ಹಿರೇಬೆಣಕಲ್ ಮೊರೇರ್ ಬೆಟ್ಟದಲ್ಲಿರುವ ಶಿಲಾ ಸಮಾಧಿಯಂತೆ ತಾಲೂಕಿನ ಆಗೋಲಿ ಸನಿಹದ ಬೆಟ್ಟ ಪರಿಸರದಲ್ಲಿ 2500 ವರ್ಷಗಳ ಹಿಂದಿನ ಶವಗುಣಿಯ ಮೇಲೆ ನೆಟ್ಟ ನಿಲುಸುಗಲ್ಲು (ಮೆನ್ಹಿರ್) ಪತ್ತೆಯಾಗಿದೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.

ಗಂಗಾವತಿ (ಮೇ.04): ಹಿರೇಬೆಣಕಲ್ ಮೊರೇರ್ ಬೆಟ್ಟದಲ್ಲಿರುವ ಶಿಲಾ ಸಮಾಧಿಯಂತೆ ತಾಲೂಕಿನ ಆಗೋಲಿ ಸನಿಹದ ಬೆಟ್ಟ ಪರಿಸರದಲ್ಲಿ 2500 ವರ್ಷಗಳ ಹಿಂದಿನ ಶವಗುಣಿಯ ಮೇಲೆ ನೆಟ್ಟ ನಿಲುಸುಗಲ್ಲು (ಮೆನ್ಹಿರ್) ಪತ್ತೆಯಾಗಿದೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ. ಗಡ್ಡಿ- ಆಗೋಲಿ ರಸ್ತೆಯ ಬಲಬದಿಗೆ ಬೂದಿಗುಡ್ಡದ ಬುಡದಲ್ಲಿ ಈ ನಿಲುಸುಗಲ್ಲು ಇದೆ. 4 ಫೀಟ್ ಎತ್ತರ 1 ಫೀಟ್ ಅಗಲವಾಗಿದೆ. ನೈಸರ್ಗಿಕ ಶಿಲೆಯಾಗಿರುವುದರಿಂದ ಸಮ ಪ್ರಮಾಣದಲ್ಲಿ ಇರದೆ ಅಂಕುಡೊಂಕಾಗಿದೆ.

ಮೂಲದಲ್ಲಿ ನಿಲುಸುಗಲ್ಲಿನ ಸುತ್ತಲೂ ಶಿಲಾವೃತ್ತವಿದ್ದಿತು, ಆದರೆ ಈಗ ಹಾಳಾಗಿದೆ. 2200 ರಿಂದ 3000 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸಿಸಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಮಾಧಿ ಇದಾಗಿದೆ. ಕಬ್ಬಿಣ ಯುಗ ಬೃಹತ್ ಶಿಲಾಯುಗಕ್ಕೆ ಸೇರಿದ ಈ ಜನ ಸತ್ತವರಿಗಾಗಿ ಹಲವು ರೀತಿಯ ಸಮಾಧಿಗಳನ್ನು ನಿರ್ಮಿಸುವ ಪದ್ದತಿಯನ್ನು ಹೊಂದಿದ್ದರು. ಅವುಗಳಲ್ಲಿ ಶವಗುಣಿಯ ಮೇಲೆ ಈ ರೀತಿ ಎತ್ತರವಾದ ನೈಸರ್ಗಿಕ ಶಿಲಾ ಚಪ್ಪಡಿಯನ್ನು ನಿಲ್ಲಿಸಿ ಅದರ ಸುತ್ತಲೂ ತುಂಡುಕಲ್ಲುಗಳಿಂದ ವೃತ್ತಾಕಾರದಲ್ಲಿ ಜೋಡಿಸುವ ಪದ್ದತಿಯೂ ಒಂದಾಗಿದೆ.

ಈ ಪ್ರಕಾರಕ್ಕೆ ಶಿಲಾವೃತ್ತದೊಳಗಿನ ನಿಲುಸುಗಲ್ಲು (ಮೆನ್ಹಿರ್ ವಿತ್ ಸ್ಟೋನ್‌ರ‍್ಕಲ್) ಎಂದು ಪುರಾತತ್ವ ಶಾಸ್ತ್ರಜ್ಞರು ಹೆಸರಿಸಿದ್ದಾರೆ. ಸಾಮಾನ್ಯವಾಗಿ ಹಿರೇಬೆಣಕಲ್ ಮೊರೇರ್ ಗುಡ್ಡದಲ್ಲಿರುವಂತೆ ಈ ಜನರ ವಿವಿಧ ರೀತಿಯ ಸಮಾಧಿಗಳು ಒಂದೇ ಕಡೆ ಕಂಡುಬರುತ್ತವೆ. ಆದರೆ ಈ ನಿಲುಸುಗಲ್ಲಿನಂತೆ ಅಪರೂಪವಾಗಿ ಅಲ್ಲಲ್ಲಿ ಒಂದೊಂದೆ ಕಂಡುಬರುತ್ತವೆ. ಈ ಜನ ತಮ್ಮವರು ವಸತಿಯ ಜಾಗದಲ್ಲಿ ಸತ್ತರೆ ಅವರನ್ನು ನಿರ್ದಿಷ್ಟ ಪಡಿಸಿದ ಸ್ಥಳ (ಸ್ಮಶಾನ) ದಲ್ಲಿ ಹೂತು ಸಮಾಧಿ ಕಟ್ಟುತ್ತಿದ್ದರು.

ಇತಿಹಾಸಕ್ಕೆ ಹೊಸ ಬೆಳಕು

ಆದರೆ ಇವರು ಬೇಟೆಗಾಗಿಯೋ ಅಥವಾ ಇನ್ನಿತರ ಕಾರಣಕ್ಕಾಗಿಯೋ ದೂರ ತೆರಳಿದ್ದಾಗ ಅವರಲ್ಲಿ ಯಾರಾದರೂ ಒಬ್ಬರು ಆಕಸ್ಮಿಕವಾಗಿ ಮರಣ ಹೊಂದಿದರೆ ಅವರ ಶವವನ್ನು ಒಯ್ಯಲು ಸಾಧ್ಯವಾಗದೇ ಆ ಜಾಗದಲ್ಲಿಯೇ ಹೂಳುತ್ತಿದ್ದರು. ಕೆಲ ದಿನಗಳ ನಂತರ ಬಂದು ಆ ಶವಗುಣಿಯ ಮೇಲೆ ಬೆಟ್ಟದಿಂದ ಆಯ್ದು ತಂದ ಚಪ್ಪಡಿಕಲ್ಲನ್ನು ನೆಡುತ್ತಿದ್ದರು. ಕೆಲವು ಸಲ ಅದರ ಸುತ್ತಲೂ ತುಂಡುಕಲ್ಲುಗಳನ್ನು ವೃತ್ತಾಕಾರದಲ್ಲಿ ಜೋಡಿಸುತ್ತಿದ್ದರು.

ಹಾಗೇ ನಿರ್ಮಿಸಿದ ಒಂದು ಸಮಾಧಿಯೇ ಆಗೋಲಿಯ ಈ ನಿಲುಸುಗಲ್ಲು. ಇದರಿಂದ ಗಂಗಾವತಿ ಪ್ರದೇಶದ ಅದಿಮ ಬುಡಕಟ್ಟು ಸಮುದಾಯಗಳ ಚಲನವಲನ ಮತ್ತು ಶವಸಂಸ್ಕಾರ ಪದ್ದತಿಯನ್ನು ತಿಳಿಯಬಹುದಾಗಿದೆ ಮತ್ತು ಈ ನಿಲುಸುಗಲ್ಲುಗಳೇ ಮುಂದೆ ಕಲ್ಗೊಂಬೆಯ (ಆಂಥ್ರೋಫೋಮರ‍್ಫಿಕ್ ಟೂಮ್ಸ್) ಆಕಾರ ಪಡೆದುಕೊಂಡವೆಂದು ಡಾ. ಕೋಲ್ಕಾರ ಅಭಿಪ್ರಾಯಪಟ್ಟರು. ಈ ನಿಲುಸುಗಲ್ಲು ಶೋಧನೆಯ ತಂಡದಲ್ಲಿ ಹಿರೇಬೆಣಕಲ್ಲಿನ ಮಂಜುನಾಥ ದೊಡ್ಡಮನಿ ಮತ್ತು ಗಂಗಾವತಿಯ ಹರನಾಯಕ ಇದ್ದರು.