ಅಸ್ಸಾಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದರೂ ಕಾಂಗ್ರೆಸ್ ಸೋತಿರುವ ವಿಷಯಕ್ಕೆ ಗ್ಯಾರಂಟಿಗಳೇ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ ಎಂದು ಕೊಡಗು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.04): ಅಸ್ಸಾಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದರೂ ಕಾಂಗ್ರೆಸ್ ಸೋತಿರುವ ವಿಷಯಕ್ಕೆ ಗ್ಯಾರಂಟಿಗಳೇ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ ಎಂದು ಕೊಡಗು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಅಸ್ಸಾಂನಲ್ಲಿ ಬಿಜೆಪಿಗೆ ಅಭ್ಯರ್ಥಿಗಳು ಎಲ್ಲಿಂದ ಬಂದವರು. ಅವರೇನು ಬಿಜೆಪಿ ಆರ್ ಎಸ್ ಎಸ್ ನಿಂದ ಬಂದವರೇನು.? ಅಸ್ಸಾಂನಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಗೆಲುವು ಪಡೆದಿದೆ. ದೇಶದಲ್ಲಿ ಆಪರೇಷನ್ ಕಮಲ ಶುರು ಮಾಡಿದ್ದೇ ಬಿಜೆಪಿ ಎಂದಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಮೋದಿ, ಷಾ ಅವರು ಎಷ್ಟು ಬಾರಿ ಹೋದರು. ಆರು ತಿಂಗಳಿಂದ ಬಹುತೇಕ ಅಲ್ಲಿಯೇ ಇದ್ದರು. ಅಲ್ಲಿಯೇ ಇದ್ದು ಷಾ ಕುತಂತ್ರ ಮಾಡಿದರು. ಉತ್ತರ ಪ್ರದೇಶದ ಐಎಎಸ್ ಅಧಿಕಾರಿಗಳನ್ನು ಪಶ್ಚಿಮ ಬಂಗಾಳಕ್ಕೆ ತಂದು ಹಾಕಿದರು. ಆ ಮೂಲಕ ಚುನಾವಣೆ ಗೆಲುವಿಗೆ ಕುತಂತ್ರಗಳನ್ನು ಮಾಡಿದರು. ಜೊತೆಗೆ ಅಲ್ಲಿ ಆಡಳಿತ ವಿರೋಧಿ ಅಲೆ ಇತ್ತು, ಹೀಗಾಗಿ ಬಿಜೆಪಿ ಗೆಲವು ಪಡೆದಿದೆ. ಅವರಿಗೆ ನೀತಿ ನಿಯಮಗಳು ಏನೂ ಇಲ್ಲ, ಒಟ್ಟಿನಲ್ಲಿ ಅವರಿಗೆ ಗೆಲುವು ಪಡೆಯಬೇಕು ಅಷ್ಟೇ ಎಂದು ಸಣ್ಣ ನೀರಾವರಿ ಸಚಿವ ಭೋಸರಾಜ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇರಳಂದಲ್ಲಿ ಯುಡಿಎಫ್ ಗೆಲುವಿಗೆ ಸಚಿವ ಎನ್.ಎಸ್. ಭೋಸರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲಿ ಗೆಲ್ಲುವ ನಿರೀಕ್ಷೆ ನಮಗಿತ್ತು. ಚುನಾವಣೆಗೂ ಮುನ್ನ ಜನಾಭಿಪ್ರಾಯವನ್ನು ಸಂಗ್ರಹಿಸಿದ್ದೆವು. ಅಲ್ಲಿನ ಮುಖ್ಯಮಂತ್ರಿ ವಿರುದ್ಧವೂ ಜನಾಭಿಪ್ರಾಯವಿತ್ತು. ಆರು ತಿಂಗಳಿಂದ ಎಲ್ಲಾ ಯೋಜನೆ ರೂಪಿಸಿ, ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಕೆಲಸ ಮಾಡಿದ್ದೆವು. ಅದರ ಜೊತೆಗೆ ಆಡಳಿತ ವಿರೋಧಿ ಅಲೆ ಅಲ್ಲಿ ಇತ್ತು. ಈ ಎಲ್ಲಾ ಕಾರಣಗಳನ್ನು ನಾವು ಸಾಕಷ್ಟು ಬಳಸಿಕೊಂಡು ಕೆಲಸ ಮಾಡಿದ್ದೆವು. ಅದರಂತೆ ಅಲ್ಲಿ ನಾವು ಗೆದ್ದಿದ್ದೇವೆ. ನಾನು ಕೂಡ ಎರಡು ಜಿಲ್ಲೆಗಳ ಜವಾಬ್ದಾರಿ ಹೊತ್ತಿದ್ದೆ.
ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಾಗಿ ನಾವು ಗೆದ್ದಿದ್ದೇವೆ. ಉಳಿದ ರಾಜ್ಯಗಳಲ್ಲಿ ನಾವು ಪಾರ್ಟ್ನರ್ ಅಷ್ಟೇ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಾವು ಅಧಿಕ್ಕಾರಕ್ಕೆ ಬಂದ ಬಳಿಕ ವಿಪಕ್ಷ ನಾಯಕರು, ಬಿಜೆಪಿ ಅಧ್ಯಕ್ಷರು ಏನೆಲ್ಲಾ ಮಾತನಾಡಿದರು. ಅದಕ್ಕೆ ಸರಿಯಾದ ಉತ್ತರವನ್ನು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಜನತೆ ಬಿಜೆಪಿಗೆ ನೀಡಿದ್ದಾರೆ ಎಂದು ಸಚಿವ ಎನ್.ಎಸ್ ಭೋಸರಾಜ್ ತಿರುಗೇಟು ನೀಡಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಬಾಗಲಕೋಟೆ ಕ್ಷೇತ್ರ ನಮಗೆ ಬಹಳ ಮುಖ್ಯವಾಗಿತ್ತು.
ಹೆಚ್ಚು ಬಿಜೆಪಿ ಮತಗಳಿದ್ದವು
ಬಾಗಲಕೋಟೆಯಲ್ಲಿ ಮೇಟಿಯವರು ಗೆದ್ದಾಗಿನಿಂದಲೂ ಅನಾರೋಗ್ಯದ ಕಾರಣದಿಂದ ಸರಿಯಾಗಿ ಕ್ಷೇತ್ರದಲ್ಲಿ ಓಡಾಡಲು ಆಗಿರಲಿಲ್ಲ. ಹೀಗಾಗಿ ನಮಗೆ ಆ ಕ್ಷೇತ್ರದಲ್ಲಿ ಕಷ್ಟ ಎನ್ನುವ ಮಾಹಿತಿ ಇತ್ತು. ಆದ್ದರಿಂದಲೇ ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ಪ್ರಯತ್ನ ಹಾಕಿದರು. ಬಾಗಲಕೋಟೆಯಲ್ಲಿ ಎಲ್ಲಾ ಜಾತಿ ಧರ್ಮಗಳ ಮತದಾರರು ಸಾಕಷ್ಟು ಇದ್ದಾರೆ. ಅವರೆಲ್ಲರನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಕೆಲಸ ಮಾಡಿದೆವು. ಹೆಚ್ಚಿನ ಮತದಾರರಿರುವ ಬಾಗಲಕೋಟೆ ನಗರದಲ್ಲಿ ಹೆಚ್ಚು ಬಿಜೆಪಿ ಮತಗಳಿದ್ದವು. ಗ್ರಾಮಾಂತರದಲ್ಲಿ ನಮ್ಮ ಮತಗಳಿದ್ದವು. ಈ ಎಲ್ಲಾ ಕಾರಣಗಳಿಂದ ಸಾಕಷ್ಟು ಕೆಲಸ ಮಾಡಿದ್ದೆವು.
ಮತದಾರರು ನಮ್ಮ ಪರವಾಗಿ ಆದೇಶ ನೀಡಿದ್ದಾರೆ ಎಂದಿದ್ದಾರೆ. ಇನ್ನು ದಾವಣಗೆರೆ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಕೆಲಸ ಮಾಡಿದ್ದರು. ಇದು ಕ್ಷೇತ್ರದ ಜನರಿಗೆ ಗೊತ್ತಿತ್ತು. ಯಾರು ಏನೇ ಹೇಳಿದರು ಹಿರಿಯರಿಗೆ ತೊಂದರೆ ಆದಾಗ ಕುಟುಂಬದವರಿಗೆ ಟಿಕೆಟ್ ಕೊಡುವುದು ಪಕ್ಷದ ನೀತಿ. ಇದರಿಂದಾಗಿ ಅವರ ಮೊಮ್ಮಗನಿಗೆ ಟಿಕೆಟ್ ನೀಡಲಾಯಿತು. ಇದಕ್ಕೆ ಪಕ್ಷದ ಮುಖಂಡರಲ್ಲಿ ಸಾಕಷ್ಟು ಗೊಂದಲಗಳಾದವು. ಇದಕ್ಕೆ ಪಕ್ಷದ ಎಲ್ಲಾ ಸಚಿವರು, ಸಂಸದರು ಕೆಲಸ ಮಾಡಿದರು. ಹೀಗಾಗಿ ಆ ಕ್ಷೇತ್ರದಲ್ಲಿಯೂ ಗೆಲವು ಸಾಧಿಸುತಿದ್ದೇವೆ ಎಂದಿದ್ದಾರೆ. ಮೊದಲಿನಿಂದಲೂ ಆ ಕ್ಷೇತ್ರದಲ್ಲಿ ಜನರು ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬವೂ ಜನರಿಗೆ ಕೆಲಸ ಮಾಡಿದೆ. ಹೀಗಾಗಿ ಜನರು ಕೈ ಹಿಡಿದಿದ್ದಾರೆ ಎಂದು ಬೋಸರಾಜು ಹೇಳಿದ್ದಾರೆ.


