ಶೇಷಮೂರ್ತಿ ಅವಧಾನಿ 

ಕಲಬುರಗಿ(ಜ.29): ಕಲಬುರಗಿ ನುಡಿ ಜಾತ್ರೆಯಿದೆ ಬನ್ನಿರೆಂದು ನಗರದಲ್ಲಿರುವ ಜಾಹೀರಾತು ಸಂಸ್ಥೆಗಳು, ಬಟ್ಟೆ ಅಂಗಡಿಗಳು ಸೇರಿದಂತೆ ಇತರೆ ಮಳಿಗೆ, ಮುಂಗಟ್ಟಿನವರನ್ನೆಲ್ಲ ಒಳಗೊಂಡು ಪ್ರಚಾರ, ನಗರ ಅಲಂಕಾರಕ್ಕೆ ಭರದ ಕಾರ್ಯಗಳೇನೋ ಸಾಗಿವೆ, ಆದರೆ ಈ ಪ್ರಚಾರ ಭರಾಟೆಯಲ್ಲಿ ಯಡವಟ್ಟುಗಳು ಜೋರಾಗಿಯೇ ಕಣ್ಣಿಗೆ ರಾಚುತ್ತಿವೆ. 

ಸಮ್ಮೇಳನಕ್ಕಾಗಿ ನಗರದ ಅಂದ, ಚೆಂದ ಹೆಚ್ಚಿಸುವಂತಹ ಪ್ರಚಾರಕ್ಕೆ ಯೋಜನೆ ರೂಪಿಸಲು ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ ಹಾಗೂ ಸ್ಥಳೀಯ ಪಾಲಿಕೆ ಸಹಯೋಗದಲ್ಲಿ ಸಮಿತಿ ರಚನೆಯಾಗಿದೆ. ಆದರೆ ಅಲಂಕಾರ ಸಮಿತಿ ಧೋರಣೆ ನಗರದ ಅಂದ, ಚೆಂದ ಅಂದಗೆಡುವಂತೆ ಮಾಡುತ್ತಿದೆಯೆ?, ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಬಿಟ್ಟಿ ಪ್ರಚಾರಕ್ಕೆ ಅವಕಾಶದ ಹೆಬ್ಬಾಗಿಲು ತೆರೆದಂತಾಗಿದೆಯೆ? ಎಂಬ ಶಂಕೆಗಳು ಉದ್ಭವವಾಗಿವೆ. 

ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ!

ನಗರದ ಮುಖ್ಯ ವೃತ್ತ, ವಾಹನ, ಜನ ಸಂಚಾರವಿರುವ ಜಗತ್ ಪ್ರದೇಶದಲ್ಲಿ ಸ್ಥಳೀಯ ಜಾಹೀರಾತು ಸಂಸ್ಥೆಯೊಂದು ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತಿಸುವ ಪಲಕ ಅಳವಡಿಸಿದೆ. ಈ ಫಲಕಲ್ಲಿ ಶೇ.30 ರಷ್ಟು ಮಾತ್ರ ಸಮ್ಮೇಳನಕ್ಕಾಗಿ ಜಾಗ ಬಳಕೆಯಾಗಿದೆ. ಉಳಿದೆಲ್ಲ ಜಾಗವನ್ನ ಸಂಸ್ಥೆಯೇ ವ್ಯಾಪಿಸಿದ್ದು ಔಟ್ ಡೋರ್ ಅಡ್ವರಟೈಸಿಂಗ್ ಏಜನ್ಸಿ ಎಂದು ಢಾಳವಾಗಿ ಹೆಸರು ನಮೂದಿಸಿಕೊಂಡು ತನ್ನದೇ ಜಾಹೀರಾತು ಮಾಡಿಕೊಂಡಿದೆ. 

ಇತ್ತ ಪಟೇಲ್ ವೃತ್ತದತ್ತ ಸಾಗುವಾಗ ಬರುವ ಜೆಸ್ಕಾಂ ಕಾರ್ಪೊರೇಟ್ ಕಚೇರಿ ಗೋಡೆಗೂ ಪಾಲಿಕೆ ಬಣ್ಣದ ಬರಹ ಬರೆಸುತ್ತಿದೆ. ಇಲ್ಲಿಯೂ ಅಲಂಕಾರ ಸಮಿತಿ ಪರವಾನಿಗೆಯಂತೆ ಸ್ಥಳೀಯ ಬಟ್ಟೆ ವರ್ತಕರು ಗೋಡೆ ಅಲಂಕಾರದ ಹೊಣೆಯನ್ನೇನೋ ಹೊತ್ತಿದ್ದಾರೆ. ಆದರೆ ಸಮ್ಮೇಳನಕ್ಕಾಗಿ ನಡೆಸಲಾಗುತ್ತಿರುವ ಅಲಂಕಾರಕ್ಕಿಂತ ತಮ್ಮ ಅಂಗಡಿ ಪ್ರಚಾರಕ್ಕೆ ಆದ್ಯತೆ ನೀಡಿದ್ದಾರೆ. ಯಾಕೆ ಹೀಗೆ ಎಂದು ಅಲಂಕಾರ ಸಮಿತಿ ಅಧ್ಯಕ್ಷರಾದ ಜಿಪ ಅಧ್ಯಕ್ಷೆ ಸುವರ್ಣ ಮಲಾಜಿ ಅವರಿಗೆ ಪ್ರಶ್ನಿಸಿದರೆ ಅಯ್ಯೋ ಸಾರ್, ನಾವು ಅವರಿಗೇನ್ ಹಣ ನೀಡಿಲ್ಲ ಬಿಡ್ರಿ, ಅವರಿಗೆ ನಗರ ಅಲಂಕಾರ ಮಾಡಿಕೊಡಿರಿ ಎಂಬ ಜವಾಬ್ದಾರಿ ವಹಿಸಿಕೊಡಲಾಗಿದೆ. ಅವರು ತಮ್ಮ ಮಳಿಗೆ, ವಹಿವಾಟಿನ ಪ್ರಚಾರದ ಜೊತೆಗೆ ಸಾಹಿತ್ಯ ಸಮ್ಮೇಳನದ ಪ್ರಚಾರ, ಅಲಂಕಾರದ ಈ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ತಮ್ಮ ಪಾಡಿಗೆ ತಾವಿದ್ದಾರೆ. 

ಅನ್ನಕ್ಕಿಂತ ತೊವ್ವೆ ಜಾಸ್ತಿ!:

ಇಂತಹ ಕೆಲಸಕ್ಕೆ ಯಾರಿಗೂ ಹಣ ಅಲಂಕಾರ ಸಮಿತಿ ಕೊಟ್ಟಿರಲಿಕ್ಕಿಲ್ಲ. ಆದರೆ ಹಣ ಕೊಟ್ಟಿಲ್ಲವೆಂದ ಮಾತ್ರಕ್ಕೆ ‘ಅನ್ನಕ್ಕಿಂತ ತೊವ್ವೆನೇ ಹೆಚ್ಚಾಯ್ತು, ಮಂತ್ರಕ್ಕಿಂತ ಉಗುಳೇ ಅತಿಯಾಯ್ತು’ ಎಂಬ ಗಾದೆ ಮಾತಿನಂತೆ ಸಾಹಿತ್ಯ ಸಮ್ಮೇಳನ ಪ್ರಚಾರ ಸರಕಿಗಿಂತ ಖಾಸಗಿ ಸಂಸ್ಥೆಗಳ ಪ್ರಚಾರ ಕಣ್ಣಿಗೆ ಕುಕ್ಕುವಂತೆ ರಾರಾಜಿಸಿದರೂ ಅಲಂಕಾರ ಸಮಿತಿ ಕೈಕಟ್ಟಿ ಕುಳಿತಂತಿದೆ. ವಿಷಯ ಹಣಕಾಸಿಂದಲ್ಲ, ಸಾಹಿತ್ಯ ಸಮ್ಮೇಳನಕ್ಕೆ ಹೊರಗಡೆಯಿಂದ ನಗರಕ್ಕೆ ಬರುವವರಿಗೆ ನಮ್ಮ ನಗರ ಸುಂದರ ಎಂದು ಬಿಂಬಿಸಲು ಇಲ್ಲಿನ ಸಾಹಿತ್ಯ, ವಾಸ್ತುಶಿಲ್ಪ, ಇತ್ಯಾದಿ ಗತವೈಭವ ಸಾರುವ ಫಲಕಗಳು, ಮಾಹಿತಿಗಳನ್ನೆಲ್ಲ ಗೋಡೆಗಳು ಹೊತ್ತು ನಿಲ್ಲಬೇಕಾಗಿತ್ತು. ಆದರಿಲ್ಲಿ ಇದೆಲ್ಲವೂ ಉಲ್ಟಾ ಹೊಡೆದಂತಿದೆ. ಮುಖ್ಯ ರಸ್ತೆಯ ಗೋಡೆಗಳಲ್ಲಿ, ಫಲಕಗಳಲ್ಲಿ ಸಾಹಿತ್ಯ ಸಮ್ಮೇಳನದ ವಿವರಗಳಿಗಿಂತ, ನಗರ ಇತಿಹಾಸದ ಮಾಹಿತಿಗಿಂತ ಹೆಚ್ಚು ಅದನ್ನು ಅಳವಡಿಸುತ್ತಿರುವವರ ಪ್ರಚಾರವೇ ಅದ್ಧೂರಿಯಾಗಿ ಸಾಗಿದೆ. ಗೋಡೆಗಳು, ಭಿತ್ತಿಫಲಕಗಳು, ವಿದ್ಯುತ್ ಕಂಬದ ಫಲಕಗಳು ಕಣ್ಣಿಗೆ ರಾಚುತ್ತಿದ್ದರೂ ಸಂಬಂಧಪಟ್ಟವರು ಯಾರೊಬ್ಬರೂ ಗಮನ ಹರಿಸಿಲ್ಲ ಎಂಬುದೇ ಸೋಜಿಗದ ಸಂಗತಿ.

ಸಾಹಿತ್ಯ ಸಮ್ಮೇಳನ: ಕಚ್ಚಾಡುವರನ್ನು ಕೂಡಿಸಿ ‘ಕನ್ನಡ ಡಿಂಡಿಮ’ ಬಾರಿಸುತ್ತಿರುವೆ

ಅಳತೆ, ಆಕಾರ ಇರಲೇಬೇಕಲ್ಲವೆ? ಸಾಹಿತ್ಯ ಸಮ್ಮೇಳನದ ಖರ್ಚು, ವೆಚ್ಚ ತಗ್ಗಿಸಲು ಖಾಸಗಿ ಸಹಭಾಗಿತ್ವ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸಲೇಬೇಕು ಎಂಬುದು ನಿಜ. ಆದರೆ ಈ ಹೆಸರಲ್ಲಿ ಖಾಸಗಿಯವರೇ ಸಾಹಿತ್ಯ ಸಮ್ಮೇಳನಕ್ಕಿಂತ ತಮ್ಮದೇ ಸರಕಿನ ಪ್ರಚಾರದೊಂದಿಗೆ ಇಡೀ ಸಮ್ಮೇಳನದ ಅಂದ, ಚೆಂದ ಅಂದಗೆಡುವಂತೆ ಮಾಡಿದರೆ ಸಹಿಸಿಕೊಂಡು ಇರಲು ಸಾಧ್ಯವೆ? ಎಂಬುದು ಈಗ ಬಹುವಾಗಿ ಚರ್ಚೆಯಲ್ಲಿರುವ ಸಂಗತಿ. 
ಕೆಲವು ಫಲಕಗಳನ್ನು ಕಂಡರೆ ಅದರಲ್ಲಿ ಸಮ್ಮೇಳನದ ಲಾಂಛನ ಭೂತಗನ್ನಡಿ ಹಿಡಿದು ಹುಡುಕುವಂತಾಗಿದ್ದರೆ ಇನ್ನೂ ಹಲವು ಗೋಡೆ ಬರಹಗಳಲ್ಲಿ ಸಮ್ಮೇಳನಕ್ಕೆ ಬನ್ನಿ ಎಂಬ ಸಂದೇಶಕ್ಕಿಂತ ಬಟ್ಟೆ, ಬರೆ ಅಂಗಡಿಗಳ ಬಿಸಿನೆಸ್ ಸಂಬಂಧಿತ ವಿಳಾಸಗಳೇ ರಾಚುತ್ತಿವೆ. 

ಆಹ್ವಾನ ಪತ್ರಿಕೆಯಲ್ಲಿ ನುಸುಳಿದ ತಪ್ಪುಗಳು! 

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮುದ್ರಿಸಲಾದ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರುಗಳೇ ತಪ್ಪಾಗಿ ಪ್ರಕಟವಾಗಿ ಸುದ್ದಿಯಾಗಿದೆ. ಕಮಿಷನರ್ ಹೆಸರು ಡಾ. ಎಂ.ಎನ್. ನಾಗರಾಜ. ಆದರೆ, ಎಂ.ಎಸ್. ನಾಗರಾಜ ಎಂದು ತಪ್ಪಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರು ಯಡಾ ಮಾರ್ಟಿನ್ ಮಾರ್ಬನ್ಯಾಂಗ್. ಆದರೆ, ಯಡಾ ಮಾರ್ಟಿನ್ಯಾಂಗ್’ ಎಂದು ಬರೆಯಲಾಗಿದೆ. ಇಂತಹ ತಪ್ಪು ಪತ್ರಿಕೆ ಮುದ್ರಿಸುವ ಮೂಲಕ ಪರಿಷತ್ತಿನ ಕನ್ನಡ ಪ್ರೇಮ ಅನಾವರಣಗೊಂಡಿದೆ ಎಂದು ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಟೀಕಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಲಬುರಗಿ ಕಸಾಪ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರು ಪಿ.ಎಂ. ಮಣ್ಣೂರ ಅವರು, ನಗರದಲ್ಲಿ ಸಮ್ಮೇಳನದ ಹೆಸರಲ್ಲಿ ನಡೆಯುತ್ತಿರುವ ಅಲಂಕಾರ ಕೆಲಸದಲ್ಲಿ ಸಮ್ಮೇಳನದ ಮಾಹಿತಿಗಿಂತ ಖಾಸಗಿಯವರ ಪ್ರಚಾರವೇ ಹೆಚ್ಚಾಗಿದೆ. ಗೋಡೆ ಬರಹ, ಫಲಕಗಳಲ್ಲಿ ಸಾಹಿತ್ಯ ಸಮ್ಮೇಳನದ ಮಾಹಿತಿಗಿಂತ ಸಂಸ್ಥೆಗಳ ಜಾಹೀರಾತು ಸರಕೇ ಹೆಚ್ಚಿದ್ದು ಅವು ನೋಡಲಿಕ್ಕೂ ಹೇಸಿಗೆ ಬರುವಂತಾಗಿದೆ. ಯಾಕೆ ಸ್ಥಳೀಯ ಕಸಾಪ, ಜಿಲ್ಲಾಡಳಿತ ಇಂತಹ ಪ್ರಚಾರಕ್ಕೆ ಮುಂದಾಗಿದೆಯೋ? ಸಮ್ಮೇಳನದ ಹೆಸರಲ್ಲಿ ಸಾಗಿರುವ ಬಿಟ್ಟಿ ಪ್ರಚಾರಕ್ಕೆ ಕಡಿವಾಣ ಬೀಳಲೇಬೇಕು ಎಂದು ತಿಳಿಸಿದ್ದಾರೆ.