ಬೆಂಗಳೂರು(ಏ.02): ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವ ಪರಮಾಧಿಕಾರ ಇದೆ. ಪ್ರಧಾನಿ ಅವರಾಗಲಿ ಅಥವಾ ಮುಖ್ಯಮಂತ್ರಿ ಆಗಲಿ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಬಾರದಿತ್ತು. ಏನೇ ಇದ್ದರೂ ಪಕ್ಷದ ವಲಯದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು ಎಂದರು.

ಬೆಂಗಳೂರು ನಗರ ಜಿಪಂ ವ್ಯಾಪ್ತಿಗೆ ಬಿಬಿಎಂಪಿಯೂ ಬರುತ್ತದೆ. ಬೀಗರು, ಸಂಬಂಧಿಕರು ಅಂತ 65 ಕೋಟಿ ಅನುದಾನ ಬಿಡುಗಡೆ ಮಾಡಿಲ್ಲ. ಸಂಬಂಧಕ್ಕೂ ಅನುದಾನ ಬಿಡುಗಡೆಗೂ ಸಂಬಂಧ ಇಲ್ಲ. ನಾನು ಸಹ ಬಿಜೆಪಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಜಿಪಂ ಸದಸ್ಯರ ಬೇಡಿಕೆ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಆಗಿತ್ತು. ಈಶ್ವರಪ್ಪ ಅವರಿಗೆ ಮನವಿ ಮಾಡಿದ್ದೆ, ಆದರೆ ಅನುದಾನ ನೀಡಲು ನಿರಾಕರಿಸಿದರು. ಹಾಗಾಗಿ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಿದ್ದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹಣ ಬಿಡುಗಡೆ ಮಾಡಿದ್ದರು. ಗ್ರಾಮೀಣಾಭಿವೃದ್ಧಿ ಇಲಾಖೆಗೂ ಅನುದಾನಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದರು.

ಸಿಎಂ ಈ ನಡೆ ನೋವು ತಂದಿದೆ; ಹೈಕಮಾಂಡ್‌ಗೆ ಈಶ್ವರಪ್ಪ ದೂರು

ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಡಬಾರದಿತ್ತು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬಹುದಿತ್ತು. ಮುಖ್ಯಮಂತ್ರಿ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು. ಈಶ್ವರಪ್ಪ ತಮ್ಮ ಇಲಾಖೆಯಡಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಅನುದಾನ ತಡೆ ನಿರ್ಧಾರ ರದ್ದು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ಇದೆ. ರಾಜ್ಯದ ಮುಖ್ಯಮಂತ್ರಿ ಇಲಾಖೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದರಲ್ಲಿ ತಪ್ಪೇನಿದೆ? ಮೈತ್ರಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರು ಹೋರಾಡಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಸಮಸ್ಯೆ ಏನೇ ಇದ್ದರೂ ಈಶ್ವರಪ್ಪ ಅವರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಈಶ್ವರಪ್ಪ ಹಿರಿಯರು, ಅರ್ಥ ಮಾಡಿಕೊಳ್ಳಬೇಕು ಎಂದರು.