ಬೆಂಗಳೂರಿನ ಹೆಸರಘಟ್ಟದಲ್ಲಿರುವ ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ನುಗ್ಗಿದ ಕಳ್ಳರ ಗ್ಯಾಂಗ್, ಬಂಗಾರವನ್ನು ಮುಟ್ಟದೆ ಕೆಜಿಗಟ್ಟಲೆ ಬೆಳ್ಳಿ ಮಾತ್ರ ದೋಚಿತ್ತು. ಈ ಪ್ರಕರಣವನ್ನು ಭೇದಿಸಿದ ಬಾಗಲಗುಂಟೆ ಪೊಲೀಸರು, ರಾಜಸ್ಥಾನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ 36 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಮೇ.26): ಬೆಂಗಳೂರು ಪೊಲೀಸರನ್ನೇ ಬೆಚ್ಚಿಬೀಳಿಸಿದ ಕಳ್ಳರ ಗ್ಯಾಂಗ್ ಒಂದು ವಿಚಿತ್ರ ಸ್ಟೈಲ್‌ನಲ್ಲಿ ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿದೆ. ಅಂಗಡಿಯಲ್ಲಿ ಕೆಜಿಗಟ್ಟಲೇ ಬಂಗಾರ ಕಣ್ಣ ಮುಂದೆ ಇತ್ತಂತೆ. ಆದರೆ ಖದೀಮರು ಅದನ್ನ ತಿರುಗಿಯೂ ನೋಡಿಲ್ಲ ಎಂದರೆ ನಂಬುತ್ತೀರಾ? ಚಿನ್ನ ಅಂದರೆ ಯಾರಿಗೆ ಬೇಡ? ಆದರೆ ಈ ಖದೀಮರಿಗೆ ಚಿನ್ನ ಅಂದ್ರೆ ಅಲರ್ಜಿ, ಬೆಳ್ಳಿ ಅಂದ್ರೆ ಎನರ್ಜಿ! ಈ ಖದೀಮರ ಟಾರ್ಗೆಟ್ ಒಂದೇ ಬೆಳ್ಳಿ! 'ಬಂಗಾರ ಇದ್ರೂ ಮುಟ್ಟಲ್ಲ, ಬೆಳ್ಳಿ ಕಂಡ್ರೆ ಬಿಡಲ್ಲ' ಅನ್ನೋ ರೀತಿ ಪ್ಲಾನ್ ಮಾಡಿ ಬಂದಿದ್ದ ಗ್ಯಾಂಗ್, ರಾತ್ರಿ ಹೊತ್ತು ಅಂಗಡಿಯ ಗೋಡೆ ಕೊರೆದು ಒಳಗೆ ನುಗ್ಗಿದೆ.

Add Asianetnews Kannada as a Preferred SourcegooglePreferred

ಹೆಸರಘಟ್ಟದ ಜ್ಯುವೆಲರಿ ಅಂಗಡಿಯಲ್ಲಿ ಫಿಲ್ಮ್ ಸ್ಟೈಲ್‌ನಲ್ಲಿ ಕಳ್ಳತನ!

ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂಬಿ ಜ್ಯುವೆಲರ್ಸ್ ಅಂಗಡಿ ಮೇಲೆ ಏಪ್ರಿಲ್ 27ರ ಬೆಳಗಿನ ಜಾವ ದಾಳಿ ನಡೆದಿತ್ತು. ಗೋಡೆ ಕೊರೆದು ಒಳಗೆ ನುಗ್ಗಿದ ಕಳ್ಳರು, ನೇರವಾಗಿ ಬೆಳ್ಳಿ ಇಟ್ಟ ಜಾಗಕ್ಕೆ ಹೋಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕೆಜಿಗಟ್ಟಲೇ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ಅಂಗಡಿ ತೆರೆಯಲು ಬಂದ ಮಾಲೀಕ ಶಾಕ್ ಆಗಿದ್ದ. ಯಾಕೆಂದರೆ ಜ್ಯೂವೆಲ್ಲರಿ ಶಾಪ್‌ನಲ್ಲಿ ಬೆಳೆಬಾಳುವ ಬಂಗಾರ ಹಾಗೇ ಇದ್ದು, ಬೆಳ್ಳಿ ಮಾತ್ರ ಒಂದು ತುಂಡು ಬಿಡದೆ ದೋಚಿದ್ದ ಖದೀಮರು! ಸಿಸಿಟಿವಿ ದೃಶ್ಯ ನೋಡಿ ಪೊಲೀಸರೂ ಕಂಗಾಲಾಗಿದ್ದರು.

ಹೈದರಾಬಾದ್‌ನಲ್ಲಿ ಬೆಳ್ಳಿ ಸೇಲ್... ನಂತರ ರಾಜಸ್ಥಾನ ಎಸ್ಕೇಪ್!

ಜ್ಯೂವೆಲ್ಲರಿ ಶಾಪ್ ಕಳ್ಳತನದ ಬಳಿಕ ಗ್ಯಾಂಗ್ ನೇರವಾಗಿ ಹೈದರಾಬಾದ್‌ಗೆ ಹೋಗಿದೆ. ಅಲ್ಲಿ ಅರ್ಧ ಬೆಳ್ಳಿಯನ್ನು ಮಾರಾಟ ಮಾಡಿತ್ತು. ಅಲ್ಲಿಂದ ಯಾರಿಗೂ ಸುಳಿವು ಸಿಗದಂತೆ ರಾಜಸ್ಥಾನಕ್ಕೆ ಎಸ್ಕೇಪ್ ಆಗಿತ್ತು. ಆದರೆ ಬಾಗಲಗುಂಟೆ ಪೊಲೀಸರ ಸೈಲೆಂಟಾಗಿ ಖದೀಮರ ಹೆಜ್ಜೆ ಜಾಡು ಹಿಡಿದು ಬೆನ್ನತ್ತಿದ್ದರು. ಕೊನೆಗೆ ಸಿಸಿಟಿವಿ, ಮೊಬೈಲ್ ಲೊಕೇಶನ್ ಮತ್ತು ಟ್ರಾವೆಲ್ ಡೀಟೇಲ್ಸ್ ಆಧರಿಸಿ ಪೊಲೀಸರು ರಾಜಸ್ಥಾನದಲ್ಲಿ ದಾಳಿ ನಡೆಸಿ ಜಾಟ್ ಸುರೇಶ್, ಧನರಾಮ್ ಮತ್ತು ನೇಮಿ ಚಂದ್ ಎಂಬ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

36 ಕೆಜಿ ಬೆಳ್ಳಿ ವಶ... ಕಿಂಗ್‌ಪಿನ್ ಪರಾರಿ!

ಬಂಧಿತರಿಂದ ಸುಮಾರು 1 ಕೋಟಿ ಮೌಲ್ಯದ 36 ಕೆಜಿಯಷ್ಟು ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಮಹೇಂದ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆತನಿಗಾಗಿ ಬಾಗಲಗುಂಟೆ ಪೊಲೀಸರು ಬಲೆ ಬೀಸಿದ್ದಾರೆ. ಮಹೇಂದ್ರ ಸಿಕ್ಕಿಬಿದ್ದರೆ ಇನ್ನಷ್ಟು ಶಾಕಿಂಗ್ ಕಳ್ಳತನ ಪ್ರಕರಣಗಳು ಬಯಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.