ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ!
ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ| ಮೈಸೂರಿನ 13500 ಪ್ರತಿನಿಧಿಗಳ ದಾಖಲೆ ಮೀರಿ ನೋಂದಣಿ| ಸಿಲನಾಡಿನಲ್ಲಿ ಫೆ.5ರಿಂದ ನಡೆಯುವ 85ನೇ ಸಮ್ಮೇಳನ
ಶೇಷಮೂರ್ತಿ ಅವಧಾನಿ
ಕಲಬುರಗಿ[ಜ.25]: ಬಿಸಿಲನಾಡು ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದ ಎಲ್ಲ ಮೂಲೆಗಳಿಂದ ಸಾಹಿತ್ಯಾಸಕ್ತರು ಮುಗಿಬಿದ್ದಿದ್ದು ದಾಖಲೆಯ 20,284 ಮಂದಿ ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಜ.14ಕ್ಕೆ ನೋಂದಣಿ ಮಾಡಲು ಕೊನೆಯ ದಿನವಾಗಿತ್ತು. ಅಂತಿಮವಾಗಿ ನೋಂದಣಿಯಾದವರಲ್ಲಿ 13,561 ಪುರುಷರು, 5, 291 ಮಹಿಳೆಯರು ಸೇರಿದ್ದಾರೆ.
ಸಾಹಿತ್ಯ ಸಮ್ಮೇಳನದ ಪ್ರತನಿಧಿಗಳ ಸಂಖ್ಯೆ 20 ಸಾವಿರದ ಗಡಿ ದಾಟಿರುವುದು ಇದೇ ಮೊದಲಾಗಿದೆ. ಕಸಾಪ ಮೂಲಗಳಿಂದ ಕನ್ನಡಪ್ರಭಕ್ಕೆ ಲಭ್ಯ ದಾಖಲೆಗಳ ಪ್ರಕಾರ, ಕಳೆದ ವರ್ಷ ಧಾರವಾಡದಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳನದಲ್ಲಿ 13,500 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡದ್ದೇ ಅತಿ ದೊಡ್ಡ ಸಂಖ್ಯೆಯಾಗಿತ್ತು. ಆತಿಥೇಯ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 2,494 ಪ್ರತಿನಿಧಿಗಳ ನೋಂದಣಿಯಾಗಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದೂ ನೋಂದಣಿ ಆಗಿಲ್ಲ. ಅದೇ ರೀತಿ ಕರಾವಳಿ ಭಾಗದ ಇನ್ನೊಂದು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ.
ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ: 85ನೇ ನುಡಿಜಾತ್ರೆಗೆ ಕಾಣದ 58ರ ಸಂಭ್ರಮ
ಏನಿದು ಯೋಜನೆ?
ಸಮ್ಮೇಳನದ ಮೂರು ದಿನವೂ ಪಾಲ್ಗೊಳ್ಳುವವರಿಗಾಗಿ ಮುಂಗಡ ನೊಂದಣಿಗಾಗಿ ರೂಪಿಸಿರುವ ಯೋಜನೆ ಇದು. ಆಸಕ್ತರು ನಿಗದಿತ ಶುಲ್ಕ .250 ಭರಿಸಿ ಹೆಸರು ನೋಂದಣಿ ಮಾಡಿರಬೇಕು. ನೋಂದಾಯಿತರು ಸರ್ಕಾರಿ ನೌಕರರಾಗಿದ್ದರೆ ಅವರಿಗೆ ಓಓಡಿ ಸವಲತ್ತು ಕೊಡಲಾಗುತ್ತದೆ. ಸಮ್ಮೇಳನದಲ್ಲಿ ವಸತಿ(ಕಲಬುರಗಿಯವರಿಗೆ ವಸತಿ ವ್ಯವಸ್ಥೆ ಇಲ್ಲ) ಊಟದ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳು ಸಿಗಲಿವೆ.
ಜಿಲ್ಲಾವಾರು ನೋಂದಾಯಿತರು
ಕಲಬುರಗಿ-2,494, ಮೈಸೂರು-1174, ಉತ್ತರ ಕನ್ನಡ-15, ರಾಯಚೂರು-1400, ಯಾದಗಿರಿ-980, ಬೆಂಗಳೂರು ಗ್ರಾಮಾಂತರ-200, ರಾಮನಗರ-500, ಕೋಲಾರ-100, ಚಿತ್ರದುರ್ಗ-600, ಚಿಕ್ಕಬಳ್ಳಾಪುರ-371, ತುಮಕೂರು- 1500, ದಾವಣಗೆರೆ-600, ಶಿವಮೊಗ್ಗ-540, ಗದಗ-688, ಕೊಪ್ಪಳ-834, ಬಳ್ಳಾರಿ-700, ಮೈಸೂರು-1174, ಚಾಮರಾಜ ನಗರ-460, ಮಂಡ್ಯ-800, ಹಾಸನ-800, ಕೊಡಗು-55, ಚಿಕ್ಕಮಗಳೂರು-500, ಉಡುಪಿ- 55, ಬೆಳಗಾವಿ-200, ವಿಜಯಪುರ-700, ಬಾಗಲಕೋಟೆ-886, ಹುಬ್ಬಳ್ಳಿ- 500, ಹಾವೇರಿ-800
ಕಲಬುರಗಿ: 85ನೇ ಸಾಹಿತ್ಯ ಸಮ್ಮೇಳನಕ್ಕೆ ವಸತಿ ಸೌಲಭ್ಯದ್ದೇ ಚಿಂತೆ!