ತುಮಕೂರು(ಆ.07): ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಎಲ್ಲ ಶಾಲೆಗಳ ಆವರಣದಲ್ಲೂ ಶಿಕ್ಷಕರು ಕಡ್ಡಾಯವಾಗಿ ಕೈತೋಟ ಬೆಳೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಿ ತಿಳಿಸಿದರು. ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ತುಮಕೂರು ದಕ್ಷಿಣ ಜಿಲ್ಲೆ ವತಿಯಿಂದ ನಗರದ ಡಯಟ್‌ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು

ನಮ್ಮ ಸುತ್ತಲೂ ಮರಗಿಡಗಳು ಇದ್ದಲ್ಲಿ ಮಾತ್ರ ನಾವು ಬದಕಲು ಸಾಧ್ಯ. ಆದ್ದರಿಂದ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಕೈತೋಟ ಬೆಳೆಸಬೇಕು. ಕೈತೋಟದಲ್ಲಿ ಸೊಪ್ಪು, ತರಕಾರಿ ಬೆಳೆಯುವುದರಿಂದ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆ ನೈಸರ್ಗಿಕವಾಗಿ ಬೆಳೆದ ತರಕಾರಿಯನ್ನು ಬಳಸಿದರೆ ಉತ್ತಮ ಆರೋಗ್ಯ ಕಾಪಾಡಿದಂತಾಗುತ್ತದೆ ಎಂದರು.

ನೈಜ ಮೌಲ್ಯಗಳನ್ನು ಬದಲಾಯಿಸಿ:

ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು, ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ನೈಜ ಮೌಲ್ಯಗಳನ್ನು ಬದಲಾಯಿಸಿ, ಅಪೇಕ್ಷಿತ ಮೌಲ್ಯಗಳನ್ನು ಅವರಲ್ಲಿ ರೂಢಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಮಾನವೀಯತೆ, ಸ್ನೇಹಜೀವನ, ಚಟುವಟಿಕೆ, ಹೊಂದಾಣಿಕೆ ಮನೋಭಾವ ಕಲಿಸುವ ಮಾರ್ಗದರ್ಶಕನಾಗಿ ಶಿಕ್ಷಕ ಕಾರ್ಯ ನಿರ್ವಹಿಸಬೇಕು. ಶಿಕ್ಷಕರು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಚಿತ್ರಕಲೆ ಸೇರಿದಂತೆ ಪರಿಸರ ಸಂರಕ್ಷಿಸುವ ಬಗ್ಗೆ ಬದುಕಿಗೆ ಅಮೂಲ್ಯವಾದ ನೈಸರ್ಗಿಕ ಕಾಳಜಿಯ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವತ್ತ ಮುಂದಾಗಬೇಕು ಎಂದರು.

ಡಯಟ್‌ ಉಪನಿರ್ದೇಶಕರಾದ ನಾಗಮಣಿ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಶಿವಾನಂದ, ಕಾರ್ಯಾಗಾರದಲ್ಲಿ ಎಂಆರ್‌ಪಿಗಳಾದ ಕುಂಸಿ, ನಯಾಜ್‌ ಅಹಮದ್‌ ಇದ್ದರು.

ಜ್ಞಾನದ ಜೊತೆಗೆ ಪರಿಸರ ಜಾಗೃತಿ:

ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಸಿ. ಸತ್ಯಪ್ರಕಾಶ್‌ ಮಾತನಾಡಿ, ವೃತ್ತಿ ಶಿಕ್ಷಕರು ಮಕ್ಕಳು ಶಿಕ್ಷಣದ ಜೊತೆಗೆ ತೋಟಗಾರಿಕೆ, ಸಂಗೀತ, ಚಿತ್ರಕಲೆ, ಟೈಲರಿಂಗ್‌, ಕೃಷಿ ಸೇರಿದಂತೆ ಮತ್ತಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು, ಶಿಕ್ಷಣ ಇಲಾಖೆ ಇತ್ತೀಚಿನ ದಿನಗಳಲ್ಲಿ ಹಲವಾರು ಬದಲಾವಣೆಗಳ ಮೂಲಕ ಶಿಕ್ಷಣ ಕ್ರಾಂತಿಯನ್ನೇ ಪ್ರಾರಂಭಿಸಿದೆ ಎಂದರು.

ಶಿವಮೊಗ್ಗ: ಮರಬಿದ್ದು ಶಿವಪ್ಪ ನಾಯಕ ಅರಮನೆ ಸ್ಮಾರಕಕ್ಕೆ ಧಕ್ಕೆ

ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಗಾರದಲ್ಲಿ ವೆಂಕಟೇಶ್‌, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಎಲ್‌.ವೆಂಕಟೇಶ್‌, ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್‌, ರಾಜ್ಯ ಪ್ರತಿನಿಧಿಗಳಾದ ಆರ್‌.ಬೋರಪ್ಪ, ಜಿ.ಡಿ.ಗಂಗಾಧರ್‌, ಎಚ್‌.ಇ. ವಿಜಯ, ಎಚ್‌.ಎನ್‌. ವಿಮಲ ಸೇರಿದಂತೆ ಸಂಘದ ಜಿಲ್ಲಾ ಪದಾಧಿಕಾರಿಗಳು, ಎಲ್ಲ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವೃತ್ತಿ ಶಿಕ್ಷಕರು ಭಾಗವಹಿಸಿದ್ದರು.