ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರ ಬಹುಮಾನ ಘೋಷಿಸಿದೆ. ಆದರೆ, ನಿವೇಶನ, ಧನಸಹಾಯದ ಜೊತೆಗೆ ಕೇವಲ ಗುತ್ತಿಗೆ ಆಧಾರಿತ ನೌಕರಿ ನೀಡಿರುವುದು ಕುಟುಂಬಕ್ಕೆ ತೀವ್ರ ನಿರಾಸೆ ಮೂಡಿಸಿದೆ.

ಗದಗ (ಜ.26): ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ಅಪಾರ ಮೌಲ್ಯದ ಚಿನ್ನದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಹಸ್ತಾಂತರಿಸಿ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರ ಕೊನೆಗೂ 'ಬಹುಮಾನ' ಘೋಷಿಸಿದೆ. ಆದರೆ, ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಕೇವಲ ಗುತ್ತಿಗೆ ಆಧಾರಿತ ನೌಕರಿ ನೀಡಿರುವುದು ಕುಟುಂಬಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಕುಟುಂಬದ ಆಕ್ರೋಶ:

ಗದಗ ಜಿಲ್ಲಾ ಕೇಂದ್ರದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರದ ಈ ಕೊಡುಗೆಗಳನ್ನು ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ, ಲಕ್ಕುಂಡಿ ನಿಧಿಯನ್ನು ಸರ್ಕಾರಕ್ಕೆ ಕೊಟ್ಟ ಮಹಿಳೆ ಕಸ್ತೂರೆವ್ವ ಅವರ ಅಣ್ಣ ಬಾಗಲಿಗುಡದಪ್ಪ ಮತ್ತು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಮನೆ ಅಡಿಪಾಯ ತೆಗೆಯುವಾಗ ಸಿಕ್ಕಿದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ನಿಧಿಯನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಸಿದ್ದೇವೆ. ಸರ್ಕಾರದಿಂದ ನಮಗೆ ಬದಲಿ ನಿವೇಶನ, ಮನೆ ನಿರ್ಮಾಣಕ್ಕೆ ಹಣ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಜಿಲ್ಲಾಡಳಿತದಿಂದ ಘೋಷಣೆ ಮಾಡಲಾಗಿತ್ತು. ನಮ್ಮ ಕುಟುಂಬದ ಸದಸ್ಯರು ಸರ್ಕಾರಿ ನೌಕರಿ ಸಿಗುತ್ತದೆಂಬ ಸಂತಸದಲ್ಲಿದ್ದೆವು. ಆದರೆ ಈಗ ನೀಡಿರುವುದು ಕೇವಲ ಗುತ್ತಿಗೆ ಆಧಾರದ ಕೆಲಸ. ಈ ಕೆಲಸ 9 ತಿಂಗಳು ಅಥವಾ ಒಂದು ವರ್ಷದ ಬಳಿಕ ಯಾವಾಗ ಬೇಕಿದ್ದರೂ ಈ ಕೆಲಸ ಹೋಗುತ್ತದೆ. ಇನ್ನು ಮನೆ ಕಟ್ಟಲು ನೀಡಿರುವ 5 ಲಕ್ಷ ರೂಪಾಯಿ ಇಂದಿನ ಕಾಲಕ್ಕೆ ಯಾವುದಕ್ಕೂ ಸಾಲುವುದಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರ ಘೋಷಿಸಿದ ಕೊಡುಗೆಗಳೇನು?

77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ರಿತ್ತಿ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ನೀಡಲಾದ ಸೌಲಭ್ಯಗಳನ್ನು ಪ್ರಕಟಿಸಿದರು.

ಲಕ್ಕುಂಡಿ ಗ್ರಾಮದಲ್ಲಿ 30/40 ಅಳತೆಯ ಒಂದು ನಿವೇಶನ.

ಮನೆ ನಿರ್ಮಾಣಕ್ಕಾಗಿ ಸಚಿವರ ವಿವೇಚನಾ ನಿಧಿಯಿಂದ 5 ಲಕ್ಷ ರೂಪಾಯಿ ಧನಸಹಾಯ.

ಕುಟುಂಬದ ಸದಸ್ಯೆ ಕಸ್ತೂರೆವ್ವ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ (Outsourcing) ಆಧಾರದ ಮೇಲೆ ಅಡುಗೆ ಸಹಾಯಕಿ ಉದ್ಯೋಗ.

ಸಚಿವ ಎಚ್.ಕೆ. ಪಾಟೀಲರ ಸಮರ್ಥನೆ

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲರು, 'ಪ್ರಜ್ವಲ್ ರಿತ್ತಿ ತೋರಿದ ಪ್ರಾಮಾಣಿಕತೆ ರಾಷ್ಟ್ರಕ್ಕೆ ಮಾದರಿ. ಲಕ್ಕುಂಡಿಯ ಗತವೈಭವ ಸಾರುವ ನಿಧಿಯನ್ನು ಅವರು ಸರ್ಕಾರದ ಸ್ವತ್ತು ಎಂದು ಭಾವಿಸಿ ಒಪ್ಪಿಸಿದ್ದಾರೆ. ಅವರಿಗೆ ಸದ್ಯ ನಿವೇಶನ, ಧನಸಹಾಯ ಹಾಗೂ ತಾಯಿ ಗಂಗಮ್ಮ ಅವರಿಗೆ ಹೊರಗುತ್ತಿಗೆ ಕೆಲಸ ನೀಡಿದ್ದೇವೆ. ಬಂಗಾರದ ಪುರಾತನ ಮೌಲ್ಯ ನಿರ್ಧರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ ಸಚಿವರು, ರಿತ್ತಿ ಕುಟುಂಬಕ್ಕೆ ನೀಡಿರುವುದು ಕೇವಲ ಆರಂಭಿಕ ಗೌರವ ಎಂಬ ಸುಳಿವು ನೀಡಿದ್ದಾರೆ. ಆದರೆ, ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ತೃಪ್ತಿಕರವಾಗಿಲ್ಲ ಎಂಬ ಕೂಗು ಸ್ಥಳೀಯವಾಗಿ ಕೇಳಿಬರುತ್ತಿದೆ.