ಹೂವಿನಹಡಗಲಿ(ಜ.24): ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಬಸ್ಸಿನ ದರ ಏರಿಕೆ, ಸಿಬ್ಬಂದಿ ನೇಮಕಾತಿ ಸೇರಿದಂತೆ ಬಹುತೇಕ ಪ್ರಕ್ರಿಯೆಗಳನ್ನು ಸರ್ಕಾರವೇ ಮಾಡುತ್ತಿದೆ. ಆದರೆ ನೇಮಕವಾದ ಸಿಬ್ಬಂದಿ ಮಾತ್ರ ಸರ್ಕಾರಿ ನೌಕರರಲ್ಲ. ಇದರಿಂದ ಸಾಕಷ್ಟು ವೇತನ ತಾರತಮ್ಯದ ಬಗ್ಗೆ ಯಾತನೆ ನಮ್ಮನ್ನು ಕಾಡುತ್ತಿದೆ ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಹೇಳಿದ್ದಾರೆ. 

ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸಹಯೋಗದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ನೌಕರರು ಕುಟುಂಬ ಪರಿವಾರದ ಸಮೇತ ನಡೆದ ಬೃಹತ್‌ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಮೊದಲು ರೈತ, ಸೈನಿಕ ಹಾಗೂ ಬಸ್ಸಿನ ಚಾಲಕ ಇವರೆಲ್ಲಾ ನಿರಂತರವಾಗಿ ದಣಿವು ಇಲ್ಲದಂತೆ ಕೆಲಸ ಮಾಡುತ್ತಾರೆ. ರಾಜ್ಯದ 2 ಕೋಟಿ ಪ್ರಯಾಣಿಕರ ನಿರಂತರ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ನೌಕರರಗಿಂತ ಸಾರಿಗೆ ನೌಕರರಿಗೆ ಶೇ. 50ರಿಂದ 60ರಷ್ಟುವೇತನ ತಾರತಮ್ಯವಾಗುತ್ತಿದೆ. ಅಗತ್ಯ ಸೌಲಭ್ಯದಡಿ ಕೆಲಸ ಮಾಡುತ್ತಿರುವ ನಮ್ಮನ್ನ ಸರ್ಕಾರ ಈ ಕೂಡಲೇ ಸರ್ಕಾರಿ ನೌಕರರೆಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಂಗಭಾರತಿ ಸಂಸ್ಥೆಯ ಅಧ್ಯಕ್ಷೆ ಎಂ.ಪಿ. ಸುಮಾ ವಿಜಯ್‌ ಮಾತನಾಡಿ, ಜನರಿಗೆ ನಿರಂತರ ಸೇವೆ ನೀಡುತ್ತಿರುವ ಸಾರಿಗೆ ನೌಕರರನ್ನು ಆಂಧ್ರಪ್ರದೇಶದ ಮಾದರಿಯಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕಿದೆ. ತೀರಾ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಸಾರಿಗೆ ಸಿಬ್ಬಂದಿ ಕುಟುಂಬಸ್ಥರ ನೋವಿಗೆ ಎಲ್ಲರೂ ಧ್ವನಿಯಾಗಿ ಕೆಲಸ ಮಾಡಬೇಕಿದೆ ಎಂದರು.

ಇಂತಹ ಜನಪರ ಹೋರಾಟಗಳಿಗೆ ಸಾರ್ವಜನಿಕರು ಬೆಂಬಲಿಸುವ ಗುಣ ಹೊಂದಬೇಕಿದೆ. ಇತ್ತೀ​ಚೆಗೆ ಹೂವಿನಹಡಗಲಿಯಲ್ಲಿ ಹೋರಾಟ ಹಾಗೂ ಪ್ರತಿಭಟನೆಯ ಮನೋಭಾವನೆಯೇ ಕಡಿಮೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ರಾರ‍ಯಲಿ ಹಮ್ಮಿಕೊಳ್ಳುತ್ತೇವೆಂದು ಹೇಳಿದರು.

ಹೊಸಪೇಟೆ ವಿಭಾಗ ಕೂಟದ ಅಧ್ಯಕ್ಷ ಮಹಾಂತೇಶ ಮಾತನಾಡಿ, ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪಾಸ್‌ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಸರ್ಕಾರ ಬಜೆಟ್‌ನಲ್ಲಿಟ್ಟು ಪ್ರಕಟ ಮಾಡುತ್ತಿದೆ. ಆದರೆ ಅದನ್ನು ಅನುಷ್ಠಾನ ಮಾಡುತ್ತಿರುವ ನೌಕರರು ಮಾತ್ರ ಸರ್ಕಾರಿ ನೌಕರರಲ್ಲ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಸಾರಿಗೆ ಇಲಾಖೆಯಲ್ಲಿ ಹೆಚ್ಚು ಕೆಲಸ ಮಾಡಿ ಕಡಿಮೆ ವೇತನ ಪಡೆಯುತ್ತಿರುವ ನಮ್ಮ ಕಷ್ಟವನ್ನು ಸರ್ಕಾರ ಆಲಿಸಿ ಬೇಗನೆ ವರದಿ ಪಡೆದು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಪಟ್ಟಣದ ಗವಿಮಠದಿಂದ ಸಾರಿಗೆ ನೌಕರರು ಹಾಗೂ ಅವರ ಕುಟುಂಬ ಪರಿವಾರದವರು ಮುಖ್ಯ ರಸ್ತೆಯ ಮೂಲಕ ಬೃಹತ್‌ ಪಾದಯಾತ್ರೆ ಜಾಥಾ ಮಾಡಿಕೊಂಡು ತಹಸೀಲ್ದಾರ್‌ ಕಚೇರಿಗೆ ತೆರಳಿ ತಹಸೀಲ್ದಾರ್‌ ಕೆ. ರಾಘವೇಂದ್ರ ರಾವ್‌ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಂತರಾಜ ಕೊರ್ಲಹಳ್ಳಿ, ಪ್ರವೀಣ ಕೋಟಿಹಾಳ್‌, ನಾಗರಾಜ, ಯಲ್ಲಪ್ಪ, ಸೋಮಣ್ಣ, ನಿವೃತ್ತ ನೌಕರರ ಸದ್ಯೋಜಾತಪ್ಪ, ಹನುಮಂತಪ್ಪ ಸೇರಿದಂತೆ ಇತರರಿದ್ದರು.