ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೋರ್ಟ್ ಬ್ರೇಕ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡಾಮಂಡಲ
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಇನ್ನು ಈ ಬಗ್ಗೆ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು (ಆ.25): ನಗರದ ಚಾಮರಾಜಪೇಟೆ ಮೈದಾನದಲ್ಲಿ 11 ದಿನ ಗಣೇಶೋತ್ಸವಕ್ಕೆ ಕಂದಾಯ ಇಲಾಖೆ ಅನುಮತಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಉತ್ಸವ ಆಚರಣೆಗೆ ಪೂರ್ವ ಸಿದ್ಧತೆ ಆರಂಭಿಸಿವೆ. ಆದ್ರೆ, ಇದೀಗ ಕೋರ್ಟ್ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನಿರಾಕರಿಸಿದೆ.
ಚಾಮರಾಜಪೇಟೆ ಮೈದಾನ ಮಾಲೀಕತ್ವಕ್ಕೆ ಸಂಬಂಧಿಸಿ BBMP ಆದೇಶದ ವಿರುದ್ಧ ವಕ್ಫ್ ಬೋರ್ಡ್ ಹೈಕೋರ್ಟ್(High Court) ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ಇಲ್ಲ. ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಇಂದು(ಆ.25) ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹಿಂದೂ ಸಂಘಟನೆಗಳಿಗೆ ನಿರಾಸೆಯಾಗಿದೆ.
Idgah Maidan ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೋರ್ಟ್ ಬ್ರೇಕ್
ಸರ್ಕಾರದ ವಿರುದ್ಧ ಮುತಾಲಿಕ್ ಕಿಡಿ
ಇನ್ನು ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹೈಕೋರ್ಟ್ ಈದ್ಗಾ ಮೈದಾನ ಸಂಬಂಧ ಪಟ್ಟಂತೆ ಮಧ್ಯಂತರ ಆದೇಶ ಕೊಟ್ಟಿದೆ. ಕೋರ್ಟ್ ಆದೇಶವನ್ನ ಒಪ್ಪುತ್ತೆವೆ ಗೌರವಿಸುತ್ತೇವೆ . ಸರ್ಕಾರ ವಾದ ವಿವಾದದಲ್ಲಿ ದಾಖಲೆ ಸಲ್ಲಿಸೋದ್ರಲ್ಲಿ ವಿಫಲ ಆಗಿದೆ. 6 ಏಕರೆ ಜಾಗವನ್ನ ಬದಲಾಗಿ ನೀಡಿದೆ. ಈ ದಾಖಲಾತಿ ನೀಡಲು ವಿಫಲ ಆಗಿದ್ದಾರೆ . ಕೆಲ ಸಚಿವರು, ಇಲಾಖೆಯವರು ಜಮೀರ್ ಜೊತೆ ಶಾಮೀಲು ಆಗಿದ್ದಾರೆ ಎಂಬ ಅನುಮಾನ ಬರ್ತಾ ಇದೆ ಎಂದರು.
ಇಂಟರಿಮ್ ಆದೇಶದಲ್ಲಿ ನಾವು ಪಾರ್ಟಿ ಆಗ್ತೀವಿ ನಾವು ಮೇಲ್ಮನವಿ ಹೋಗ್ತೆವೆ.ಗಣೇಶ ಹಬ್ಬದ ಆಚರಣೆಗೆ ಹಿಂದೂಪರ ಸಂಘಟನೆಗಳು ಕೋರ್ಟ್ ಮೊರೆ ಹೋದ್ರೆ ನ್ಯಾಯಾಂಗ ಆದೇಶ ಉಲ್ಲಂಘನೆ ಮಾಡಿ ಹೇಗೆ ಮಾಡಲು ಸಾಧ್ಯ.ಒಂದು ವೇಳೆ ನ್ಯಾಯಾಂಗದ ಮೊರೆ ಹೋದ್ರೆ ನ್ಯಾಯಾಂಗದ ಆದೇಶ ನೊಡಬೇಕಿದೆ. ಈ ಸಮಯದಲ್ಲಿ ಬಂದಿರುವ ಆದೇಶ ನಮಗೆ ಸ್ವಾಗತಾರ್ಹವಾಗಿದೆ. ಸರ್ಕಾರದ ಜಾಗದಲ್ಲಿ ಗಣೇಶೋತ್ಸವ ಮಾಡಿದ್ರೆ ಯಾರಿಗೆ ತೊಂದರೆ ಎಂದು ಪ್ರಶ್ನಿಸಿದರು.
ನಾನು ಸರ್ಕಾರವನ್ನ ದೋಷಿಯನ್ನಾಗಿ ಮಾಡುತ್ತಿದ್ದೇನೆ. ಜಮೀರ್ ಜೊತೆ ಶಾಮೀಲು ಆಗಿದ್ದಾರೆ. ವಕ್ಫ್ ಬೋರ್ಡ್ ಬಳಿ ಏನು ದಾಖಲಾತಿಯಿಲ್ಲ. ಸಂಪೂರ್ಣ ತೀರ್ಪು ನೋಡಬೇಕಿದೆ. ಕೋರ್ಟ್ ಕೂಡ ಗಂಭೀರವಾಗಿ ಯೋಚನೆ ಮಾಡಬೇಕು. ಲಕ್ಷಾಂತರ ಹಿಂದೂಗಳ ಭಾವನೆ ಅರ್ಥ ಮಾಡಿಕೊಳ್ಳಬೇಕು . ಕಾನೂನು ಹೋರಾಟ ಮಾಡಿ ಹಿಂದೂಗಳ ಆಚರಣೆಗೆ ಅವಕಾಶ ಪಡೆಯುತ್ತೆವೆ ಎಂದು ಸ್ಪಷ್ಟಪಡಿಸಿದರು.
30ನೇ ತಾರೀಖು ಒಳಗಡೆನೆ ವಕೀಲರನ್ನ ಭೇಟಿ ಮಾಡಿ ಏನು ಮಾಡಬಹುದು ಅಂತಾ ಚರ್ಚೆ ಮಾಡಿ ಮೇಲ್ಮನವಿ ಹೋಗ್ತೇವೆ. ವಕ್ಫ ಬೋರ್ಡ್ ಸರ್ಕಾರದ ಒಂದು ಭಾಗ. ನಾವೂ ಸರ್ಕಾರದ ಒಂದು ಭಾಗವಾಗಿದ್ದೇವೆ. ಬಿಬಿಎಂಪಿ ಮೇಲೆ ನಾವು ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇವೆ. ಕಾನೂನಾತ್ಮಕವಾಗಿ ಏನೆಲ್ಲಾ ಹೋರಾಟ ಮಾಡಬೇಕೋ ಅದೆಲ್ಲ ನಾವು ಮಾಡುತ್ತೇವೆ ಎಂದು ವಿವರಿಸಿದರು.
ಒಂದು ದಿನದ ಗಣೇಶೋತ್ಸವಕ್ಕೆ ಮನವಿ ಮಾಡುತ್ತೇವೆ. ಗಣೇಶೋತ್ಸವಕ್ಕೆ ನಮಗೆ ಅವಕಾಶ ಸಿಕ್ಕೆ ಸಿಗುತ್ತೆ ಅನ್ನೋ ನಂಬಿಕೆ ಇದೆ. ಯಾವುದೇ ಗದ್ದಲವಿಲ್ಲದೆ ಗಣೇಶೋತ್ಸವ ಆಚರಣೆ ಮಾಡೇ ಮಾಡುತ್ತೇವೆ ಎಂದು ಹೇಳಿದರು.