10 ಕಿಮೀ ಸುತ್ತ ಗಣಿ ಮುಚ್ಚದಿದ್ದರೆ ಕೆಆರ್‌ಎಸ್ ಡ್ಯಾಂಗೆ ಅಪಾಯ..!
* ಮಹಾರೇಖಾಸ್ಥರಭಂಗದ ಮೇಲೆ ನಿಂತಿದೆ ಕೆಆರ್‌ಎಸ್ ಆಣೆಕಟ್ಟು
* ಇದರ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲೇಬೇಕು: ಭೂವಿಜ್ಞಾನಿ
* 9 ತಿಂಗಳ ಹಿಂದೇ ಸ್ಫೋಟ ನಿಷೇಧಕ್ಕೆ ಸಲಹೆ
ಮಂಡ್ಯ ಮಂಜುನಾಥ
ಮಂಡ್ಯ(ಜು.12): ರಾಜ್ಯದಲ್ಲಿರುವ ಅತಿ ದೊಡ್ಡ ಮಹಾರೇಖಾಸ್ಥರಭಂಗ (ಸ್ಥರ ಭಂಗ-ಭೂಮಿಯೊಳಗೆ ಒಂದು ಶಿಲಾಪದರ ಮತ್ತೊಂದು ಶಿಲಾಪದರದೊಂದಿಗೆ ಕೂಡಿಕೊಂಡಿರುವ ರಚನೆ)ದ ಮೇಲೆ ಕೃಷ್ಣರಾಜಸಾಗರ ಜಲಾಶಯ ನಿಂತಿರುವುದರಿಂದ ಕನಿಷ್ಠ ಹತ್ತು ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಇದು ಮೈಸೂರು ಮಾನಸಗಂಗೋತ್ರಿಯ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಬಸವರಾಜಪ್ಪ ನೀಡಿರುವ ಎಚ್ಚರಿಕೆ.
ಸ್ಯಾಟಲೈಟ್ ರಿಮೋಟ್ ಸೆನ್ಸಿಂಗ್ ಮೂಲಕ ಮಾಡಿರುವ ನಕಾಶೆಯ ಪ್ರಕಾರ ಕೊಡಗು ಜಿಲ್ಲೆಯ ಲಕ್ಷ್ಮಣತೀರ್ಥದಿಂದ ಆರಂಭವಾಗುವ ಈ ಮಹಾರೇಖಾಸ್ಥರಭಂಗ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಮೂಲಕ ಬೆಂಗಳೂರು ಅಲ್ಲಿಂದ ಕೋಲಾರದವರೆಗೂ ಹಾದುಹೋಗಿದೆ. ಗಣಿಯಲ್ಲಿ ಸಿಡಿಸುವ ಈ ಸ್ಫೋಟಕಗಳಿಂದ ಮಹಾರೇಖಾಸ್ಥರಭಂಗದಲ್ಲಿ ಬಿರುಕು ಕಾಣಿಸಿಕೊಂಡರೆ ಮುಂದೆ ದೊಡ್ಡ ಅಪಾಯವೇ ಸೃಷ್ಟಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ರಾಜ್ಯದಲ್ಲಿ ಒಟ್ಟು 43 ರೇಖಾಸ್ಥರಭಂಗಗಳನ್ನು ವೈಜ್ಞಾನಿಕವಾಗಿ ಗುರುತಿಸಲಾಗಿದೆ. ಅದರಲ್ಲಿ 8 ಮಹಾ ರೇಖಾಸ್ಥರಭಂಗಗಳಿದ್ದು, ಅದರಲ್ಲಿ ಕೆಆರ್‌ಎಸ್ ಮೂಲಕ ಹಾದುಹೋಗಿರುವ ರೇಖಾಸ್ಥರಭಂಗವೇ ಅತಿ ದೊಡ್ಡದು ಎಂದು ತಿಳಿಸಿದ್ದಾರೆ.
ಕೆಆರ್‌ಎಸ್‌ನಲ್ಲಿ ಮಹಾ ರೇಖಾಸ್ಥರಭಂಗ ಇರುವುದು ಹಾಗೂ ಇದರ ಸನಿಹದಲ್ಲೇ ಬೇಬಿಬೆಟ್ಟಇರುವುದು ಜೊತೆಗೆ ಅಲ್ಲಿ ಕಲ್ಲು ಗಣಿಗಾರಿಕೆ, ಕಲ್ಲು ಸಿಡಿಸಲು ಸ್ಫೋಟಕಗಳನ್ನು ನಿರಂತರವಾಗಿ ಸಿಡಿಸುತ್ತಿರುವುದರಿಂದ ಭೂಮಿ ಆಳದಲ್ಲಿರುವ ಮಹಾರೇಖಾಸ್ಥರಭಂಗಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಿಂದ ಅಣೆಕಟ್ಟೆಗೆ ಆಪತ್ತು ತಪ್ಪಿದ್ದಲ್ಲ.
ಸುಮಲತಾ ದಾಖಲೆ ನೀಡಿದ್ರೆ ಅಕ್ರಮ ಗಣಿಗಾರಿಕೆ ತನಿಖೆ: ಸಚಿವ ನಿರಾಣಿ
ಅಗ್ನಿಶಿಲೆ ಮೇಲೆ ಆಣೆಕಟ್ಟು ನಿರ್ಮಾಣ:
ಬೇಬಿಬೆಟ್ಟದಲ್ಲಿರುವುದು ಅಗ್ನಿಶಿಲೆ. ಕೆಆರ್‌ಎಸ್‌ನಲ್ಲಿರುವುದೂ ಅಗ್ನಿಶಿಲೆ. ಜಲಾಶಯದ ಅಕ್ಕ-ಪಕ್ಕ ಎರಡು ಬೆಟ್ಟಗಳಿವೆ. ಅವುಗಳೂ ಅಗ್ನಿಶಿಲೆಗಳೇ ಆಗಿವೆ. ಅವುಗಳ ಮಧ್ಯದಲ್ಲಿ ರೂಪಾಂತರ ಶಿಲೆ ಇದೆ. ಬೇಬಿ ಬೆಟ್ಟದ ಕಾವಲ್‌ನಲ್ಲಿರುವ ಅಗ್ನಿಶಿಲೆ ಎರಡೂವರೆಯಿಂದ ಮೂರು ಕಿ.ಮೀ. ಉದ್ದ ಇರಬಹುದು. ಆನಂತರದಲ್ಲಿ ರೂಪಾಂತರ ಶಿಲೆ. ಅಲ್ಲಿ ಸ್ಫೋಟಕಗಳು ನಿರಂತರವಾಗಿ ಸಿಡಿಯುತ್ತಲೇ ಇದ್ದರೆ ರೂಪಾಂತರ ಶಿಲೆಗಳು ಪದರು ಬಿಟ್ಟುಕೊಳ್ಳುತ್ತವೆ. ರೂಪಾಂತರ ಶಿಲೆಗಳು ಅಗ್ನಿಶಿಲೆಯಷ್ಟುಗಟ್ಟಿಇರುವುದಿಲ್ಲ. ಬಹಳ ಸುಲಭವಾಗಿ ಪದರಗಳನ್ನು ಬಿಡುವುದರಿಂದ ಆಣೆಕಟ್ಟೆಗೆ ಅಪಾಯ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಕೆಆರ್‌ಎಸ್ ಆಣೆಕಟ್ಟು ಅಗ್ನಿಶಿಲೆಯ ಮೇಲೆ ನಿಂತಿದೆ. ವಿಶ್ವೇಶ್ವರಯ್ಯ ಹಾಗೂ ಎಂಜಿನಿಯರ್‌ಗಳು ಕೆಆರ್‌ಎಸ್ ನಿರ್ಮಾಣ ಮಾಡುವ ವೇಳೆ, ಜಲಾಶಯದ ಎರಡೂ ಪಾಶ್ರ್ವದಲ್ಲಿ ಬೆಟ್ಟಗಳು ಅಗ್ನಿಶಿಲೆಯಿಂದ ಕೂಡಿವೆ. ಇದರ ನಡುವೆ ಮಹಾರೇಖಾಸ್ಥರಬಂಧದ ಪದರು ಹಾದುಹೋಗಿದ್ದು, ಎರಡೂ ಬೆಟ್ಟಗಳನ್ನು ಸಂಪರ್ಕ ಕಲ್ಪಿಸುವ ರೀತಿ ಅಗ್ನಿಶಿಲೆಯ ಪದರಿನ ಮೇಲೆ ಅಣೆಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಅದಕ್ಕಾಗಿಯೇ ಕೆಆರ್‌ಎಸ್‌ನ್ನು ಗ್ರ್ಯಾವಿಟಿ ಆಕೃತಿಯಲ್ಲಿ ನಿರ್ಮಿಸಲಾಗಿದೆ. ಆದ ಕಾರಣ ಆಣೆಕಟ್ಟೆಯ ಸುತ್ತ 8 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲೇಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ನಿಖರ ಅಧ್ಯಯನ ನಡೆಸಿಲ್ಲ:
ಕರ್ನಾಟಕದಲ್ಲಿರುವ ಎಲ್ಲಾ ಆಣೆಕಟ್ಟುಗಳು ಸರ್ ಎಂ.ವಿಶ್ವೇಶ್ವರಯ್ಯ ಕಾಲದಲ್ಲಿ ನಿರ್ಮಾಣಗೊಂಡಿರುವಂತಹವೇ. ಅದಾದ ನಂತರದಲ್ಲಿ ಇಲ್ಲಿಯವರೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವ ಅಣೆಕಟ್ಟುಗಳನ್ನೂ ನಿಖರವಾಗಿ ಅಧ್ಯಯನ ಮಾಡಿಲ್ಲ. ಅಣೆಕಟ್ಟು ಕಟ್ಟಿಎಷ್ಟುವರ್ಷವಾಗಿದೆ? ಎಷ್ಟು ವರ್ಷ ಬಾಳ್ವಿಕೆ ಬರಲಿದೆ? ಆಣೆಕಟ್ಟು ವ್ಯಾಪ್ತಿಯಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವುದರಿಂದ ಭೂಮಿಯೊಳಗೆ ಆಗಿರುವ ಬದಲಾವಣೆಗಳೇನು? ಆಣೆಕಟ್ಟೆಸುರಕ್ಷತೆ ಮೇಲೆ ಉಂಟಾಗಬಹುದಾದ ಪರಿಣಾಮಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಅರಿತುಕೊಳ್ಳುವ ಪ್ರಯತ್ನವನ್ನೇ ನಡೆಸಿಲ್ಲ.
HDK ಕದನ ವಿರಾಮ ಬಗ್ಗೆ ಗಮನ ಇಲ್ಲ, ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ: ಸುಮಲತಾ
ಸುಮಾರು 300 ಕಿ.ಮೀ. ದೂರ ಆಣೆಕಟ್ಟಿದ್ದರೆ ಅದರ ಸುತ್ತ ಇರುವ ಭೂಮಿಯ ಪದರಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅಣೆಕಟ್ಟುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಿರುವುದು ಸರ್ಕಾರಗಳ ಕರ್ತವ್ಯ. ಅಣೆಕಟ್ಟು ಆಯಸ್ಸು ಮುಗಿದ ಮೇಲೆ ಯಾವ ರೀತಿ ಪುನಶ್ಚೇತನ ಮಾಡಬೇಕು ಎಂಬ ಬಗ್ಗೆ ಭೂಗರ್ಭ ಶಾಸ್ತ್ರಜ್ಞರಿಂದ ಅಧ್ಯಯನ ನಡೆಸಿ ಸುರಕ್ಷತಾ ಕ್ರಮಗಳನ್ನು ವಹಿಸಬೇಕಿತ್ತು.
ಡ್ಯಾಂ ಪರಿಶೀಲನೆ ನಡೆಸಿ
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ವರದಿಯನ್ನು ನಿರ್ಲಕ್ಷ್ಯ ಮಾಡಿದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ಕೆಆರ್‌ಎಸ್ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟು ಸುತ್ತ 10 ಕಿ.ಮೀ. ವ್ಯಾಪ್ತಿಯಲ್ಲಾದರೂ ಗಣಿಗಾರಿಕೆ ಸಂಪೂರ್ಣ ನಿಷೇಧ ಮಾಡಿದರೆ ಅಣೆಕಟ್ಟೆಭದ್ರತೆಗೆ ಅನುಕೂಲವಾಗಲಿದೆ. ಅಣೆಕಟ್ಟೆಯ ಸುರಕ್ಷತೆಯ ಪರಿಶೀಲನೆ ನಡೆಸುವುದು ತುರ್ತು ಅಗತ್ಯವಿದೆ ಎಂದು ಮೈಸೂರು ಮಾನಸ ಗಂಗೋತ್ರಿ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಬಸವರಾಜಪ್ಪ ತಿಳಿಸಿದ್ದಾರೆ.
9 ತಿಂಗಳ ಹಿಂದೇ ಸ್ಫೋಟ ನಿಷೇಧಕ್ಕೆ ಸಲಹೆ
ಕೆಆರ್‌ಎಸ್ ಜಲಾಶಯದ 15ರಿಂದ 20 ಕಿ.ಮೀ. ಅಂತರದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ಫೋಟಕಗಳನ್ನು ಬಳಸಿದಾಗ ಅಣೆಕಟ್ಟಿಗೆ ಆಗುವ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದ ಆಣೆಕಟ್ಟು ಸುರಕ್ಷತಾ ಸಮಿತಿ (ಡಿಎಸ್‌ಆರ್‌ಪಿ) ಈ ವ್ಯಾಪ್ತಿಯೊಳಗೆ ಗಣಿಗಾರಿಕೆ ನಿಷೇಧಿಸುವಂತೆಯೂ ಸಲಹೆ ನೀಡಿತ್ತು. ಡಿಎಸ್‌ಆರ್‌ಪಿ ನೀಡಿದ ವರದಿ ಆಧರಿಸಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಇಂಜಿನಿಯರ್ 15.9.2020ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಆಣೆಕಟ್ಟೆ ಸುತ್ತಮುತ್ತಲಿನ 25 ಕಿ.ಮೀ. ರೇಡಿಯಸ್‌ನಲ್ಲಿ ಸ್ಫೋಟ ಕೈಗೊಳ್ಳದಿರುವಂತೆ ಅಭಿಪ್ರಾಯಪಟ್ಟಿದ್ದರು.
ಕೆಆರ್‌ಎಸ್ ಆಣೆಕಟ್ಟೆ ವ್ಯಾಪ್ತಿಯ ಪಾಂಡವಪುರ ತಾಲೂಕಿನ ಮಲ್ಲಿಗೆರೆ, ಅಲ್ಪಹಳ್ಳಿ, ಬಿಂಡಹಳ್ಳಿ, ಬೇಬಿಬೆಟ್ಟ, ಕಣಿವೆಕೊಪ್ಪಲು, ರಾಗಿಮುದ್ದನಹಳ್ಳಿ, ಮಲ್ಲೇನಹಳ್ಳಿ, ಚಂದ್ರೆ, ಪಾಂಡವಪುರ, ಹೊಸ ಬನ್ನಂಗಾಡಿ, ಚಿನಕುರಳಿ, ಹೊನಗಾನಹಳ್ಳಿ, ಕನಗನಹಳ್ಳಿ, ನುಗ್ಗಹಳ್ಳಿ, ಕನಗನಮರಡಿ, ಕಾಮನಾಯಕನಹಳ್ಳಿ, ಮಲ್ಕೋನಹಳ್ಳಿ, ಕಂಚನಹಳ್ಳಿ, ಡಿಂಕಾ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಫೋಟಕಗಳನ್ನು ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸುವುದು ಸೂಕ್ತ ಎಂದು ಸಲಹೆ ನೀಡಿದ್ದರು.
ಏನಿದು ರೇಖಾಸ್ತರಭಂಗ?
ಭೂಮಿಯೊಳಗೆ ಒಂದು ಶಿಲಾಪದರ ಮತ್ತೊಂದು ಶಿಲಾಪದರದೊಂದಿಗೆ ಕೂಡಿಕೊಂಡಿರುವ ರಚನೆಯನ್ನು ರೇಖಾಸ್ತರಭಂಗ ಅಥವಾ ಶಿಲಾಪದರದ ಆಕೃತಿ ಎನ್ನುವರು. ಈ ಶಿಲಾಪದರ ರಚನೆಯು ಅಗ್ನಿಶಿಲೆಯ ರೂಪದಲ್ಲಿದ್ದು ಭೂಮಿಯ ಒಳಗೆ ಬಹಳ ದೂರದವರೆಗೆ ಹಾದು ಹೋಗಿರುತ್ತದೆ. ಇದು ಶಿಲಾಪದರದ ವೈಶಿಷ್ಟ್ಯ ಎನ್ನಬಹುದು.