Asianet Suvarna News Asianet Suvarna News

ಉಡುಪಿ: ಕಲುಷಿತಗೊಂಡ ಕೋಟಿಲಿಂಗೇಶ್ವರ ದೇಗುಲದ ಪುಷ್ಕರಣಿ, ಮೀನುಗಳು ಸಾವು!

ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು, ಈ ನೀರಿನಲ್ಲಿ ವಾಸಿಸುತ್ತಿದ್ದ ಮೀನುಗಳು ಸಾಯುತ್ತಿವೆ.  ಈ ಬಗ್ಗೆ ದೇವಸ್ಥಾನದವರು,  ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

god fishes dies in udupi Kotilingeshwara temple pushkarani gow
Author
First Published Oct 8, 2022, 10:39 PM IST | Last Updated Oct 8, 2022, 10:39 PM IST

ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಅ.8): ದೇವಾಲಯದ ಪುಷ್ಕರಣಿಯನ್ನು ಅತ್ಯಂತ ಪವಿತ್ರ ಎಂದು ಭಾವಿಸಲಾಗುತ್ತದೆ. ದೇವರ ಅಭಿಷೇಕ ಸಹಿತ ಹಲವು ಪುಣ್ಯಕಾರ್ಯಗಳಿಗೆ ಈ ನೀರನ್ನು ಬಳಸಲಾಗುತ್ತದೆ. ಆದರೆ ದೇವಳದ ಪುಷ್ಕರಣಿಯ ನೀರೇ ಹಾಳಾದರೆ ಏನು ಮಾಡುವುದು? ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು, ಈ ನೀರಿನಲ್ಲಿ ವಾಸಿಸುತ್ತಿದ್ದ ಮೀನುಗಳು ಸಾಯುತ್ತಿವೆ.  ಈ ಬಗ್ಗೆ ದೇವಸ್ಥಾನದವರು, ಸ್ಥಳೀಯಾಡಳಿತ ಹಾಗೂ ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ. ಹಲವು ವರ್ಷಗಳ ಇತಿಹಾಸವಿರುವ ಕೋಟಿತೀರ್ಥ ಪುಷ್ಕರಣಿ ಸುಮಾರು 4 ಎಕರೆ ವಿಸ್ತೀರ್ಣದ್ದಾಗಿದೆ. ಇಷ್ಟೊಂದು ವಿಸ್ತಾರದ ಕೆರೆಯನ್ನು ನೋಡುವುದೇ ಒಂದು ಅದ್ಭುತ ಅನುಭವ. ಈ ಪುಷ್ಕರಣಿಯ ಈಶಾನ್ಯ ದಿಕ್ಕಿನಲ್ಲಿ ಕೊಳಚೆ ನೀರು ಜಿನುಗಿ ಬರುತ್ತಿದ್ದು ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ನೀರು ವಿಪರೀತವಾಗಿ ದುರ್ವಾಸನೆ ಬೀರುತ್ತಿದ್ದು ಕೆರೆಯಲ್ಲಿರುವ ಮೀನುಗಳು ಸಾಯುತ್ತಿವೆ. ಕೆರೆಯ ನೀರಿನ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಪದರದಂತೆ ಕಂಡುಬರುತ್ತಿದೆ. ಪುಷ್ಕರಣಿ ಈಶಾನ್ಯ ಭಾಗದಲ್ಲಿ ಚರಂಡಿಯೊಂದು ಹರಿಯುತ್ತಿದ್ದು ಅಲ್ಲಿಗೆ ಕೆಲವು ಉದ್ಯಮದವರು ಕಲುಷಿತ ನೀರನ್ನು ಬಿಡುತ್ತಾರೆ. ಆ ಚರಂಡಿಯಲ್ಲಿ ನೀರು ತುಂಬಿದಾಗ ದೇವಸ್ಥಾನದ ಕೆರೆ, ನೆರೆಹೊರೆಯ ಪರಿಸರ, ಕೃಷಿಭೂಮಿಗೂ ನೀರು ನುಗ್ಗುತ್ತಿದೆ. ಅಲ್ಲದೇ ಸಮೀಪದ ಹದಿನೈದಕ್ಕೂ ಅಧಿಕ ಮನೆಗಳ ಬಾವಿಯ ನೀರು ಹಾಳಾಗುತ್ತಿದೆ ಎಂದು ಸ್ಥಳೀಯರಿಂದ ಆರೋಪ ಕೇಳಿಬಂದಿದೆ. 

ನಿತ್ಯ ಈ‌ ಪುಷ್ಕರಣಿಯ ನೀರಿನಿಂದ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ ಬರುವ ಭಕ್ತರು ಕೂಡ ಸ್ನಾನ ಹಾಗೂ ತೀರ್ಥ ಪ್ರೋಕ್ಷಣೆ ಮಾಡುವ ಸಂಪ್ರದಾಯ ಕೂಡ ಇದ್ದು ನೀರು ಸಂಪೂರ್ಣ ರಾಡಿಯಾಗಿದೆ.ಕೆರೆಯ ನೀರು ಕಲುಷಿತಗೊಳ್ಳುತ್ತಿದ್ದು, ದೇವರ ಕಾರ್ಯಕ್ಕೆ ಇದೇ ನೀರನ್ನು ಬಳಸುವ ಅನಿವಾರ್ಯತೆ ಇದೆ. ಭಕ್ತರು ಕೂಡ ಇದೇ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನಾರೋಗ್ಯ ಉಂಟಾಗುವ ಅಪಾಯವಿದೆ.ಈ ಕುರಿತು ಸ್ಥಳೀಯಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋಟೇಶ್ವರ ಗ್ರಾ.ಪಂ.ಗೆ ಸಾರ್ವಜನಿಕರು ದೂರು ನೀಡಿದ್ದಾರೆ. 

ಕೋಟಿತೀರ್ಥ ಪುಷ್ಕರಣಿ ಹಾಗೂ ಚರಂಡಿಯಲ್ಲಿ ಕಲುಷಿತ ನೀರು ಹರಿಯುವ ಸ್ಥಳಕ್ಕೆ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ, ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ರಾಯ್ಸನ್ ಡಿಮೆಲ್ಲೂ, ರಾಜು ಮರಕಾಲ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಸುರೇಶ್ ಕಾಮತ್, ಜಗನ್ನಾಥ್ ಭಟ್, ಡಾ.ಕೆ. ಸೋಮಶೇಖರ ಉಡುಪ ಮೊದಲಾದವರು ಮಾಹಿತಿ ನೀಡಿದರು. 

ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

ಕೆರೆ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಸ್ಥಳೀಯರಿಂದ ಗ್ರಾಮಪಂಚಾಯತ್‌ಗೆ ದೂರು ಬಂದಿದೆ. ದೂರಿನಲ್ಲಿ ಸ್ಥಳೀಯ ರೈಸ್‌ಮಿಲ್  ನೀರು ಚರಂಡಿಗೆ ಬೀಡಲಾಗುತ್ತಿದೆ ಎಂಬ ದೂರುಗಳಿವೆ. ಆ ದೂರಿನ ಮೇರೆಗೆ ಸ್ಥಳ‌ ಪರಿಶೀಲನೆ ನಡೆಸಿದ್ದಲ್ಲದೆ ಸಂಬಂಧಪಟ್ಟವರನ್ನು  ಕರೆಸಿ ಮಾಹಿತಿ ಪಡೆಯಲಾಗಿದ್ದು ಅವರು ತಮ್ಮ ಸಮಸ್ಯೆಯಲ್ಲ‌ವೆಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆಯನ್ನು ನೀರನ್ನು ಹೆಚ್ಚಿನ ಮಾಹಿತಿಗಾಗಿ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಪ್ರಯೋಗಲಾಯದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ ತಿಳಿಸಿದ್ದಾರೆ.

ಪ್ರೇಮಕಥೆ ಕೇಳಿ ಪುಷ್ಕರಣಿ ಅಭಿವೃದ್ಧಿ ಮಾಡಿದ ಯಶ್!

ಚರಂಡಿಯಲ್ಲಿ ಕಲುಷಿತ ನೀರು ಹರಿಯುವುದರಿಂದ ಈ ಭಾಗದ ಹದಿನೈದು ಅಧಿಕ ಮನೆಗಳ ಬಾವಿ ನೀರು ಹಾಳಾಗುತ್ತಿದ್ದು ಕುಡಿಯಲು ಯೋಗ್ಯವಾಗಿಲ್ಲ. ಕಳೆದ ಮೂರು ವರ್ಷದಿಂದ ಈ‌ ಸಮಸ್ಯೆ ಅನುಭವಿಸುತ್ತಿದ್ದೇವೆ. ಈಗಾಗಾಲೇ ಗ್ರಾ.ಪಂ ಗೂ ಕೂಡ ಹಲವು ಬಾರಿ ಮನವಿ ನೀಡಲಾಗಿದೆ ಸ್ಥಳೀಯ ನಿವಾಸಿ ಸುರೇಶ್ ಕಾಮತ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios