ಕೊರೋನಾ ಭೀತಿ ಮಧ್ಯೆ ಕಾರ್ಮಿಕರನ್ನು ಕುರಿಗಳಂತೆ ಸಾಗಿಸಿದ ಅಧಿಕಾರಿಗಳು
ಸಾಮಾಜಿಕ ಅಂತರವಿಲ್ಲದೇ, ಕೋವಿಡ್ ನಿಯಮ ಬಾಹಿರವಾಗಿ ಕಾರ್ಮಿಕರ ರವಾನೆ| ಕೋವಿಡ್ -19ರ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳು| ಗದಗ ನಗರದಿಂದ ಬಿಹಾರಕ್ಕೆ ತೆರಳಬೇಕಿದ್ದ ಕಾರ್ಮಿಕರನ್ನು ನಗರದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಕರೆದುಕೊಂಡ ಹೋಗಬೇಕಿತ್ತು| ಜಿಲ್ಲಾಡಳಿತ ಈ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲ|
ಗದಗ(ಮೇ.21): ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸ ಅರಸಿ ಬಂದು ಜಿಲ್ಲೆಯಲ್ಲಿಯೇ ಲಾಕ್‌ಡೌನ್ ಆಗಿದ್ದ ಬಿಹಾರದ 180ಕ್ಕೂ ಅಧಿಕ ಕಾರ್ಮಿಕರನ್ನು ಬುಧವಾರ ಬೆಳಗ್ಗೆ ಜಿಲ್ಲಾಡಳಿತ ಖಾಸಗಿ ವಾಹನಗಳ ಮೂಲಕ ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಈ ಸಂದರ್ಭದಲ್ಲಿ ಕೋವಿಡ್ -19ರ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿದ್ದಾರೆ.
ಗದಗ ನಗರದಿಂದ ಬಿಹಾರಕ್ಕೆ ತೆರಳಬೇಕಿದ್ದ ಕಾರ್ಮಿಕರನ್ನು ನಗರದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಕರೆದುಕೊಂಡ ಹೋಗಬೇಕಿತ್ತು. ಆದರೆ, ಜಿಲ್ಲಾಡಳಿತ ಈ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ವ್ಯವಸ್ಥೆ, ಕಟ್ಟುನಿಟ್ಟಿನ ಕ್ರಮಗಳನ್ನು ಯಾವ ಅಧಿಕಾರಿಯೂ ನಿರ್ವಹಿಸಲೇ ಇಲ್ಲ. ಯಾವುದೇ ಸಾಮಾಜಿಕ ಅಂತರವೂ ಕಾಣಿಸಲಿಲ್ಲ. ಬದಲಾಗಿ ಕುರಿ ಹಿಂಡನ್ನು ಸಾಗಿಸುವ ಮಾದರಿಯಲ್ಲಿ ಕಾರ್ಮಿಕರನ್ನು ಸಾಗಿ ಹಾಕಲಾಗಿದೆ.
'ಮಾರಕ ಕೊರೋನಾದಿಂದ ಬಡವರ ಬದುಕಿನ ಮೇಲೆ ಘೋರ ಪರಿಣಾಮ'
ಬಸ್ ಪ್ರಾರಂಭವಾದ ಎರಡನೇ ದಿನವೇ ಇಲ್ಲಿನ ಹೊಸ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ತೆರಳಲು ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಸೇರಿದ್ದರು. ಒಂದೇ ಸೀಟಲ್ಲಿ ಇಬ್ಬರು ಕುಳಿತು ಪ್ರಯಾಣಿಸಿದ್ದು ಕಂಡುಬಂದಿತು.