ಗೋಕಾಕ[ಜೂ.14]: ಅಂಗನವಾಡಿ ಶಿಕ್ಷಕಿಯೊಬ್ಬಳು ಮೂರು ವರ್ಷದ ಬಾಲಕನೊಬ್ಬನಿಗೆ ಚಮಚಾದಿಂದ ಬರೆ ಹಾಕಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

ಗೋಕಾಕ ಪಟ್ಟಣದ ಮಾಲದಾರ ಗಲ್ಲಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜೂ.11ರಂದು ಈ ಘಟನೆ ನಡೆದಿದೆ. ಮಗು ಅಳುತ್ತಿರುವ ಕಾರಣಕ್ಕೆ ಅಂಗನವಾಡಿ ಶಿಕ್ಷಕಿ ರೇಣುಕಾ ಅಂಬಿ ಅಲ್ಲೇ ಇದ್ದ ಚಮಚಾವನ್ನು ಕಾಯಿಸಿ ಮಗುವಿನ ಕೈಗೆ ಬರೆ ಎಳೆದಿದ್ದಾಳೆ. ನಂತರ ಮಗು ಅಳುತ್ತಾ ಮನೆಗೆ ಓಡಿಹೋಗಿದೆ. ಅಳುತ್ತಿರುವ ಮಗುವನ್ನು ಪೋಷಕರು ವಿಚಾರಿಸಿದಾಗ ಮಗುವಿನ ಕೈಗೆ ಬರೆ ಬಿದ್ದಿರುವುದು ಕಂಡುಬಂದಿದೆ. ಪೋಷಕರು ಅಂಗನವಾಡಿ ಕೇಂದ್ರಕ್ಕೆ ಹೋಗಿ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಅಲ್ಲಿನ ಸಾರ್ವಜನಿಕರು ಕೂಡ ಶಿಕ್ಷಕಿಯ ವರ್ತನೆ ಖಂಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಪೋಷಕರು ಮಗುವಿಗೆ ಅಂಗನವಾಡಿ ಶಿಕ್ಷಕಿ ಬರೆ ಎಳೆದಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಶಿಕ್ಷಕಿ ವಿರುದ್ಧ ದೂರು ಕೂಡ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಪೋಷಕರೊಟ್ಟಿಗೆ ಮಗುವನ್ನು ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಮಗುವನ್ನು ಕಟ್ಟಿಹಾಕಿ ಬರೆ ಎಳೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಶಿಕ್ಷಕಿ ರೇಣುಕಾ ಅಂಬಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ ಮಗುವಿಗೆ ಮೊದಲೇ ಗಾಯವಾಗಿತ್ತು, ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದು ರೇಣುಕಾ ತಿಳಿಸಿದ್ದಾರೆ.