ಅನುಮತಿ ಕೊಡದಿದ್ದರೂ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಪ್ರಮೋದ್‌ ಮುತಾಲಿಕ್‌

ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಪಾಲಿಕೆ ಹಾಗೂ ಸರ್ಕಾರ ಮೀನಮೇಷ ಎಣಿಸುತ್ತಿದೆ: ಮುತಾಲಿಕ್‌ 

Ganesha Festival in Hubli Idgah Maidan Even Though Permission is Not Given Says Pramod Mutalik grg

ಹುಬ್ಬಳ್ಳಿ(ಆ.27):  ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ರಾಣಿಚೆನ್ನಮ್ಮ (ಈದ್ಗಾ) ಮೈದಾನ ಗಜಾನನ ಉತ್ಸವ ಸಮಿತಿಯು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಸದನ ಸಮಿತಿಗೆ ಮನವಿ ಸಲ್ಲಿಸಿತು. ಮಹಾನಗರ ಪಾಲಿಕೆಯು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ಸದನ ಸಮಿತಿ ರಚಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಸದನ ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ ಹಾಗೂ ಸಮಿತಿ ಸದಸ್ಯರನ್ನು ಭೇಟಿ ಮಾಡಿದ ಪ್ರಮೋದ್‌ ಮುತಾಲಿಕ್‌ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್‌, ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಪಾಲಿಕೆ ಹಾಗೂ ಸರ್ಕಾರ ಮೀನಮೇಷ ಎಣಿಸುತ್ತಿದೆ. ಅವಕಾಶ ನೀಡಿದರೂ ಹಾಗೂ ನೀಡದಿದ್ದರೂ ಈ ವರ್ಷ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಒಂದು ವೇಳೆ ಪಾಲಿಕೆ ಅವಕಾಶ ನೀಡದಿದ್ದರೆ, ಸರ್ಕಾರ 144 ಕಲಂ ಹಾಕಿ ಗುಂಡು ಹಾರಿಸಿದರೂ, ಲಾಠಿ ಚಾಜ್‌ರ್‍ ಮಾಡಿಸಿದರೂ ಚೆನ್ನಮ್ಮ ಮೈದಾನಕ್ಕೆ ನುಗ್ಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೋರ್ಟ್ ಬ್ರೇಕ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡಾಮಂಡಲ

ಪಾಲಿಕೆಯ ಮೇಯರ್‌ ಅನುಮತಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ವರದಿ ನೀಡಬಾರದು ಎಂದು ಸಮಿತಿಯಿಂದ ಷರತ್ತು ಹಾಕಲಾಗಿದೆ. ಈ ವರೆಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ಯಾರೂ ವಿರೋಧ ಮಾಡಿಲ್ಲ. ಅದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದರು.

ಗಣೇಶೋತ್ಸವ ಆಚರಣೆಗೆ ಅಡ್ಡಿಪಡಿಸಿದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡುವಂತೆ ಗಣೇಶ ಮೂರ್ತಿ ಹಿಡಿದು ಮನೆ-ಮನೆಗೆ ತೆರಳಿ ತಿಳಿವಳಿಕೆ ಅಭಿಯಾನ ಆರಂಭಿಸಬೇಕಾಗುತ್ತದೆ. ಬಿಜೆಪಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಮುತಾಲಿಕ್ .

ಪಾಲಿಕೆ ಸಭೆಯಲ್ಲಿ ಸದನ ಸಮಿತಿ ರಚಿಸುವ ಅವಶ್ಯಕತೆ ಇರಲಿಲ್ಲ. ಇದು ಕಾಲಹರಣದ ನಾಟಕ. ಗಣೇಶೋತ್ಸವಕ್ಕೆ ಅವಕಾಶ ನೀಡದಿದ್ದರೆ ಮುಸ್ಲಿಮರು ನಡೆಸುವ ಸಾಮೂಹಿಕ ಪ್ರಾರ್ಥನೆಗೂ ಅಡ್ಡಿಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಮಿತಿಯ ಹನುಂತಸಾ ನಿರಂಜನ, ಸಂತೋಷ ಕಠಾರೆ, ಅಭಿಷೇಕ ನಿರಂಜನ, ಚಂದ್ರು ಕೋಳೂರ ಇದ್ದರು.

ಈದ್ಗಾ ಮೈದಾನ ವಿಚಾರದಲ್ಲಿ ಅಬ್ಬರಿಸಿ ಕೋರ್ಟ್ ಮುಂದೆ ಥಂಡಾ ಹೊಡೆಯಿತಾ ಬಿಜೆಪಿ?

ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಸದನ ಸಮಿತಿಯು ನಾಗರಿಕರು, ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯಲಿದೆ. ಈ ಬಗ್ಗೆ ಅಹವಾಲು ನೀಡುವವರು ಪಾಲಿಕೆಗೆ ಬಂದು ನೀಡಬೇಕು. ಎಲ್ಲರ ಅಭಿಮತ ಪಡೆದು ಆ. 29ರಂದು ಬೆಳಗ್ಗೆ 11ಕ್ಕೆ ಸಂಪೂರ್ಣ ವರದಿ ನೀಡಲಾಗುವುದು ಅಂತ ಸದನ ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ ತಿಳಿಸಿದ್ದಾರೆ.  

ಸಮಿತಿಯು ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಿ ನೀಡುವ ವರದಿ ಆಧಾರದ ಮೇಲೆ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗದಂತೆ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೇ, ಈ ಬಗ್ಗೆ ಕಾನೂನು ಪರಿಣಿತರ ಅಭಿಪ್ರಾಯವನ್ನು ಸಹ ತೆಗೆದುಕೊಂಡು ನಿರ್ಣಯಿಸಲಾಗುವುದು ಅಂತ ಮೇಯರ್‌ ಈರೇಶ ಅಂಟಗೇರಿ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios