HDK ಕದನ ವಿರಾಮ ಬಗ್ಗೆ ಗಮನ ಇಲ್ಲ, ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ: ಸುಮಲತಾ
* ನನ್ನ ಹೋರಾಟ ನನ್ನ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸೋದು ಆಗಿದೆ
* ಸಂಸತ್‌ನಲ್ಲೂ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರವನ್ನ ಪ್ರಸ್ತಾಪ ಮಾಡ್ತೇನೆ
* ನಾವು ಶಾಂತಿಯಿಂದ ನಮ್ಮ ನೋವುಗಳನ್ನು ಬಗೆಹರಿಸಿಕೊಳ್ಳೋಣ
ಬೆಳಗಾವಿ(ಜು.11): ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಜೆಡಿಎಸ್ ನಾಯಕರು ಮಾಡುತ್ತಿರುವ ಇಲ್ಲ ಸಲ್ಲದ ಆರೋಪಗಳಿಂದ ಅಂಬರೀಶ್ ಅವರ ಲಕ್ಷಾಂತರ ಅಭಿಮಾನಿಗಳಿಗೂ ನೋವಾಗಿದೆ. ಆದರೆ ನಾವು ಅವರ ದಾರಿಯಲ್ಲಿ ಹೋಗುವುದು ಬೇಡ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಅಂಬರೀಶ್ ಅಭಿಮಾನಿಗಳಿಂದ ಪ್ರತಿಭಟನೆ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದ ರಾಜ ಭವನದ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ಎಚ್ಡಿಕೆ ಕದನ ವಿರಾಮ ಬಗ್ಗೆ ನನ್ನ ಗಮನ ಇಲ್ಲ. ನನ್ನ ಗಮನ ಇರೋದು ಕೇವಲ ಅಕ್ರಮ ಗಣಿಗಾರಿಕೆ ನಿಲ್ಲಿಸುವುದು. ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನಾವು ಶಾಂತಿಯಿಂದ ನಮ್ಮ ನೋವುಗಳನ್ನು ಬಗೆಹರಿಸಿಕೊಳ್ಳೋಣ ಎಂದು ಅಂಬಿ ಅಭಿಮಾನಿಗಳಿಗೆ ಸುಮಲತಾ ಮನವಿ ಮಾಡಿಕೊಂಡಿದ್ದಾರೆ.
ಎಚ್‌ಡಿಕೆ- ಸುಮಲತಾ ಕಾಳಗಕ್ಕೆ ರಾಕ್‌ಲೈನ್ ಎಂಟ್ರಿ, ಎಚ್‌ಡಿಕೆ ವಿರುದ್ಧ ಕಿಡಿ
ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದು ಆಗಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲರ ಗಮನಕ್ಕೆ ತಂದಿದ್ದೇನೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತಷ್ಟೇ. ಸಂಸತ್‌ನಲ್ಲೂ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರವನ್ನ ಪ್ರಸ್ತಾಪ ಮಾಡುತ್ತೇನೆ. ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ಅವರನ್ನೂ ಭೇಟಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಸಮಸ್ಯೆ ಸೃಷ್ಟಿಸಿಲ್ಲ. ಯಾರು ಸಮಸ್ಯೆ ಸೃಷ್ಟಿಸಿದಾರೋ ಅವರು ಅರ್ಥ ಮಾಡ್ಕೊಂಡ್ರೆ ಸಾಕು. ಅಕ್ರಮ ಗಣಿಗಾರಿಕೆ ನಿಲ್ಲಿಸುವ ವಿಚಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಕಷ್ಟ ಅಂತ ನನಗೂ ಗೊತ್ತು. ಆದರೆ ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.