ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಬಾಲಕನಿಗೆ ಸಿಕ್ಕ ಚಿನ್ನದ ನಿಧಿ ಪ್ರಕರಣವು ಇದೀಗ ವಿವಾದಕ್ಕೆ ತಿರುಗಿದೆ. ನಿಧಿಯಲ್ಲಿದ್ದ ಅರ್ಧದಷ್ಟು ಚಿನ್ನವನ್ನು ಸ್ಥಳೀಯ ಪಂಚಾಯಿತಿ ಸದಸ್ಯೆಯೊಬ್ಬರು ಕದ್ದಿದ್ದಾರೆ ಎಂದು ಬಾಲಕನ ಚಿಕ್ಕಪ್ಪ ಗಂಭೀರ ಆರೋಪ ಮಾಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಗದಗ (ಜ.13): ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಅಗೆಯುವಾಗ ಪತ್ತೆಯಾದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ನಿಧಿ ಪ್ರಕರಣ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಇಡೀ ದೇಶವೇ ಬಾಲಕ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆಯನ್ನು ಕೊಂಡಾಡುತ್ತಿರುವ ಬೆನ್ನಲ್ಲೇ, ನಿಧಿಯಲ್ಲಿ ಸ್ವಲ್ಪ ಪ್ರಮಾಣದ ಚಿನ್ನ ಕಳ್ಳತನವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

ಏನಿದು ಆರೋಪ?

ನಿಧಿ ಹಸ್ತಾಂತರಿಸಿದ ಬಾಲಕ ಪ್ರಜ್ವಲ್ ರಿತ್ತಿಯ ಚಿಕ್ಕಪ್ಪ ಮೌನೇಶ್ವರ ರಿತ್ತಿ ಅವರು ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರ ವಿರುದ್ಧ ನೇರ ಆರೋಪ ಮಾಡಿದ್ದಾರೆ. 'ಚೊಂಬಿನಲ್ಲಿ ನಿಧಿ ಸಿಕ್ಕ ಬಳಿಕ ಗುಡಿಯ ಬಳಿ ಕುಳಿತಿದ್ದ ನನ್ನ ಮಗನನ್ನು ಆ ಸದಸ್ಯೆ ತಮ್ಮ ಮನೆಗೆ ಒಬ್ಬನೇ ಇರುವಾಗ ಕರೆದುಕೊಂಡು ಹೋಗಿದ್ದು ಯಾಕೆ? ಎಂದು ಮೌನೇಶ್ವರ ಪ್ರಶ್ನಿಸಿದ್ದಾರೆ.

ಅರ್ಧ ಚಿನ್ನ ಕಳ್ಳತನದ ಅನುಮಾನ

ನಿಧಿ ಸಿಕ್ಕಾಗ ಆ ಚೊಂಬು ಪೂರ್ತಿ ತುಂಬಿತ್ತು. ಆದರೆ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ವೇಳೆ ಅದರಲ್ಲಿ ಅರ್ಧದಷ್ಟು ಮಾತ್ರ ಇತ್ತು. ಆ ಸದಸ್ಯೆ ಚೊಂಬಿನಲ್ಲಿದ್ದ ಅರ್ಧದಷ್ಟು ಚಿನ್ನವನ್ನು ತಾವೇ ಇಟ್ಟುಕೊಂಡಿದ್ದಾರೆ ಎಂಬ ಬಲವಾದ ಅನುಮಾನ ನಮಗಿದೆ. ಒಂದು ವೇಳೆ ಅವರಿಗೆ ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸುವ ಉದ್ದೇಶವಿದ್ದಿದ್ದರೆ, ಸಾರ್ವಜನಿಕವಾಗಿಯೇ ಚೊಂಬನ್ನು ತೆರೆಯಬೇಕಿತ್ತು. ಅದನ್ನು ಬಿಟ್ಟು ಗುಟ್ಟಾಗಿ ಮನೆಗೆ ಕರೆದುಕೊಂಡು ಹೋಗಿ ನಿಧಿಯ ಫೋಟೋವನ್ನು ಲಕ್ಕುಂಡಿ ಪ್ರಾಧಿಕಾರದ ಸದಸ್ಯರಿಗೆ ಕಳುಹಿಸುವ ಅಗತ್ಯವೇನಿತ್ತು? ಎಂದು ಆಕ್ರೋಶ ಹೊರಹಾಕಿದ್ದಾರೆ.

ತನಿಖೆಗೆ ಒತ್ತಾಯ

ನನ್ನ ಮಗ ಇನ್ನೂ ಚಿಕ್ಕವನು, ಅವನಿಗೆ ಈ ವ್ಯವಹಾರಗಳ ಬಗ್ಗೆ ಏನೂ ತಿಳಿಯದು. ಅವನೊಬ್ಬನನ್ನೇ ಮನೆಗೆ ಕರೆದುಕೊಂಡು ಹೋಗುವ ಬದಲಿಗೆ ನಾಲ್ವರು ಹಿರಿಯರನ್ನು ಜೊತೆಗೆ ಕರೆದುಕೊಂಡು ಹೋಗಬಹುದಿತ್ತು. ನಿಧಿಯಲ್ಲಿನ ದೊಡ್ಡ ಪ್ರಮಾಣದ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಶಂಕೆಯಿದ್ದು, ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು' ಎಂದು ಮೌನೇಶ್ವರ ರಿತ್ತಿ ಒತ್ತಾಯಿಸಿದ್ದಾರೆ.

ಪ್ರಾಮಾಣಿಕತೆಯ ಕಥೆಯ ನಡುವೆ ಈ ಕಳ್ಳತನದ ಆರೋಪ ಕೇಳಿಬಂದಿರುವುದು ಲಕ್ಕುಂಡಿ ಗ್ರಾಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಚಿನ್ನವಲ್ಲ ಎಂದಿದ್ದ ಅಧಿಕಾರಿ:

ಇನ್ನು ಲಕ್ಕುಂಡಿಯಲ್ಲಿ ಸಿಕ್ಕಿದ್ದ ನಿಧಿಯನ್ನು ಚಿನ್ನವೇ ಅಲ್ಲವೆಂದು ಒಬ್ಬ ಅಧಿಕಾರಿಯೂ ಹೇಳಿದ್ದರು. ಈ ಮೂಲಕ ರಾಜ್ಯದಾದ್ಯಂತ ಭಾರೀ ಸುದ್ದಿಯಾಗಿದ್ದ ನಿಧಿಯನ್ನು ಕಬ್ಜಾ ಮಾಡುವ ಹುನ್ನಾರ ಮಾಡಿದ್ದರು ಎಂಬ ಆರೋಪಗಳೂ ಕೇಳಿ ಬಂದಿದ್ದವು. ಇದರ ಬೆನ್ನಲ್ಲಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ ಬೆನ್ನಲ್ಲಿಯೇ ನಿಧಿಯಲ್ಲಿ ಸಿಕ್ಕಿರುವ ಎಲ್ಲ ವಸ್ತುಗಳೂ ಬಂಗಾರದ ಆಭರಣಗಳು ಎಂದು ಸುದ್ದಿಗೋಷ್ಠಿ ಮೂಲಕ ಸ್ಪಷ್ಟೀಕರಣವನ್ನೂ ನೀಡಿದ್ದರು. ಇದರ ಜೊತೆಗೆ, ನಿಧಿಯಲ್ಲಿರುವ ಆಭರಣ ಚಿನ್ನವಲ್ಲ ಎಂದಿದ್ದ ಅಧಿಕಾರಿಯಿಂದ ಸ್ಪಷ್ಟನೆ ಪತ್ರವನ್ನೂ ಬರೆಸಿಕೊಂಡಿದ್ದರು.