ಗದಗದ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯುವ ಸರ್ಪ ನಮ್ಮ ಕುಟುಂಬಕ್ಕೆ ಕಚ್ಚುತ್ತದೆ ಎಂದು ಭಯಪಟ್ಟಿದ್ದ ಕುಟುಂಬಕ್ಕೆ ಇದೀಗ ಶುಕ್ರದೆಸೆ ಆರಂಭವಾಗಿದೆ.
ಗದಗ (ಜ.13): ಮನೆ ಪಾಯ ಅಗೆಯುವಾಗ ಸಿಕ್ಕ ಬರೋಬ್ಬರಿ 65 ಲಕ್ಷ ರೂಪಾಯಿಗಿಂದ ಅಧಿಕ ಮೌಲ್ಯದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿ ದೇಶಕ್ಕೇ ಮಾದರಿಯಾಗಿದ್ದ ಲಕ್ಕುಂಡಿಯ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶುರುವಾಗಿದೆ. ನಿಧಿ ಸಿಕ್ಕ ಜಾಗದಲ್ಲಿ ಸರ್ಪವಿರುತ್ತದೆ, ಈ ಜಾಗವೇ ಬೇಡ ನಮಗೆ ಎಂದು ಅಳಲು ತೋಡಿಕೊಂಡಿದ್ದ ಕುಟುಂಬಕ್ಕೀಗ ಶಿಕ್ಷಣದ ಆಶಾಕಿರಣವೊಂದು ಮನೆಬಾಗಿಲಿಗೆ ಬಂದಿದೆ.
ಹೌದು, ಮನೆಯ ಪಾಯ ಅಗೆಯುವಾಗ ಸಿಕ್ಕಿದ್ದ ನಿಧಿಯ ಮೇಲೆ ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿದ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶು ಈಗ ಶೈಕ್ಷಣಿಕ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈ ಪ್ರಾಮಾಣಿಕ ಬಾಲಕನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿವೆ.
ಏನಿದು ಘಟನೆ?
ಕಳೆದ ಮೂರು ದಿನಗಳ ಹಿಂದೆ ಲಕ್ಕುಂಡಿ ಗ್ರಾಮದಲ್ಲಿ ಪ್ರಜ್ವಲ್ ರಿತ್ತಿಯ ಮನೆಯ ಪಾಯ ಅಗೆಯುವಾಗ ಹಳೆಯ ಕಾಲದ ಚೊಂಬಿನಲ್ಲಿ ನಿಧಿ ಪತ್ತೆಯಾಗಿತ್ತು. ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಂಡ ಕೆಲವರು ಇದನ್ನು ಅಡಗಿಸಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ಕಿಂಚಿತ್ತೂ ಆಸೆ ಪಡದ ಬಾಲಕ ಪ್ರಜ್ವಲ್, ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದನು. ಗ್ರಾಮದ ಹಿರಿಯರು ಮತ್ತು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಈ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು.
ಆಧುನಿಕ ಕನಕದಾಸನಿಗೆ ಗೌರವ
ಪ್ರಜ್ವಲ್‌ನ ಈ ಕಾರ್ಯವನ್ನು ಕಂಡ ಗದಗದ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ್ ಅವರು, 'ತಿಮ್ಮಪ್ಪ ನಾಯಕರು ತಮಗೆ ಸಿಕ್ಕ ಹೊನ್ನನ್ನು ಸಾಮಾಜಿಕ ಕಾರ್ಯಕ್ಕೆ ನೀಡಿ ಕನಕದಾಸರಾದರು. ಇಂದು ಅದೇ ಪ್ರಾಂಜಲ ಮನಸ್ಸಿನಿಂದ ಪ್ರಜ್ವಲ್ ಆಧುನಿಕ ಕನಕದಾಸನಾಗಿದ್ದಾನೆ' ಎಂದು ಬಣ್ಣಿಸಿದ್ದಾರೆ. ಕನಕದಾಸ ಶಿಕ್ಷಣ ಸಂಸ್ಥೆಯು ಪ್ರಜ್ವಲ್ ಪದವಿ, ಸ್ನಾತಕೋತ್ತರ ಅಥವಾ ವೃತ್ತಿಪರ ಶಿಕ್ಷಣ ಸೇರಿದಂತೆ ಮುಂದೆ ಎಲ್ಲಿಯವರೆಗೆ ಓದುತ್ತಾನೋ ಅಲ್ಲಿಯವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ.
ಪಿಯು ವರೆಗೆ ಬಿ.ಎಚ್. ಪಾಟೀಲ ಸಂಸ್ಥೆ ಸಾಥ್
ಪ್ರಸ್ತುತ 8ನೇ ತರಗತಿ ಓದುತ್ತಿರುವ ಪ್ರಜ್ವಲ್‌ಗೆ ಬಿ.ಎಚ್. ಪಾಟೀಲ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯವು 8ನೇ ತರಗತಿಯಿಂದ ಪಿಯುಸಿ ವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದೆ. ಸಂಸ್ಥೆಯ ಉಪಾಧ್ಯಕ್ಷ ಸಿದ್ದು ಪಾಟೀಲ ಅವರು ಬಾಲಕನ ಮನೆಗೆ ಭೇಟಿ ನೀಡಿ ಈ ನೆರವನ್ನು ಪ್ರಕಟಿಸಿದ್ದಾರೆ. ಕಡು ಬಡತನದಲ್ಲೂ ಕೋಟಿ ಬೆಲೆಯ ಆಭರಣಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್‌ನ ಪ್ರಾಮಾಣಿಕತೆಗೆ ಈಗ ಇಡೀ ನಾಡು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. 'ಬಂಗಾರಕ್ಕಿಂತ ಮಗುವಿನ ಗುಣವೇ ದೊಡ್ಡದು' ಎಂದು ಲಕ್ಕುಂಡಿ ಗ್ರಾಮಸ್ಥರು ಹೆಮ್ಮೆಯಿಂದ ಹೇಳುತ್ತಿದ್ದಾರೆ.


