ಗದಗ ನಗರದ ನರಸಾಪುರ ಬಳಿ ಕೆಎಸ್ಸಿಎ ವತಿಯಿಂದ ನೂತನ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 12 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಹಾಗೂ ಅಭ್ಯಾಸ ಮೈದಾನಗಳು ತಲೆ ಎತ್ತಲಿವೆ.
ಗದಗ (ನ.17): ಗದಗ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಹಾಗೂ ಯುವ ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಗದಗ ನಗರದ ನರಸಾಪುರ ಬಳಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಕ್ರಿಕೆಟ್ ಮೈದಾನ ನಿರ್ಮಾಣ ಕಾಮಗಾರಿಗೆ ಕೆಎಸ್ಸಿಎ ಅಧ್ಯಕ್ಷ ಹಾಗೂ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಭೂಮಿ ಪೂಜೆ ನೆರವೇರಿಸಿ ಶಂಕುಸ್ಥಾಪನೆ ಮಾಡಿದರು.
12 ಎಕರೆಯಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಗ್ರೌಂಡ್!
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ವೆಂಕಟೇಶ್ ಪ್ರಸಾದ್ ಅವರು, 'ನರಸಾಪುರ ಬಳಿ ನೂತನ ಕ್ರಿಕೆಟ್ ಮೈದಾನಕ್ಕೆ ಭೂಮಿ ಪೂಜೆ ಮಾಡಿದ್ದೇವೆ. ಒಟ್ಟು 12 ಎಕರೆ ಜಮೀನಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಳತೆಯ ಕ್ರಿಕೆಟ್ ಗ್ರೌಂಡ್ ತಲೆ ಎತ್ತಲಿದೆ. ಇಲ್ಲಿ ಪ್ರಾಕ್ಟೀಸ್ ಗ್ರೌಂಡ್ ಸೇರಿದಂತೆ ಕ್ರಿಕೆಟಿಗರಿಗೆ ಅಗತ್ಯವಿರುವ ವಿವಿಧ ಸೌಲಭ್ಯಗಳು ಇರಲಿವೆ" ಎಂದು ಮಾಹಿತಿ ನೀಡಿದರು. ಅಲ್ಲದೆ, "ಶೀಘ್ರದಲ್ಲೇ ಕಾಮಗಾರಿ ಶುರು ಮಾಡಿ ಆದಷ್ಟು ಬೇಗ ಮೈದಾನ ನಿರ್ಮಾಣ ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ" ಎಂದು ಭರವಸೆ ನೀಡಿದರು.
‘ನಾನು ಅಪ್ಪಟ ಕನ್ನಡಿಗ, ಮಣ್ಣಿನ ಮಗ ಅಂತ ಕರೆದ್ರೆ ಖುಷಿ’
ಇದೇ ಸಂದರ್ಭದಲ್ಲಿ ತಮ್ಮ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್, "ನಾನು ಅಪ್ಪಟ ಕನ್ನಡಿಗ. ನನ್ನನ್ನು 'ಮಣ್ಣಿನ ಮಗ' ಅಂತ ಕರೆದರೆ ನನಗೆ ತುಂಬಾ ಖುಷಿಯಾಗುತ್ತದೆ" ಎಂದರು. ಮೈದಾನ ನಿರ್ಮಾಣಕ್ಕೆ ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ್ ಅವರಿಂದ ಸಾಕಷ್ಟು ಸಹಕಾರ ಸಿಕ್ಕಿದೆ ಎಂದು ಸ್ಮರಿಸಿದ ಅವರು, "ಈ ಹಿಂದೆ ಸುನಿಲ್ ಜೋಶಿ ಅವರ ಮನೆಗೆ ಬಂದಿದ್ದೆ. ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಗದಗಕ್ಕೆ ಬಂದಿದ್ದೇನೆ" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.










