ರೈತರಿಗೆ ಹಿಂಗಾರು ಬೆಳೆ ಪರಿಹಾರ ದೊರಕಿಸಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಪುರಸ್ಕೃತ ಜನಪರ ಕಲ್ಯಾಣ ಯೋಜನೆಗಳನ್ನು ರೈತರಿಗೆ-ಜನರಿಗೆ ಅಧಿಕಾರಿಗಳು ಸಕಾಲಕ್ಕೆ ತಲುಪಿಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದರು.
ಧಾರವಾಡ (ಸೆ.14): ಕೇಂದ್ರ ಪುರಸ್ಕೃತ ಜನಪರ ಕಲ್ಯಾಣ ಯೋಜನೆಗಳನ್ನು ರೈತರಿಗೆ-ಜನರಿಗೆ ಅಧಿಕಾರಿಗಳು ಸಕಾಲಕ್ಕೆ ತಲುಪಿಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ದಿಶಾ ಸಮಿತಿಯ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ಪರಿಹಾರ, ನರೇಗಾ ವಸತಿ, ಸ್ವಚ್ಛ ಭಾರತ, ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಹಿಂಗಾರು ಬೆಳೆ ಪರಿಹಾರ ಹಲವು ರೈತರಿಗೆ ದೊರಕದೆ ಇರುವ ಕುರಿತು ಅಹವಾಲು ಸಲ್ಲಿಸಿದ್ದು ತಹಸೀಲ್ದಾರ್, ಉಪವಿಭಾಗಾಧಿಕಾರಿ ಸ್ಪಂದಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ೨೦೨೩-೨೪ರಲ್ಲಿ ಬರಗಾಲ ಘೋಷಿಸಲಾಗಿದ್ದು ಜಿಲ್ಲೆಯಲ್ಲಿ ೨.೧೧ ಲಕ್ಷ ಹೆಕ್ಟೇರ್ ಹಾನಿ ಅಂದಾಜಿಸಲಾಗಿದೆ. ಅಧಿಕಾರಿಗಳು ವೈಯಕ್ತಿಕವಾಗಿಯೂ ಸಮೀಕ್ಷೆ ಮಾಡಿದ್ದಾರೆ. ಈ ವರ್ಷ ಕೇಂದ್ರಿಕೃತ ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ಕಡ್ಡಾಯವಾಗಿ ಐಡಿ ಹೊಂದಿರಬೇಕೆಂದರು. ನರೇಗಾ ಯೋಜನೆ ಬಹು ಬೇಡಿಕೆಯಲ್ಲಿದ್ದು ಕ್ರಿಯಾಯೋಜನೆ ಪೂರ್ಣಗೊಳಿಸಿ ಮತ್ತೆ ಉದ್ಯೋಗದ ಹಾಗೂ ಕಾಮಗಾರಿ ಬೇಡಿಕೆ ಇದ್ದಲ್ಲಿ ಪೂರೈಸುವಂತೆ ಜಿಪಂ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಉದ್ಯೋಗ ಖಾತರಿಗೆ ಅನುದಾನದ ಕೊರತೆಯಿಲ್ಲ. ೬೦/೪೦ ಕಾಮಗಾರಿ,ವಸ್ತು ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಕ್ರಿಯಾಯೋಜನೆಗಳಿಗೆ ಮಂಜುರಾತಿ ನೀಡುವಂತೆ ತಿಳಿಸಿದರು.
ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಜಿಲ್ಲೆಗೆ ೬೪೪೬ ಗುರಿ ಹೊಂದಲಾಗಿದೆ. ನರೇಗಾ ಅಡಿ ಹೆಚ್ಚು ಉದ್ಯೋಗಕ್ಕೆ ಹಾಜರಾದ ಫಲಾನುಭವಿಗಳಿಗೆ ತಂತ್ರಾಂಶದಲ್ಲಿ ಆದ್ಯತೆ ನೀಡಿದೆ ಎಂದು ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸಭೆಗೆ ತಿಳಿಸಿದರು. ವಸತಿ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ಮನೆಗೆ ₹ ೧.೩೦ ಲಕ್ಷ ನೀಡುತ್ತಿದ್ದು ಅನುದಾನ ಹೆಚ್ಚಿಸುವಂತೆ ಶಾಸಕ ಎನ್.ಎಚ್. ಕೋನರೆಡ್ಡಿ ಸಚಿವರಿಗೆ ಮನವಿ ಮಾಡಿದರು. ಕುಂದಗೋಳದ ಮುಳ್ಳೊಳ್ಳಿ ಗ್ರಾಮ ಸ್ಥಳಾಂತರ ಮೂಲಭೂತ ಸೌಕರ್ಯ ಹಕ್ಕು ಪತ್ರ ವಿತರಣೆ ಕುರಿತು ಗಮನ ಹರಿಸುವಂತೆ ಸಚಿವರು ತಹಸೀಲ್ದಾರ್‌ಗೆ ಸೂಚಿಸಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ, ಜೆಡಿಎಸ್‌ನವರಿಂದಲೇ ಕೋಮುಗಲಭೆ: ಸಚಿವ ಭೋಸರಾಜ್
ಕೇಂದ್ರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಾಲಾ ಕಟ್ಟಡ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಂಪನಿಗಳು ಸಾಮಾಜಿಕ ಜವಾಬ್ದಾರಿ ಸಿಎಸ್‌ಆರ್ ಅನುದಾನದಡಿ ಜಿಲ್ಲೆಗೆ ೨೦೨೨-೨೩ರಲ್ಲಿ ೫೧೫ ಕೊಠಡಿ ಮಂಜೂರು ಮಾಡಿದ್ದು ಸಂಬಂಧಿಸಿದ ಏಜೆನ್ಸಿಗಳು ವೇಗವಾಗಿ ಪಾರದರ್ಶಕವಾಗಿ ಪೂರ್ಣಗೊಳಿಸುವಂತೆ ಸಚಿವರು ಹೇಳಿದರು. ಸಭೆಯಲ್ಲಿ ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.