ಬೆಳಗಾವಿ ಜಿಲ್ಲೆ ವಿಭಜಿಸಲು ಸಿಎಂಗೆ ಬುದ್ದಿ ಕೊಡು: Savadatti Yellamma ದೇವಿಗೆ ಸುದೀರ್ಘ ಪತ್ರ ಹರಕೆ!

ಬೆಳಗಾವಿ 4 ಜಿಲ್ಲೆಗಳನ್ನು ಮಾಡಿ ಎಂದು ಭಕ್ತನ ಸುದೀರ್ಘ ಪತ್ರ. ಸವದತ್ತಿ ಯಲ್ಲಮ್ಮನ ದೇವಿ ದೇವಸ್ಥಾನದ ಹುಂಡಿಯಲ್ಲಿ ಪತ್ರ ಹಾಕಿದ ಭಕ್ತ. ಅಷ್ಟಕ್ಕೂ ಬೆಳಗಾವಿ ಜಿಲ್ಲೆ ವಿಭಜನೆಗೆ ವಿರೋಧ ಇರೋದು‌ ಏಕೆ?

Give brain to CM Belagavi District Partition devotee letter to Savadatti Yellamma Devi gow

ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಸೆ.23): ರಾಜ್ಯ ವಿಧಾನಸಭೆ ಚುನಾವಣೆ ಮುನ್ನಲೆಗೆ ಬರುತ್ತಿದ್ದಂತೆ ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಈ ಮಧ್ಯೆ ಉತ್ತರ ಕರ್ನಾಟಕ ಭಾಗದ ಶಕ್ತಿದೇವತೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಕಾಣಿಕೆ ಹುಂಡಿಗೆ 4 ಪುಟಗಳ ಸುದೀರ್ಘ ಪತ್ರವೊಂದನ್ನು ಬರೆದಿದ್ದಾನೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತರಹೇವಾರು ಚರ್ಚೆಗೆ ಮುನ್ನುಡಿ ಬರೆದಿದೆ‌.‌ ಬೆಳಗಾವಿ ಜಿಲ್ಲಾ ಭಕ್ತ ಮಂಡಳಿ ಹೆಸರಿನಲ್ಲಿ ಪತ್ರ ಬರೆದಿರುವ ಅಪರಿಚಿತ ವ್ಯಕ್ತಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎಂದು ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ‌‌. ಬೆಳಗಾವಿ ಜಿಲ್ಲೆಯನ್ನು ಗೋಕಾಕ, ಚಿಕ್ಕೋಡಿ, ಬೈಲಹೊಂಗ, ಬೆಳಗಾವಿ ಹೀಗೆ 4 ಜಿಲ್ಲೆಗಳನ್ನಾಗಿ ವಿಭಜಿಸಲು ಮುಖ್ಯಮಂತ್ರಿಗೆ ಬುದ್ದಿ ಕೊಡು ಎಂದು ಉಲ್ಲೇಖಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಸುಕ್ಷೇತ್ರ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಇಂದು ಐದನೇ ದಿನ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು ಪ್ರತಿ ಬಾರಿಯಂತೆ ಈ ಬಾರಿಯೂ ಚಿತ್ರ ವಿಚಿತ್ರ ಹರಕೆ ಪತ್ರಗಳು ಪತ್ತೆಯಾಗಿವೆ. ಇದರಲ್ಲಿ ಗಮನ ಸೆಳೆದಿದ್ದು ಬೆಳಗಾವಿ ಜಿಲ್ಲೆಯ ವಿಭಜನೆಗೆ ಮನವಿ ಮಾಡಿರುವ ಪತ್ರ‌‌‌.

ಬೆಳಗಾವಿ ಜೆಲ್ಲೆಯಲ್ಲಿ 14 ತಾಲೂಕುಗಳಿದ್ದು ಮೂಡಲಗಿ, ಗೋಕಾಕ, ಯರಗಟ್ಟಿ ತಾಲೂಕು ಸೇರಿಸಿ ಗೋಕಾಕ ಜಿಲ್ಲೆ ಮಾಡಿ. ಕಿತ್ತೂರು, ಸವದತ್ತಿ, ಬೈಲಹೊಂಗಲ, ರಾಮದುರ್ಗ ಸೇರಿಸಿ ಬೈಲಹೊಂಗಲ ಜಿಲ್ಲೆ ಮಾಡಿ. ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ ತಾಲೂಕು ಸೇರಿಸಿ ಚಿಕ್ಕೋಡಿ ಜಿಲ್ಲಾ ಕೇಂದ್ರ ಮಾಡಿ.‌   ಖಾನಾಪುರ, ಹುಕ್ಕೇರಿ, ಬೆಳಗಾವಿ ತಾಲೂಕು ಸೇರಿಸಿ ಬೆಳಗಾವಿ ಜಿಲ್ಲಾ ಕೇಂದ್ರ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಅಷ್ಟೇ ಅಲ್ಲದೇ ಸವದತ್ತಿ, ಅಥಣಿಗೆ ಉಪವಿಭಾಗಾಧಿಕಾರಿ ಕಚೇರಿ ಮಾಡುವಂತೆ ದೇವಿಯಲ್ಲಿ ಬೇಡಿಕೆ ಇಟ್ಟಿದ್ದಾನೆ ಭಕ್ತ.  1975ರಲ್ಲಿ ಹುಂಡೇಕರ್ ಸಮಿತಿ,  1976ರಲ್ಲಿ ಗದ್ದಿಗೌಡರ ಸಮಿತಿ, 1985ರಲ್ಲಿ ವಾಸುದೇವ ಸಮಿತಿಯಿಂದ ಮನ್ನಣೆ ಪಡೆದ ಗೋಕಾಕ ಜಿಲ್ಲೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 1997ರಲ್ಲಿ ಅಂದಿನ ಜನತಾ ಸರ್ಕಾರದಲ್ಲಿ ಜೆ.ಹೆಚ್‌.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು‌. 1997 ರಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿ ಮೂರು ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿತ್ತು‌‌. ಈಗ 14 ತಾಲೂಕು ಆಗಿವೆ, ಈಗ ನಾಲ್ಕು ಜಿಲ್ಲೆಗಳನ್ನಾಗಿ ಮಾಡಿ. ಯಾದಗಿರಿ ಮೂರು ತಾಲೂಕು ಇದ್ದು, ಜಿಲ್ಲೆ ಮಾಡಿದ್ದಾರೆ. ಕೊಡಗು 2 ವಿಧಾನ ಸಭಾ ಕ್ಷೇತ್ರ ಇದ್ದು ಜಿಲ್ಲೆ ಮಾಡಿದ್ದಾರೆ. ಹಾಗೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನ ಸಭಾ ಕ್ಷೇತ್ರ ಇದ್ದು ನಾಲ್ಕು ಜಿಲ್ಲೆಗಳನ್ನಾಗಿ ಮಾಡಿ. ನಾಲ್ಕು ಜಿಲ್ಲೆ ಮಾಡಿ ಎರಡು ಹೆಚ್ಚುವರಿ ಉಪವಿಭಾಗಾದಿಕಾರಿ ಕಚೇರಿ ಮಾಡುವಂತೆ ಮಾಡು' ಎಂದು ಯಲ್ಲಮ್ಮದೇವಿಯಲ್ಲಿ ಹರಕೆ ಹೊತ್ತಿದ್ದಾನೆ.‌

ಬೆಳಗಾವಿ ಜಿಲ್ಲಾ ವಿಭಜನೆಗೆ ಒತ್ತಾಯ ಏಕೆ?
ಬೆಳಗಾವಿ ಜಿಲ್ಲೆ ವಿಭಜನೆಗೆ ದಶಕಗಳ ಹೋರಾಟದ ಇತಿಹಾಸ ಇದೆ. ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದ ಚಿಕ್ಕೋಡಿ ಉಪವಿಭಾಗದ ಜನತೆ ಹೈರಾಣಾಗುತ್ತಿದ್ದಾರೆ ಎಂದು ಚಿಕ್ಕೋಡಿ ವಿಭಾಗದ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ‌‌‌. ಅಥಣಿ ತಾಲೂಕಿನ ಕೊನೆಯ ಹಳ್ಳಿಯಿಂದ ಬೆಳಗಾವಿಗೆ ಒಟ್ಟು 190 ಕಿಲೋಮೀಟರ್ ದೂರ ಆಗುತ್ತೆ‌‌. ಬೆಳಗಾವಿ ನಗರಕ್ಕೆ ಹೋಗಿ ಬರುವುದಾದರೆ ಸರಿ ಸುಮಾರು 400 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಜಿಲ್ಲಾ ಕೇಂದ್ರಕ್ಕೆ ಹೋಗುವುದು ಅಂದ್ರೆ ಜನಸಾಮಾನ್ಯರಿಗೆ ತೀವ್ರ ಸಂಕಷ್ಟವಾಗುತ್ತಿದ್ದು ಈ ಭಾಗದಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ‌‌.

ಅಷ್ಟಕ್ಕೂ ಬೆಳಗಾವಿ ಜಿಲ್ಲೆ ವಿಭಜನೆಗೆ ವಿರೋಧ ಏಕೆ?
ಮಹಾರಾಷ್ಟ್ರ ಕರ್ನಾಟಕ ಮಧ್ಯೆ ಗಡಿ ವಿವಾದ ಇದ್ದು ಗಡಿ ಮತ್ತು ಭಾಷಾ ಸಮಸ್ಯೆ ಹಿನ್ನೆಲೆ ಬೆಳಗಾವಿ ಜಿಲ್ಲೆ ವಿಭಜನೆ ಬೇಡ ಎನ್ನೋದು ಕನ್ನಡಪರ, ರೈತಪರ ಸಂಘಟನೆಗಳ ವಾದ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಕುರಿತು ಪ್ರತಿಕ್ರಿಯಿಸಿ, '1997ರ ಆಗಸ್ಟ್ 22ರಂದು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಜೆ.ಹೆಚ್‌‌.ಪಟೇಲ್ ಬೆಳಗಾವಿ ಜಿಲ್ಲೆ ಮೂರು ಜಿಲ್ಲೆಗಳನ್ನಾಗಿ ವಿಭಜಿಸುವ ಘೋಷಣೆ ಮಾಡಿದ್ದರು. ಗೋಕಾಕ, ಚಿಕ್ಕೋಡಿ, ಬೆಳಗಾವಿ ಮೂರು ಜಿಲ್ಲೆ ಗಳನ್ನಾಗಿ ವಿಭಜಿಸಲಾಗಿತ್ತು. ಬೆಳಗಾವಿ ಜಿಲ್ಲೆ ಅತಿ ಸೂಕ್ಷ್ಮ ಜಿಲ್ಲೆ. ಗಡಿ ಸಮಸ್ಯೆ ಇರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯನ್ನು ಒಡೆಯಬಾರದು ಎಂದು ಒಂದು ತಿಂಗಳ ಕಾಲ ಹೋರಾಟ ಮಾಡಿದಾಗ 1997ರ ಸೆಪ್ಟೆಂಬರ್‌ನಲ್ಲಿ ತನ್ನ ನಿರ್ಧಾರ ಹಿಂತೆಗೆದುಕೊಂಡಿತು. 

Online Gameನಲ್ಲಿ ಕಳೆದುಕೊಂಡ ಹಣ ಕೊಡಿಸು, ಸವದತ್ತಿ ಯಲ್ಲಮ್ಮನಿಗೆ ಭಕ್ತನ ವಿಚಿತ್ರ ಹರಕೆ

ಈಗ ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಮುನ್ನಲೆಗೆ ಬಂದಿದೆ. ಮುಂಬರುವ ನವೆಂಬರ್ 23 ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆ ಇದೆ.  ಈ ವೇಳೆ ಮಹಾರಾಷ್ಟ್ರದ ಅರ್ಜಿ ವಜಾ ಆಗೋದು ಬಹುತೇಕ ನಿಶ್ಚಿತವಾಗಿದೆ. ಆ ಅರ್ಜಿ ವಜಾ ಬಳಿಕ ಬೆಳಗಾವಿ ಜಿಲ್ಲೆ ಎರಡು ಅಥವಾ ಮೂರು ಜಿಲ್ಲೆಗಳನ್ನಾಗಿ ವಿಭಜಿಸಬಹುದು. ನವೆಂಬರ್ 23ರವರೆಗೂ ಕಾಯಬೇಕು ಎಂದು ಸರ್ಕಾರದ ಬಳಿ ವಿನಂತಿ ಮಾಡುತ್ತೇನೆ. ಚಿಕ್ಕೋಡಿ ಜಿಲ್ಲೆ ಆಗಲು ಚಿಕ್ಕೋಡಿ ಉಪವಿಭಾಗದ ರಾಜಕಾರಣಿಗಳು ಒಂದಾಗಿದ್ದಾರೆ. ಆದ್ರೆ ಗೋಕಾಕ ಜಿಲ್ಲೆ ಮಾಡಲು ರಾಮದುರ್ಗ, ಸವದತ್ತಿ, ಬೈಲಹೊಂಗಲ ತಾಲೂಕಿನ ಜನರ ವಿರೋಧ ಇದೆ. ನವೆಂಬರ್ 23ರಂದು ಬರುವ ಗಡಿವಿವಾದ ವಿಚಾರಣೆ ಮುಗಿಯುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು' ಎಂದು ಒತ್ತಾಯಿಸಿದ್ದಾರೆ‌‌.

ಚಿತ್ರ ವಿಚಿತ್ರ ಹರಕೆ ಚೀಟಿ ಜೊತೆ ಸವದತ್ತಿ ಯಲ್ಲಮ್ಮನ ಹುಂಡಿಗೆ ಕೋಟ್ಯಂತರ ಹಣ! 

ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಗಡಿ ಹಾಗೂ ಭಾಷಾ ಸಮಸ್ಯೆ ಹಿನ್ನೆಲೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು ಎಂಬುದು ಕನ್ನಡಪರ ಸಂಘಟನೆಗಳ ವಾದವಾಗಿದ್ದರೆ ಅಥಣಿ ಭಾಗದಿಂದ ಜಿಲ್ಲಾ ಕೇಂದ್ರವಾದ ಬೆಳಗಾವಿಗೆ ಬರಲು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿರುವ ಹಿನ್ನೆಲೆ ಜಿಲ್ಲೆ ವಿಭಜನೆಗೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಜನ ಆಗ್ರಹಿಸುತ್ತಿದ್ದು ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕು.

Latest Videos
Follow Us:
Download App:
  • android
  • ios