ಯಾವುದೇ ಕ್ಷಣ​ದ​ಲ್ಲಿ ಜಲಾಶಯದ ಕ್ರಸ್ಟ್‌ ಗೇಟ್‌ಗಳ ತೆರೆದು ನೀರು ಹೊರಗೆ ಹರಿ​ಸುವ ಸಾಧ್ಯತೆ, 587.54 ಅಡಿಗೆ ತಲು​ಪಿದ ನೀರು. 

ಶಿವಮೊಗ್ಗ(ಜು.06): ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಮಲೆ​ನಾಡು ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವ ಕಾರಣ ತುಂಗಾನದಿಗೆ ಅಧಿಕ ನೀರು ಹರಿದುಬರುತ್ತಿದೆ. ಪರಿ​ಣಾಮ ಗಾಜನೂರು ಡ್ಯಾಂ ಭರ್ತಿಯಾಗಿದ್ದು, ಡ್ಯಾಂನಿಂದ ನೀರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣ​ದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನೀರು ಹೊರಗೆ ಹರಿ​ಸುವ ಸಾಧ್ಯತೆ ಇದೆ.

ತುಂಗಾ ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಮಟ್ಟ588.24 ಅಡಿ. ಇವತ್ತು ನೀರಿನ ಮಟ್ಟ 587.54 ಅಡಿಗೆ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ನೀರಿನಮಟ್ಟ ಸುಮಾರು 1 ಅಡಿಯಷ್ಟು ಏರಿಕೆಯಾಗಿದೆ. ಸದ್ಯಕ್ಕೆ ಒಳಹರಿವು 4830 ಕ್ಯುಸೆಕ್‌ ಇದೆ. ತುಂಗಾ ಜಲಾಶಯವು 2.848 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 2.019 ಟಿಎಂಸಿ ನೀರಿದೆ.

ಕಾಫಿನಾಡಲ್ಲಿ ಭರ್ಜರಿ ಮಳೆ, ತುಂಗಾ-ಭದ್ರಾ- ಹೇಮಾವತಿ ನದಿಗಳಿಗೆ ಜೀವಕಳೆ

ಮಳೆ ಜೋರು:

ಮಲೆ​ನಾಡು ಹಾಗೂ ತುಂಗಾ ಜಲಾಶಯದ ವ್ಯಾಪ್ತಿ​ಯಲ್ಲಿ ನಿರಂತರ ಮಳೆಯಾಗುತ್ತಿದೆ. ಚಿಕ್ಕಮಗಳೂರು, ತೀರ್ಥಹಳ್ಳಿ ತಾಲೂ​ಕಿ​ನಲ್ಲಿಯೂ ಮಳೆ ಬಿರುಸು ಪಡೆ​ದು​ಕೊಂಡಿದೆ. ಜಲಾಶಯಕ್ಕೆ ನೀರಿನ ಒಳಹರಿವು ಇದೇ ರೀತಿ ಹೆಚ್ಚಾದರೆ ಜಲಾಶಯದ ನೀರು ಅಪಾಯದ ಮಟ್ಟತಲುಪಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಸ್ಟ್‌ ಗೇಟ್‌ಗಳನ್ನು ಮೇಲೆತ್ತಿ ಹೆಚ್ಚುವರಿ ನೀರನ್ನು ನದಿ ಬಿಡಲಾಗುವುದು ಎಂದು ಎಂಜಿನಿಯರ್‌ ತಿಳಿಸಿದ್ದಾರೆ.

ಬರಿದಾಗುವ ಹಂತದಲ್ಲಿತ್ತು:

ಒಟ್ಟಾರೆ ಡ್ಯಾಂ ನೀರಿನ ಸಂಗ್ರಹಣಾ ಸಾಮರ್ಥ್ಯ 3.24 ಟಿಎಂಸಿ ಆಗಿದೆ. ಪ್ರಸ್ತುತ ಮುಂಗಾರು ಮಳೆ ವಿಳಂಬದ ಕಾರಣದಿಂದ ಡ್ಯಾಂ ನೀರಿನ ಸಂಗ್ರಹದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿತ್ತು. ಇದೀಗ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಡ್ಯಾಂನಲ್ಲಿ ನೀರು ಗರಿಷ್ಠ ಮಟ್ಟಕ್ಕೆ ತಲು​ಪಿ​ದೆ.

ಎಚ್ಚರ ವಹಿಸಲು ಮನವಿ:

ತುಂಗಾ ಡ್ಯಾಂ ನೀರು ಗರಿಷ್ಠ ಮಟ್ಟಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಡ್ಯಾಂನಿಂದ ನದಿಗೆ ಯಾವ ಸಮಯದಲ್ಲಿ ಬೇಕಾದರೂ ನೀರು ಹೊರಹರಿಸುವ ಸಾಧ್ಯತೆಯಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಿ.ಸುರೇಶ್‌ ತಿಳಿಸಿದ್ದಾರೆ. ಈ ಕುರಿರು ಬುಧವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಡ್ಯಾಂ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದೆ. ಒಳಹರಿವಿನಲ್ಲಿ ಏರಿಕೆ ಕಂಡು ಬರಲಾರಂಭಿಸಿದೆ. ತುಂಗಾ ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ನಾಗರಿಕರು ಎಚ್ಚರಿಕೆ ವಹಿಸಬೇಕು. ನದಿಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಮನವಿ ಮಾಡಿದ್ದಾರೆ.

24 ಗಂಟೆಯಲ್ಲಿ ಸರಾಸರಿ 28.56 ಮಿಮೀ ಮಳೆ

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 199.90 ಮಿಮೀ ಮಳೆಯಾಗಿದ್ದು, ಸರಾಸರಿ 28.56 ಮಿಮೀ ಮಳೆ ದಾಖಲಾಗಿದೆ. ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಇದುವರೆಗೆ ಸರಾಸರಿ 73.13 ಮಿಮೀ ಮಳೆ ದಾಖಲಾಗಿದೆ.

ಶಿವಮೊಗ್ಗ ತಾಲೂ​ಕಿ​ನ​ಲ್ಲಿ 10.50 ಮಿಮೀ., ಭದ್ರಾವತಿ- 8.50 ಮಿಮೀ., ತೀರ್ಥಹಳ್ಳಿ 44.80 ಮಿಮೀ., ಸಾಗರ 57.10 ಮಿಮೀ., ಶಿಕಾರಿಪುರ 10.60 ಮಿಮೀ., ಸೊರಬ 15.20 ಮಿಮೀ ಹಾಗೂ ಹೊಸನಗರ ತಾಲೂ​ಕಿ​ನಲ್ಲಿ 53.20 ಮಿಮೀ ಮಳೆಯಾಗಿದೆ.

ಲಿಂಗ​ನ​ಮ​ಕ್ಕಿ-ಭದ್ರಾ ಡ್ಯಾಂ:

ಉತ್ತಮ ಮಳೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯಕ್ಕೆ 9237 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯ ನೀರಿ​ನಮಟ್ಟ1742.70 ಅಡಿಗಳಿಗೆ ತಲುಪಿದೆ. ಭದ್ರಾ ಜಲಾಶಯಕ್ಕೆ 2397 ಕ್ಯುಸೆಕ್‌ ನೀರು ಹರಿದುಬಂದಿದ್ದು, ಜಲಾಶಯ ನೀರಿನ ಮಟ್ಟ 137.20 ಅಡಿ​ಗ​ಳಿ​ಗೆ ತಲುಪಿದೆ. ತುಂಗಾ ಜಲಾಶಯಕ್ಕೆ 4830 ಕ್ಯುಸೆಕ್‌ ನೀರು ಹರಿದುಬಂದಿದ್ದು, ಜಲಾಶಯ ಬಹುತೇಕ ಭರ್ತಿಯಾಗಿದೆ.

ಆನಂದಪುರ ಸುತ್ತಮುತ್ತ ಉತ್ತಮ ಮಳೆ

ಆನಂದಪುರ: ಆನಂದಪುರ ಸುತ್ತಮುತ್ತ ಜೂನ್‌ ತಿಂಗಳು ಕಳೆದರೂ ಮಳೆಯಾಗಲಿಲ್ಲ ಎಂದು ರೈತರು ಆತಂಕ ಪಡುತ್ತಿದ್ದಂತೆಯೇ ಕಳೆದೆರಡು ಮೂರು ದಿನಗಳಿಂದ ಮಳೆಯಾಗುತ್ತಿದೆ. ಇದ​ರಿಂದ ಸ್ಥಳೀಯ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

Kodagu Rains: ಕೊಡಗಿನಲ್ಲಿ ತೀವ್ರಗೊಂಡ ಮಳೆ, ಮರ ಬಿದ್ದು ಬಸ್ ಜಖಂ, ಆರೆಂಜ್ ಅಲರ್ಟ್ ಘೋಷಣೆ

ವಾಡಿಕೆಯಂತೆ ಮಳೆ ಜೂನ್‌ ತಿಂಗಳಲ್ಲಿ ಪ್ರಾರಂಭ ಆಗಬೇಕಾಗಿತ್ತು. ಆದರೆ ಜುಲೈನಲ್ಲಿ ಪ್ರಾರಂಭವಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಬಹುತೇಕ ರೈತರು ಮಳೆಯನ್ನು ನಂಬಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಈಗ ಮಳೆಯಾಗಿದ್ದರಿಂದ ಸ್ವಲ್ಪ ನೆಮ್ಮದಿ ಪಡುವಂತಾಗಿದೆ.

ಮಳೆ ಚುರುಕು ಪಡೆ​ಯುತ್ತಿದ್ದಂತೆ ರೈತರು ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಲ್ಲಿ ಕೊಳ್ಳಲು ಮುಂದಾಗಿದ್ದಾರೆ. ರಸಗೊಬ್ಬರ, ಔಷಧಿ, ಕೊಳ್ಳುವುದರೊಂದಿಗೆ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಸಣ್ಣ ಪ್ರಮಾಣದಲ್ಲಿ ಕಳೆದೆರಡು ಮೂರು ದಿನಗಳಿಂದ ಮಳೆಯಾಗುತ್ತಿದ್ದ ಕಾರಣ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಸಾಗರದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದ್ದು, ಬುಧವಾರವೂ ನಿರಂತರವಾಗಿ ಮಳೆ ಸುರಿದಿದೆ. ತೀರ್ಥಹಳ್ಳಿ, ಹೊಸನಗದಲ್ಲೂ ಉತ್ತಮ ಮಳೆಯಾಗಿದೆ.