ಬೆಂಗಳೂರು(ಆ.11): ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡದಿರುವುದು, ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವ ನಿರ್ಬಂಧ ಹೇರುವ ನಿರ್ಧಾರಗಳ ಬಗ್ಗೆ ಬಿಬಿಎಂಪಿ ಪುನರ್‌ ಪರಿಶೀಲಿಸಬೇಕು ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಒತ್ತಾಯಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಈ. ಅಶ್ವಥ್‌ನಾರಾಯಣ, ಈ ಬಾರಿ ರಾಜಧಾನಿಯಲ್ಲಿ ಗಣೇಶಮೂರ್ತಿ ಇಷ್ಟೇ ಅಡಿ ಇರಬೇಕು. ಕೆರೆ, ಕಲ್ಯಾಣಿ ಸೇರಿದಂತೆ ಗಣೇಶ ವಿಸರ್ಜನೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕೇಸ್‌ ದಾಖಲಿಸುವುದಾಗಿ ವಿಧಿಸುವ ನಿಯಮವನ್ನು ಪುನರ್‌ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಅನ್‌ಲಾಕ್‌ ನಿಯಮದ ಪ್ರಕಾರ ಈ ಬಾರಿ ಗಣೇಶ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಸಾಮೂಹಿಕ ಮೆರವಣಿಗೆ ಮಾಡದಿರಲು ನಿರ್ಣಯಿಸಲಾಗಿದೆ.ಆದರೆ, ಗಣೇಶಮೂರ್ತಿ ಪ್ರತಿಷ್ಠಾಪಿಸುವ ನಿರ್ಧಾರವನ್ನು ಆಯಾಯ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳಿಗೆ ಬಿಡಲಾಗಿದೆ ಎಂದು ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ರಾಜು ಮಾತನಾಡಿ, ಈ ಬಾರಿ ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ ಎಂಬ ದಮನಕಾರಿ ನೀತಿ ತಂದಿದೆ. ಒಂದು ವೇಳೆ ಗಣೇಶಮೂರ್ತಿ ಕೂರಿಸಿದರೂ ನಗರದ ಕೆರೆ, ಕಲ್ಯಾಣಿಗಳಲ್ಲಿ ವಿಸರ್ಜನೆಗೆ ಅವಕಾಶವಿಲ್ಲ. ಪಾಲಿಕೆಯಿಂದಲೂ ವಿಸರ್ಜನೆಗೆ ಯಾವುದೇ ವ್ಯವಸ್ಥೆ ಮಾಡುವುದಿಲ್ಲ ಎಂದು ಹೇಳಿದೆ. ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜಿಸಬೇಕು ಎಂದು ಸೂಚಿಸಿದೆ. ಆದರೆ ಕರಗಿದ ನೀರನ್ನು ಎಲ್ಲಿಗೆ ಹಾಕಬೇಕು ಎಂದು ಅವರು ಪ್ರಶ್ನಿಸಿದರು.

ಕೊರೋನಾ ಕಾಟ: ಬೆಂಗಳೂರಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್‌?

ಬಕ್ರಿದ್‌ ವೇಳೆ ಹಲವು ಕಡೆ ಗೋಹತ್ಯೆ ಮಾಡಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಗಣೇಶ ಉತ್ಸವ ಮಾಡಿದರೆ ಕೇಸ್‌ ಹಾಕುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ ಎಂದರು.

7 ಲಕ್ಷ ಜನರಿಗೆ ಉಚಿತ ಔಷಧ

ಈ ಬಾರಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ವಿಭಿನ್ನವಾಗಿ ಗಣೇಶ ಹಬ್ಬ ಆಚರಿಸಲು ನಿರ್ಧರಿಸಿದೆ. ಆಯುಷ್‌ ಇಲಾಖೆ ಪ್ರಕಟಿಸಿರುವ ರೋಗ ನಿರೋಧಕ ಹೋಮಿಯೊಪಥಿ ‘ಅರ್ಸೆನಿಕ್‌ ಆಲ್ಬಂ 30’ ಎಂಬ ಔಷಧಿಯನ್ನು ನಗರದ ಏಳು ಲಕ್ಷ ಜನರಿಗೆ ಉಚಿತವಾಗಿ ಹಂಚಲು ನಿರ್ಧರಿಸಿದೆ. ಈ ಕಾರ್ಯಕ್ಕೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಹಾಗೂ ಅನೇಕ ಸಂಘ-ಸಂಸ್ಥೆಗಳು ಕೈ ಜೋಡಿಸಲು ಮುಂದಾಗಿವೆ. ಡಾ. ಜಿವಿಸಿ ಹೋಮಿಯೊಪತಿ ಸೆಲ್‌​ ರಿಲಯನ್ಸ್‌ ಫೋಮ್‌ರ್‍ ನಮ್ಮೊಂದಿಗೆ ಕೈಜೋಡಿಸಿದ್ದು, ಔಷಧಿ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಈ. ಅಶ್ವತ್ಥನಾರಾಯಣ ಹೇಳಿದರು.