತ್ತೆ ಕರ್ತವ್ಯಕ್ಕೆ ಮರಳಿರುವ ಕಲಾಸಿಪಾಳ್ಯ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಶಿವಣ್ಣ ಅವರ ನುಡಿಗಳು.

ಜನದಟ್ಟಣೆ ಪ್ರದೇಶದಲ್ಲಿರುವ ಕಾರಣ ಕಲಾಸಿಪಾಳ್ಯ ಠಾಣೆಗೆ ಕೊರೋನಾ ಆತಂಕ ತಂದಿತ್ತು. ಆ ಠಾಣೆಯ ಶಿವಣ್ಣ ಸೇರಿದಂತೆ 26 ಮಂದಿ ಪೊಲೀಸರು ಸೋಂಕಿತರಾಗಿದ್ದರು. ಅವರಲ್ಲಿ ಪೈಕಿ ಚಿಕಿತ್ಸೆ ಫಲಿಸದೆ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರು ಪ್ರಾಣ ತ್ಯಾಗ ಮಾಡಿದ್ದರು. ಇನ್ನುಳಿದವರು ಕೊರೋನಾ ಗೆದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮುಂಜಾಗ್ರತೆ ವಹಿಸಿದ್ದೆ:

ನನಗೆ ಕೊರೋನಾ ಬಂತು ಅಂತ ಅನಿಸಲಿಲ್ಲ. ಸೋಂಕು ಶುರುವಾದಾಗಲೇ ನಮಗೆ ಅಪಾಯ ತಪ್ಪಿದಲ್ಲ ಅನ್ನೋದು ತಿಳಿದಿದ್ದೆ. ಅದಕ್ಕಾಗಿ ಮುಂಜಾಗ್ರತೆ ವಹಿಸಿದ್ದೆ. ಪೊಲೀಸರ ಕರ್ತವ್ಯ ಮತ್ತು ಜವಾಬ್ದಾರಿ ಬಗ್ಗೆ ಹೇಳಿ ಕುಟುಂಬದವರಿಗೆ ಧೈರ್ಯ ತುಂಬಲಾಗಿತ್ತು. ನಾವು (ಪೊಲೀಸರು) ಸಮಯ ನೋಡಿಕೊಂಡು ಕೆಲಸ ಮಾಡಲಾಗುವುದಿಲ್ಲ. ಸೋಂಕು ಹರಡುವಿಕೆ ಪ್ರಾರಂಭವಾದ ಕೂಡಲೇ ಒಂದು ತಿಂಗಳು ಮನೆಗೆ ಕಾಲಿಡಲಿಲ್ಲ. ಠಾಣೆ ಹತ್ತಿರ ಲಾಡ್ಜ್‌ನಲ್ಲಿ ಕೊಠಡಿ ಪಡೆದು ಸಹೋದ್ಯೋಗಿಗಳ ಜತೆ ನೆಲೆಸಿದ್ದೆ.

ಬೆಂಗ್ಳೂರಿನ ಈ ಏರಿಯಾಗಳಲ್ಲಿ ಹೋಂ ಐಸೋಲೇಷನ್‌ ಅವಕಾಶವಿಲ್ಲ..!

ನಮ್ಮ ಠಾಣಾ ಸರಹದ್ದಿನಲ್ಲಿ ಹೂ, ತರಕಾರಿ ಮಾರುಕಟ್ಟೆಹಾಗೂ ಕಲಾಸಿಪಾಳ್ಯ ಬಸ್‌ ನಿಲ್ದಾಣಗಳಿವೆ. ಇಲ್ಲಿ ಸದಾ ಕಾಲ ಜನ ಸಂದಣಿ ಹೆಚ್ಚಿರುತ್ತದೆ. ಈ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಪರಿಣಾಮ ಸೋಂಕು ಬರುವ ಸಾಧ್ಯತೆಗಳು ಹೆಚ್ಚಿದ್ದವು. ಇದನ್ನು ಮನಗಂಡೇ ಸಾಕಷ್ಟುಎಚ್ಚರಿಕೆ ವಹಿಸಲಾಗಿತ್ತು. ಆದರೂ ಸೋಂಕಿನಿಂದ ತಪ್ಪಿಸಲಾಗಲಿಲ್ಲ. ಸೋಂಕು ಬಂದರೂ ಭಯಪಡಲಿಲ್ಲ. ನನಗೆ ರೋಗದ ಲಕ್ಷಣಗಳಿರಲಿಲ್ಲ. ನಮ್ಮ ಠಾಣೆ ಓರ್ವ ಸಿಬ್ಬಂದಿಗೆ ಮೊದಲು ಸೋಂಕು ದೃಢಪಟ್ಟಿತು. ನಂತರ ಠಾಣೆಯಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಿದಾಗ ನಾನು ಸೇರಿದಂತೆ 24 ಮಂದಿಗೆ ಸೋಂಕಿರುವುದು ಗೊತ್ತಾಯಿತು. ತರುವಾಯ ಅಧಿಕಾರಿಗಳ ಸೂಚನೆ ಮೇರೆಗೆ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಾದೆ.

ವೈದ್ಯರು ಚೆನ್ನಾಗಿ ನೋಡಿಕೊಂಡರು:

ನಮ್ಮನ್ನು ವೈದ್ಯ ದೀಪಕ್‌ ಚೆನ್ನಾಗಿ ನೋಡಿಕೊಂಡರು. ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಸಿ ವಿಟಮನ್‌ ಹಾಗೂ ಪ್ಯಾರಾಸಿಟಮಲ್‌ ಮಾತ್ರೆಗಳನ್ನು ಕೊಡುತ್ತಿದ್ದರು. ಹಾಗೆ ಆ್ಯಂಟಿ ಬಯೋಟಿಕ್‌ ಇಂಜೆಕ್ಷನ್‌ ಕೊಡ್ತಾ ಇದ್ರು. ದಿನ ತಪ್ಪದೆ ರಕ್ತ ಪರೀಕ್ಷೆ ನಡೆಸುತ್ತಿದ್ದರು. ಮೊಟ್ಟೆ, ಹಾಲು, ಕಷಾಯ ಸೇರಿ ಗುಣಮಟ್ಟದ ಆಹಾರ ನೀಡುತ್ತಿದ್ದರು.

ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಯೋಗ..!

14 ದಿನಗಳು ಚಿಕಿತ್ಸೆ ಪಡೆದು ಮನೆಗೆ ಮರಳಿದೆ. ನನಗೆ ಆಸ್ಪತ್ರೆಗೆ ಹೋಗಿದ್ದೇ ಅನಿಸಲಿಲ್ಲ. ಒಂದು ಜಾಲಿ ಟ್ರಿಪ್‌ ಅನುಭವವಾಯಿತು. ನನ್ನ ಜತೆ ಏಳು ಸಹೋದ್ಯೋಗಿಗಳು ಇದ್ದರು. ನಮಗೆ ಚೂರು ತೊಂದರೆ ಆಗಲಿಲ್ಲ. ಕೊರೋನಾಗೆ ಭಯಬೀಳುವ ಅಗತ್ಯವಿಲ್ಲ. ಮನಸ್ಸಿನಲ್ಲಿ ಭಯ ಇಲ್ಲದೆ ಹೋದರೆ ಯಾವ ಕಾಯಿಲೇನೂ ಏನೂ ಮಾಡಲ್ಲ.

Follow Us:
Download App:
  • android
  • ios